ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರ ಯಾವುದೇ ಪೂರ್ವ ಪ್ರಯೋಗ ಸಾಧಕ, ಬಾಧಕಗಳನ್ನು ಪರೀಕ್ಷಿಸಿ ನೋಡದೇ ರಾಜ್ಯಾದ್ಯಂತ ಇ- ಖಾತಾ ವ್ಯವಸ್ಥೆ ಜಾರಿಗೆ ತಂದಿದೆ. ಈಗ ಬಳಸುತ್ತಿರುವ ತಂತ್ರಾಂಶ ಅಸಪರ್ಮಕವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇ- ಖಾತೆಗಾಗಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗದೇ ಪರದಾಡುವಂತಾಗಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದರು.ಮೈಸೂರು ನಗರದಲ್ಲಿಯೇ ಸುಮಾರು 2.50 ಲಕ್ಷ ಆಸ್ತಿಗಳಿವೆ. ಮಾಲೀಕರು ಇ-ಖಾತೆಗಾಗಿ ಅರ್ಜಿ ಸಲ್ಲಿಸಿದರೆ ಒಂದೊಂದು ಅರ್ಜಿ ಮಾಹಿತಿಯನ್ನು ಸಾಫ್ಟ್ ವೇರ್ ಗೆ ಭರ್ತಿ ಮಾಡಲು ಸುಮಾರು ಅರ್ಧ ದಿನ ಹಿಡಿಯುತ್ತಿದೆ. ಜೊತೆಗೆ ಅರ್ಜಿ ಸಲ್ಲಿಸಲೆಂದೇ ವೃದ್ಧರು, ಮಹಿಳೆಯರು ಪಾಲಿಕೆಯ ಎಲ್ಲಾ 9 ವಲಯ ಕಚೇರಿಗಳ ಎದುರು ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಖ್ಯಮಂತ್ರಿ ತವರು ಜಿಲ್ಲೆಯ ನಗರದಲ್ಲಿಯೇ ಈ ಪರಿಸ್ಥಿತಿ ಉಂಟಾಗಿದ್ದರೂ ಸಿಎಂ ಇನ್ನೂ ಏಕೆ ಸುಮ್ಮನಿದ್ದಾರೆಂಬುದು ತಿಳಿಯದಾಗಿದೆ. ಈಗಾಗಲೇ ಮುಂಬೈ, ಜೋಯಿಡಾ, ದೆಹಲಿ ಮೊದಲಾದ ಕಡೆಗಳಲ್ಲಿ ಇ-ಖಾತೆ ನೀಡಿಕೆ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲಿ ಅತ್ಯಾಧುನಿಕ ತಂತ್ರಾಂಶ ಬಳಸಿರುವ ಕಾರಣ ಇ-ಖಾತೆ ಬೆರಳ ತುದಿಯಲ್ಲಿಯೇ ಸಿಗುತ್ತಿದೆ ಎಂದರು.ಆದರೆ, ನಮ್ಮಲ್ಲಿನ ತಂತ್ರಾಂಶ ತೀರಾ ಹಿಂದುಳಿದದ್ದಾಗಿದೆ. ಇದನ್ನು ರಾಜ್ಯ ವ್ಯಾಪಿ ಜಾರಿಗೊಳಿಸುವ ಮೊದಲು ಯಾವುದಾದರೂ ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಜಾರಿಗೊಳಿಸಿ, ಸಾಧಕ ಬಾಧಕ ಪರಿಶೀಲಿಸಿ, ಲೋಪಗಳನ್ನು ಸರಿಪಡಿಸಿಕೊಂಡ ಬಳಿಕ ರಾಜ್ಯಾದ್ಯಂತ ಜಾರಿಗೊಳಿಸಬೇಕಾಗಿತ್ತು. ಈ ರೀತಿ ಮಾಡದ ಕಾರಣ ಈಗ ಜನತೆ ಸಮಸ್ಯೆ ಎದುರಿಸಬೇಕಾಗಿದೆ ಎಂದು ಅವರು ಟೀಕಿಸಿದರು.
ಇ-ಖಾತೆ ವ್ಯವಸ್ಥೆಯಲ್ಲಿ ತಾಂತ್ರೀಕ ದೋಷವಿದ್ದು, ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 9 ವಲಯ ಕಚೇರಿಯಲ್ಲಿ 8 ಸಾವಿರ ಅರ್ಜಿಗಳು ಇ-ಖಾತೆ ಆಗದೇ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ತಂತ್ರಾಂಶ ಸರಿಪಡಿಸುವಂತೆ ಅವರು ಆಗ್ರಹಿಸಿದರು.ಕಳೆದ ಒಂದು ತಿಂಗಳಿನಿಂದ ಪಾಲಿಕೆ ವ್ಯಾಪ್ತಿಯ 9 ವಲಯ ಕಚೇರಿಯಲ್ಲಿ 8 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಇ-ಖಾತೆ ಆಗದೇ ಉಳಿದಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಇದೇ ಸಮಸ್ಯೆ ತಾಂಡವಾಡುತ್ತಿದ್ದು, ಇದರಿಂದ ಸಾರ್ವಜನಿಕರು ನಿತ್ಯವು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಮಾಜಿ ಉಪ ಮೇಯರ್ ಡಾ.ಜಿ. ರೂಪಾ, ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ.ವಿ. ಮಂಜುನಾಥ್, ಎಂ.ಯು. ಸುಬ್ಬಯ್ಯ ಇದ್ದರು.