ಕೊಪ್ಪಳ: ಬಿಜೆಪಿ ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡದೇ ಉದ್ಯೋಗಾಕಾಂಕ್ಷಿ ಯುವಜನರನ್ನು ವಂಚಿಸಿದೆ. ಬಿಜೆಪಿಯ ವೈಫಲ್ಯ ಎತ್ತಿ ತೋರಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಖಾಲಿ ಹುದ್ದೆ ಭರ್ತಿಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಖಂಡಿಸುತ್ತದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಸಭೆ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಖಾಲಿಯಿರುವ ಎರಡೂ ಮುಕ್ಕಾಲು ಲಕ್ಷ ಹುದ್ದೆ ಭರ್ತಿಗೊಳಿಸಲು ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆ,ಸಾಕ್ಷರತಾ ಇಲಾಖೆಗಳಲ್ಲಿ 70,727 ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227 ಹುದ್ದೆಗಳು, ಆರೋಗ್ಯ ಇಲಾಖೆಯಲ್ಲಿ 37,069 ಹುದ್ದೆಗಳು,ಒಳಾಡಳಿತದಲ್ಲಿ 26128 ಹಾಗೂ ಪೊಲೀಸ್ ಇಲಾಖೆಯಲ್ಲಿ 8000ಕ್ಕೂ ಅಧಿಕ ಹುದ್ದೆಗಳು ಸೇರಿದಂತೆ ರಾಜ್ಯದ 43 ಇಲಾಖೆಗಳಲ್ಲಿ 2,76,386 ಹುದ್ದೆಗಳು ಖಾಲಿ ಇವೆ. ಶಿಕ್ಷಕರು, ಪೊಲೀಸ್ ಹಾಗೂ ಇತರೆ ಹಲವು ಹುದ್ದೆಗಳು ಭರ್ತಿಯಾಗದಿರುವುದರಿಂದ ಉದ್ಯೋಗಾಕಾಂಕ್ಷಿ ಯುವಜನತೆ ಭರವಸೆ ಕಳೆದುಕೊಂಡು ಹತಾಶರಾಗುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗದ ಗ್ಯಾರಂಟಿ ಜಾರಿ ಮಾಡುತ್ತದೆ ಎಂಬುದನ್ನು ನಂಬಿದ್ದ ಯುವಜನರು ಉದ್ಯೋಗ ಗ್ಯಾರಂಟಿಯು ಕಾರ್ಯರೂಪಕ್ಕೆ ಬರುತ್ತದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯದ ಯುವಜನರ ನಿರೀಕ್ಷೆ ಹುಸಿಯಾಗಿದೆ. ಖಾಲಿ ಇರುವ ಹುದ್ದೆ ನೇಮಕಕ್ಕೆ ಕಾಂಗ್ರೆಸ್ ಸರ್ಕಾರ ಅಗತ್ಯ ಪ್ರಯತ್ನ ಮಾಡದೇ ಕುಂಟು ನೆಪ ಹೇಳುತ್ತಾ ನೇಮಕಾತಿ ಮುಂದೂಡುತ್ತಿರುವುದು ರಾಜ್ಯದ ಯುವಜನರನ್ನು ವಂಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.

ಖಾಸಗಿ ರಂಗದ ನೇಮಕಾತಿಯಲ್ಲಿ ಹಾಗೂ ದುಡಿಯುತ್ತಿರುವವರಿಗೆ ಯಾವುದೇ ಕನಿಷ್ಠ ಭದ್ರತೆ ಸೌಲಭ್ಯ ದೊರೆಯುತ್ತಿಲ್ಲ. ಖಾಸಗಿ ರಂಗದಲ್ಲಿಯೂ ಕೂಡ ಮೀಸಲಾತಿ ಜಾರಿಗೆ ತರಬೇಕು ಎಂದು ಸಂಘಟನೆ ಒತ್ತಾಯಿಸುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶ ಭಾಗದ ಅಭಿವೃದ್ಧಿಗಾಗಿ 371 (ಜೆ) ಸಮರ್ಪಕವಾಗಿ ಜಾರಿಯಾಗಬೇಕು. ವಿಶೇಷವಾಗಿ ಶಿಕ್ಷಣ ಹಾಗೂ ಉದ್ಯೋಗಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿರುವ ಹಣ ವಿನಿಯೋಗಿಸಲು ಆದ್ಯತೆ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಅಧ್ಯಯನ ಮುಗಿಸಿ ಉದ್ಯೋಗ ಅರಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರವೇ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.


ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್ ವಸ್ತ್ರದ್, ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ರಾಜ್ಯ ಸಮಿತಿ ಸದಸ್ಯರಾದ ಯು.ಯರ್ರಿಸ್ವಾಮಿ, ಅಮರೇಶ ಕಡಗದ, ಮಂಜುನಾಥ ಈಡಿಗರ, ತಯ್ಯೂಬ್ ಬೆಂಗ್ರೆ, ರಾಜು ನಾಯಕ್, ಜಿ.ಎನ್.ಯರ್ರಿಸ್ವಾಮಿ, ಮಹಾಲಿಂಗ ದೊಡ್ಡಮನಿ ಇತರರಿದ್ದರು.