ಪುರಸಭೆಯೊಳಗೆ ಕಾರ್ಯನಿರ್ವಹಿಸುತ್ತಿದ್ದ ತೆರಿಗೆ ಸಹಾಯಕರು ಖಾಸಗಿ ಏಜೆನ್ಸಿಗೆ ಸಂಬಂಧಪಟ್ಟವರಾಗಿದ್ದು, ಪುರಸಭೆಯ ಸರ್ಕಾರಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ.

ಕಂಪ್ಲಿ: ಬಳ್ಳಾರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‌ಪಿ) ಎಸ್.ಎಸ್.ಬೀಳಗಿ ಅವರು ಬುಧವಾರ ಪಟ್ಟಣದ ಪುರಸಭೆ ಹಾಗೂ ಮಾರುತಿನಗರದ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಕಾರ್ಯಾಚರಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಂದ ಬಂದಿದ್ದ ದೂರುಗಳ ಆಧಾರದ ಮೇಲೆ ಪುರಸಭೆಗೆ ದಿಢೀರ್ ಭೇಟಿ ನೀಡಿದ ಡಿವೈಎಸ್‌ಪಿ ಅವರು, ಪುರಸಭೆಯೊಳಗೆ ಕಾರ್ಯನಿರ್ವಹಿಸುತ್ತಿದ್ದ ತೆರಿಗೆ ಸಹಾಯಕರು ಖಾಸಗಿ ಏಜೆನ್ಸಿಗೆ ಸಂಬಂಧಪಟ್ಟವರಾಗಿದ್ದು, ಪುರಸಭೆಯ ಸರ್ಕಾರಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಅಲ್ಲದೆ ಪುರಸಭೆಯ ವಿದ್ಯುತ್ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಬಳಸುತ್ತಿರುವುದೂ ಪರಿಶೀಲನೆಯ ವೇಳೆ ಕಂಡುಬಂದಿದೆ.

ತೆರಿಗೆ ಸಹಾಯಕರು ಸಾರ್ವಜನಿಕರಿಂದ ವಸೂಲಿಸುವ ಶುಲ್ಕಕ್ಕೆ ಸಂಬಂಧಿಸಿದಂತೆ ಯಾವುದೇ ನಿಗಧಿತ ದರಪಟ್ಟಿ (ಬೋರ್ಡ್) ಪ್ರದರ್ಶಿಸದೆ ಕಾರ್ಯನಿರ್ವಹಿಸುತ್ತಿದ್ದು, ವಸೂಲಿಸಿದ ಹಣಕ್ಕೆ ಸೂಕ್ತ ರಸೀದಿ ನೀಡುತ್ತಿಲ್ಲ ಎಂಬುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದು ಹೇಳಿದರು. ವರ್ಷಕ್ಕೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿ ಹಣವನ್ನು ತೆರಿಗೆ ಸಹಾಯಕರು ವಸೂಲಿಸುತ್ತಿದ್ದಾರೆ ಎಂಬ ಆರೋಪಗಳು ಇದ್ದು, ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಡಿವೈಎಸ್‌ಪಿ ಎಸ್.ಎಸ್.ಬೀಳಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗೆ ಕಠಿಣ ಸೂಚನೆ ನೀಡಿದ ಅವರು, ಆಡಳಿತದಲ್ಲಿ ಚುರುಕುತನ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅರ್ಜಿದಾರರ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಸರ್ಕಾರ ನಿಗಧಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿ ಹಣವನ್ನು ಯಾರಿಂದಲೂ ಪಡೆದುಕೊಳ್ಳಬಾರದು ಎಂದು ಎಚ್ಚರಿಸಿದರು.

ನಂತರ ಮಾರುತಿನಗರದ ಮೊದಲನೇ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಡಿವೈಎಸ್‌ಪಿ ಅವರು, ಪರಿಶೀಲನೆ ವೇಳೆ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಹಾಜರಿರಲಿಲ್ಲ. ವಿಷಯ ತಿಳಿದ ತಕ್ಷಣ ಕೇಂದ್ರದ ಕಾರ್ಯಕರ್ತೆ ಉಷಾ ಅವರು ಸ್ಥಳಕ್ಕೆ ಆಗಮಿಸಿ, ತಾವು ಬಿಎಲ್‌ಒ ಅಧಿಕಾರಿಯಾಗಿ 17ನೇ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದುದಾಗಿ ಸ್ಪಷ್ಟನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಅವರು, ಕೇಂದ್ರವನ್ನು ತಾತ್ಕಾಲಿಕವಾಗಿ ಬಿಟ್ಟು ತೆರಳುವ ಸಂದರ್ಭಗಳಲ್ಲಿ ಚಲನವಲನ ಪುಸ್ತಕದಲ್ಲಿ ವಿವರಗಳನ್ನು ದಾಖಲಿಸಬೇಕು. ಪೋಷಕರಿಗೆ ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ ಅಂಗನವಾಡಿ ಕೇಂದ್ರದ ಸ್ವಚ್ಛತೆ ಹಾಗೂ ದಾಖಲಾತಿಗಳನ್ನು ಬಹುಶಃ ಕ್ರಮಬದ್ಧವಾಗಿ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.