ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಯ ೭ನೇ ವರ್ಷದ ಜಾತ್ರಾ ಮಹೋತ್ಸವ ಜ. ೨೦ರಿಂದ ವಿಜೃಂಭಣೆಯಿಂದ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಯ ೭ನೇ ವರ್ಷದ ಜಾತ್ರಾ ಮಹೋತ್ಸವ ಜ. ೨೦ರಿಂದ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಕಮಿಟಿ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಜರುಗಿದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಪ್ರದಾಯದಂತೆ ಜ. ೨೦ ಮತ್ತು ೨೧ರಂದು ದೇವಿಯ ಗ್ರಾಮ ಸಂಚಾರ ಕಾರ್ಯಕ್ರಮ ನಡೆಯಲಿದ್ದು, ಜ. ೨೨ರಂದು ದೇವಿಗೆ ಗುಡಿ ತುಂಬುವ ಕಾರ್ಯಕ್ರಮವು ನಡೆಯಲಿದೆ. ೩ ದಿನಗಳ ಕಾಲ ವಿವಿಧ ಕರ‍್ಯಕ್ರಮಗಳು, ಪಟ್ಟಣದಲ್ಲಿಯ ಪ್ರತಿಭಾನ್ವಿತರನ್ನು ಗೌರವಿಸುವ ಕರ‍್ಯಕ್ರಮಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ.

ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ಸಹ ರಚಿಸಲಾಗುವುದು. ಪಟ್ಟಣದ ಎಲ್ಲ ಸಮಾಜದವರು ಜಾತ್ರೆಯ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯಲಿರುವ ದ್ಯಾಮವ್ವ ದೇವಿ ಜಾತ್ರೆ ಮಹೋತ್ಸವಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಸಾರ್ವಜನಿಕರ ಸಹಕಾರದೊಂದಿಗೆ ನಡೆಯುತ್ತಲಿದ್ದು, ಎಲ್ಲ ಭಕ್ತ ಸಮೂಹದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಪಟ್ಟಣವನ್ನು ತಳಿರು ತೋರಣಗಳಿಂದ ಶೃಂಗರಿಸಿ ಮನೆಯ ಅಂಗಳವನ್ನು ಸ್ವಚ್ಛವಾಗಿಡಬೇಕು. ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಸಂದರ್ಭ ಕೆಲ ಭಕ್ತರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಜಾತ್ರಾ ಕಮಿಟಿ ಅಧ್ಯಕ್ಷ ಅಜ್ಜುಗೌಡ ಪಾಟೀಲ, ಮಾನಪ್ಪ ಬಡಿಗೇರ, ದೇವಪ್ಪ ಬಡಿಗೇರ, ಈಶ್ವರ ಬಡಿಗೇರ, ಕಾಳಪ್ಪ ಬಡಿಗೇರ, ಮುತ್ತು ಬಡಿಗೇರ, ಸಿದ್ದು ಪಾಟೀಲ, ಸಿ.ಸಿ. ನೂರಶೆಟ್ಟರ, ಹುಮಾಯೂನ್ ಮಾಗಡಿ, ನಾಗರಾಜ ಲಕ್ಕುಂಡಿ, ಬಸವರಾಜ ಹೊಸೂರ, ಎಂ.ಕೆ. ಲಮಾಣಿ, ಎಚ್.ಎಂ. ದೇವಗಿರಿ, ಹೊನ್ನಪ್ಪ ಶಿರಹಟ್ಟಿ, ಬಸವರಾಜ ಭೋರಶೆಟ್ಟರ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಮಹಾಂತೇಶ ದಶಮನಿ, ವಾಮನ ಭೋರಶೆಟ್ಟರ, ಬಸವರಾಜ ತುಳಿ, ಯಲ್ಲಪ್ಪ ಇಂಗಳಗಿ, ಅಶೋಕ ವರವಿ, ಬಸವರಾಜ ಚಿಕ್ಕತೋಟದ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.