ಕ್ಯಾಂಟರ್‌ ಲಾರಿ ಹಾಗೂ ಸ್ವಿಪ್ಟ್‌ ಕಾರಿನ ಮಧ್ಯೆ ನಡೆದ ಭೀಕರ ಅಪಘಾತಕ್ಕೆ ಕಾರಿನಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನವಲಗುಂದ ತಾಲೂಕಿನ ಅಮರಗೋಳ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ನವಲಗುಂದ:

ಕ್ಯಾಂಟರ್‌ ಲಾರಿ ಹಾಗೂ ಸ್ವಿಪ್ಟ್‌ ಕಾರಿನ ಮಧ್ಯೆ ನಡೆದ ಭೀಕರ ಅಪಘಾತಕ್ಕೆ ಕಾರಿನಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನವಲಗುಂದ ತಾಲೂಕಿನ ಅಮರಗೋಳ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಮೃತರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮದಗಾಣ ಗ್ರಾಮದ ಅಜೀತ್‌ ಪ್ರಭು ಅಲ್ಲಾಪುರ (38), ಚಡಚಣ ತಾಲೂಕಿನ ಬರ್ಡೋಲಿ ಗ್ರಾಮದ ರಾಕೇಶ ಅನಿಲ ಭೋಸ್ಲೆ (22), ಅದೇ ಗ್ರಾಮದ ಸಂದೀಪ ಗಣಪತಿ ಶಿಂಧೆ (33) ಹಾಗೂ ಸಾಗರ ತಾಲೂಕಿನ ಶಿರವಾಳ ಗ್ರಾಮದ ಶ್ರುತಿ ನವೀನಕುಮಾರ ಎಸ್ ಜಿ. (28) ಮೃತರು.

ಈ ನಾಲ್ವರು ಹುಬ್ಬಳ್ಳಿಯಿಂದ ವಿಜಯಪುರ ಮಾರ್ಗವಾಗಿ ಇಂಡಿಗೆ ಕಾರಿನಲ್ಲಿ ತೆರಳುತ್ತಿದ್ದರು. ಬೆಳಗಿನ ಜಾವ ನಿದ್ದೆಯ ಮಂಪರಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ರವಿ ಕಪ್ಪತ್ತನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.