ಕನ್ನಡಪ್ರಭ ವಾರ್ತೆ ಬೆಂಗಳೂರು‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದಿಂದ ನಗರದ ನಾಗರಿಕರು ಒಂದೇ ಒಂದು ರುಪಾಯಿ ಲಂಚ ನೀಡದೆ ತಮ್ಮ ಆಸ್ತಿಗಳನ್ನು ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಹಾಗೂ ಮನೆ ಬಾಗಿಲಲ್ಲೇ ಇ-ಖಾತೆ ಪಡೆಯಬಹುದು. 7 ಲಕ್ಷ ಜನರಿಗೆ ಇದರಿಂದ ಉಪಯೋಗವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಆರಂಭವಾಗಿರುವ ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನ ಹಿನ್ನೆಲೆಯಲ್ಲಿ ಹೊರಮಾವು ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸ್ಥಾಪಿಸಲಾಗಿರುವ ಕೇಂದ್ರಕ್ಕೆ ಭೇಟಿ ನೀಡಿ ಸಾಂಕೇತಿಕವಾಗಿ ಇ ಖಾತಾ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ದಾಖಲೆಯಲ್ಲಿ ಫೋಟೋ ಸಹ ಇರಲಿದೆ. ಯಾರಾದರೂ ನಕಲಿ ದಾಖಲೆಗಳನ್ನು ನೀಡಿ ಖಾತೆ ಮಾಡಿಸಿಕೊಂಡರೆ ಅದನ್ನು ರದ್ದು ಮಾಡುವ ವ್ಯವಸ್ಥೆಯೂ ಇದೆ. ನಿಗದಿತ ನಂಬರ್ ನೀಡಿದ ತಕ್ಷಣ 2004ರ ನಂತರದ ಎಲ್ಲಾ ದಾಖಲೆಗಳು ದೊರೆಯುತ್ತವೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಲಿಂಕ್ ಮಾಡಲಾಗಿದೆ. ಅರ್ಹ ಮಾಲೀಕರಿಗೆ ಖಾತೆ ಮಾಡಿಕೊಡಲಾಗುವುದು ಎಂದರು.

ಆಸ್ತಿ ಮೌಲ್ಯ ಹೆಚ್ಚಿಸಲು ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ಇದು ಐತಿಹಾಸಿಕ ತೀರ್ಮಾನ. ಇದರಿಂದ ಬ್ಯಾಂಕ್‌ನಲ್ಲಿ ಸಾಲ ಪಡೆಯಬಹುದು. ಬೆಂಗಳೂರಿನಲ್ಲಿರುವ 23 ಲಕ್ಷ ಆಸ್ತಿಗಳ ಪೈಕಿ 16 ಲಕ್ಷ ಎ ಖಾತೆಗಳಿದ್ದರೆ 7 ಲಕ್ಷ ಬಿ ಖಾತೆಗಳಿವೆ. ಕೆಳ ಮಟ್ಟದ ಅಧಿಕಾರಿಗಳು ಖಾತೆ ವಿಚಾರವಾಗಿ ಲಂಚ ಪಡೆದು ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿತ್ತು. ಅದಕ್ಕಾಗಿ ಪ್ರತಿ ಶನಿವಾರ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ಆಸ್ತಿ ದಾಖಲೆಗಳಲ್ಲಿ ತೊಂದರೆಯಿದ್ದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಆಸ್ತಿಗಳಿಗೆ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ತಪ್ಪಾಗಿರುವ ದಾಖಲೆಗಳನ್ನು ಸರಿಪಡಿಸಲಾಗುತ್ತಿದೆ. ಈ ಮೊದಲು ಆಸ್ತಿ ಮೌಲ್ಯದ ಶೇ.5 ರಷ್ಟು ಮೊತ್ತವನ್ನು ಕಟ್ಟಬೇಕಿತ್ತು. ಆದರೆ, 100 ದಿನಗಳ ಕಾಲ ರಿಯಾಯಿತಿ ನೀಡಿದ್ದು ಶೇ.2 ರಷ್ಟು ಶುಲ್ಕ ಪಾವತಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಖಾತೆಯನ್ನು ಕಡತ ರೂಪದಲ್ಲಿ ನೀಡಲಾಗುತ್ತದೆ. ಅದರಲ್ಲಿ ಮಾಲೀಕರು ಹಾಗೂ ಮನೆಯ ಫೋಟೋ ಇರುತ್ತದೆ. ಆನ್‌ಲೈನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಾರೂ ಸಹ ಇದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಶ್ಲಾಘನೆ:


