ಸಾರಾಂಶ
ಡಿವಿಜಿ ನೆನಪು ಕಾರ್ಯಕ್ರಮ । ಗುಂಡಪ್ಪನವರ ಸ್ಮರಣೆ । ಮುಂದೆ ಪ್ರತಿ ಜಿಲ್ಲೆಯಲ್ಲಿ ಸಮಾರಂಭ
ಕನ್ನಡಪ್ರಭ ವಾರ್ತೆ ಹಾಸನಪತ್ರಿಕೋದ್ಯಮ ಮಾತ್ರವಲ್ಲದೇ ಸಾಹಿತ್ಯದ ಜತೆಗೆ ಕನ್ನಡ ನಾಡಿಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿರುವ ಡಿ.ವಿ.ಗುಂಡಪ್ಪ ಅವರನ್ನು ನೆನಪು ಮಾಡಿಕೊಳ್ಳುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ. ಶಿವಾನಂದ ತಗಡೂರು ಶ್ಲಾಘಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಂಡ ‘ಡಿವಿಜಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ‘ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಕೂಡ ಒಂದು ವರ್ಷಗಳ ಕಾಲ ನಡೆಯಲಿದೆ. ಈ ಬಗ್ಗೆ ರಾಜ್ಯ ಸಂಘ ತೀರ್ಮಾನ ಕೈಗೊಂಡಿದ್ದು, ಅದಕ್ಕೆ ಈ ಜಿಲ್ಲೆಯಿಂದಲೇ ಚಾಲನೆ ಸಿಕ್ಕಿರುವುದು ಸಂತೋಷ ತಂದಿದೆ. ಡಿವಿಜಿ ಅವರದು ಬೆರಗುಗೊಳಿಸುವ ವ್ಯಕ್ತಿತ್ವ, ಕೋಲಾರದ ಮುಳಬಾಗಿಲಲ್ಲಿರುವ ಅವರ ಮನೆ ಈಗ ಶಾಲೆ, ಗ್ರಂಥಾಲಯವಾಗಿದೆ. ಅವರಿದ್ದ ವಾಸದ ಮನೆಯನ್ನು ಶಾಲೆಗೆ ದಾನ ಮಾಡಿದ್ದರು. ಡಿವಿಜಿ ಅವರು ಪತ್ರಕರ್ತರ ಸಂಘ ಹುಟ್ಟುಹಾಕಿ, ಸಂಘಟನೆ ಮಾಡದಿದ್ದರೆ ಈ ಸಂಘಟನೆ ಇಂದು ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ’ ಎಂದು ಹೇಳಿದರು.‘೧೯೩೬ ರಲ್ಲಿ ಮೈಸೂರು ರಾಜ್ಯ ಪತ್ರಕರ್ತರ ಸಂಘ ಆರಂಭಿಸಿದಾಗ ಕೇವಲ ಐದಾರು ಜನ ಇದ್ದರು. ಇಂದು ಎಲ್ಲೆಡೆ ಬಲಿಷ್ಠವಾಗಿ ಇಂದು ೯ ಸಾವಿರ ಸದಸ್ಯರನ್ನು ಹೊಂದಿರುವ ದೇಶದ ದೊಡ್ಡ ಸಂಘಟನೆ ಎನಿಸಿದೆ. ಪತ್ರಿಕೋದ್ಯಮ ಜೊತೆಯಲ್ಲೇ ಪ್ರಖರ ಪಾಂಡಿತ್ಯ ಹೊಂದಿ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಜನಪ್ರಿಯ ಮಂಕುತಿಮ್ಮನ ಕಗ್ಗ ಕೃತಿ ಓದಿದರೆ ಎಲ್ಲಿಲ್ಲದ ಸ್ಫೂರ್ತಿ ಬರಲಿದೆ. ನಾನು ಮೊದಲು ಪತ್ರಕರ್ತ, ಆಮೇಲೆ ಸಾಹಿತಿ ಎಂದು ಡಿವಿಜಿ ಹೇಳಿದ್ದರು’ ಎಂದು ನೆನಪು ಮಾಡಿಕೊಂಡರು.
‘ಡಿವಿಡಿ ಅವರ ಸಲಹೆ ಸೂಚನೆ ಪಡೆಯಲು ಸಿಎಂ, ಕೇಂದ್ರ ಸಚಿವರೇ ಮನೆ ಹೋಗುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಅನೇಕರು ನೀಡಿದ ಆರ್ಥಿಕ ಸಹಾಯದ ಚೆಕ್‌ಗಳನ್ನು ಟ್ರಂಕ್‌ನಲ್ಲಿ ತುಂಬಿದ್ದುದು ಅವರು ಸತ್ತ ನಂತರ ತಿಳಿಯಿತು. ಅಷ್ಟು ಸ್ವಾಭಿಮಾನ, ನಿಷ್ಠೆಯನ್ನು ಡಿವಿಜಿ ಹೊಂದಿದ್ದರು’ ಎಂದು ಹೇಳಿದರು.ಹಿರಿಯ ಪತ್ರಕರ್ತರ ಶೇಷಾದ್ರಿ ಅವರು ಮಾತನಾಡಿ, ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಇವರು ಪತ್ರಕರ್ತರ ಸಂಘದ ಸಂಸ್ಥಾಪಕರು. ಇವರ ಹಾಕಿಕೊಟ್ಟ ಅಡಿಪಾಯದಲ್ಲಿ ಇಂದು ಸಂಘ ಹೆಮ್ಮರವಾಗಿ ಬೆಳೆಯುತ್ತಿದೆ. ಇಂಥವರ ನೆನಪಿನ ಕಾರ್ಯಕ್ರಮವನ್ನು ಮಾಡುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಶಿವಾನಂದ ತಗಡೂರು ಹಾಗೂ ವಿವಿಧ ಅಭಿಮಾನಿಗಳು ನೂತನ ಜಿಲ್ಲಾಧ್ಯಕ್ಷ ಕೆ.ಎಚ್.ವೇಣುಕುಮಾರ್ ಅವರನ್ನು ಅಭಿನಂದಿಸಿದರು.ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ. ಮದನಗೌಡ, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ, ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಬಿ.ಆರ್.ಉದಯ ಕುಮಾರ್, ಎಂ.ವಿ.ಶಿವರಾಂ, ಸಂಘದ ನೂತನ ಜಿಲ್ಲಾ ಅಧ್ಯಕ್ಷ ಕೆ.ಎಚ್. ವೇಣುಗೋಪಾಲ್, ಹೆತ್ತೂರು ನಾಗರಾಜ್, ಕೆ.ಎಂ.ಹರೀಶ್, ಕೆ.ಪಿ.ಎಸ್.ಪ್ರಮೋದ್, ಬಿ.ಆರ್. ಮಂಜುನಾಥ್, ಮೋಹನ್ ಕುಮಾರ್, ಪ್ರಕಾಶ್ ಇದ್ದರು.