ಸಾರ್ವಜನಿಕರು ಯಾರಿಗೂ ಕೂಡ ಒಂದೇ ಒಂದು ರು. ಲಂಚ ನೀಡಬಾರದು. ಇ ಖಾತೆ ಯೋಜನೆಗಾಗಿ ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಕೇಂದ್ರ ಸರ್ಕಾರದಿಂದ ಶ್ಲಾಘನೆ ಸಿಕ್ಕಿದೆ. ಖಾತೆ ಬದಲಾವಣೆಯಿಂದ ಆಸ್ತಿ ಬೆಲೆ ಹೆಚ್ಚಳವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಶಾಸಕರು ಭಾಗಿ: ನಗರದ ಬೇರೆ ಬೇರೆ ವಲಯಗಳಲ್ಲಿನ 52 ಸ್ಥಳಗಳಲ್ಲಿ ಖಾತಾ ಅಭಿಯಾನ ನಡೆಯುತ್ತಿದ್ದು, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಖಾತಾ ಅಭಿಯಾನದಲ್ಲಿ ಭಾಗವಹಿಸಿದರು.

ಲಭ್ಯವಿರುವ ಸೇವೆಗಳು: ಇ-ಖಾತಾ, ಹೊಸ ಖಾತಾ, ಬಿ ಖಾತಾದಿಂದ ಎ ಖಾತಾ ಪರಿವರ್ತನೆ, ಖಾತಾ ತಿದ್ದುಪಡಿ, ಖಾತಾ ಅಮಾನ್ಯೀಕರಣ, ಆಸ್ತಿ ತೆರಿಗೆ ಸಂಬಂಧಿತ ಸೇವೆಗಳು ಹಾಗೂ ಬಾಕಿ ಇರುವ ಸಾರ್ವಜನಿಕ ಅಹವಾಲುಗಳ ವಿಲೇವಾರಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ನಾಗರಿಕರ ಸಂತಸ: ಈ ಅಭಿಯಾನದಿಂದ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಪ್ರಯೋಜನವಾಗಲಿದೆ. ಸರಕಾರದ ಆರನೇ ಗ್ಯಾರಂಟಿಯಾದ ಖಾತೆ ಪರಿವರ್ತನೆಯ ಅಭಿಯಾನದ ಪ್ರಯೋಜನ ಪಡೆಯಬೇಕು. ನಕಲಿ ದಾಖಲೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿರುವುದು ಒಳ್ಳೆಯ ಯೋಚನೆ. ಜನತೆಗೆ ಇದರಿಂದ ಆಸ್ತಿಯ ಕುರಿತು ಭದ್ರತೆ ದೊರಕಲಿದೆ ಎಂದು ಅಭಿಯಾನದಲ್ಲಿ ಭಾಗವಹಿಸಿದ್ದ ನಾಗರಿಕರು ಸಂತಸ ವ್ಯಕ್ತಪಡಿಸಿದರು.

ಸೂಕ್ತ ದಾಖಲೆ ಇದ್ದರೆ ಕೇವಲ 5 ನಿಮಿಷಗಳಲ್ಲಿ ಖಾತಾ ಮಾಡಿಕೊಡಲಾಗುತ್ತದೆ ಎಂದಿದ್ದರು. ಅದರಂತೆ ಇಲ್ಲಿ 5 ನಿಮಿಷಗಳಲ್ಲಿ ಖಾತಾ ಆಗಿದೆ ಎಂದು ಮತ್ತೊಬ್ಬರು ಹೇಳಿದರು.ಫ್ಲ್ಯಾಟ್ ಮಾಲೀಕರು

ಭಾಗವಹಿಸಬಹುದು

‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದಲ್ಲಿ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ಗಳ ಮಾಲೀಕರು ಕೂಡ ಸೂಕ್ತ ದಾಖಲೆಗಳೊಂದಿಗೆ ಖಾತಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಬಿಎ ತಿಳಿಸಿದೆ.

ದಲ್ಲಾಳಿಗಳನ್ನು ದೂರ ಇಡಬೇಕು. ಯಾರಾದರೂ ಲಂಚ ಕೇಳಿದರೆ ದೂರು ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದಕ್ಕಾಗಿ ದೂರವಾಣಿ ಸಂಖ್ಯೆ ನೀಡಲಾಗುವುದು. ಲಂಚಕ್ಕೆ ಬೇಡಿಕೆ ಇಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