ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವೈವಿಧ್ಯಮಯ ಓದುಗರಿಗೆ ಇ-ಪತ್ರಿಕೆಗಳು ಅನುಕೂಲಕರ ಎಂದು ಹಿರಿಯ ಪತ್ರಕರ್ತ ಟಿ.ಆರ್.ಸತೀಶ್ ಕುಮಾರ್ ಹೇಳಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮತ್ತು ಐಕ್ಯೂಎಸಿಯ ಸಹಯೋಗದೊಂದಿಗೆ ಇ-ಪೇಪರ್ ಎಂಬ ವಿಷಯದ ಕುರಿತು ಸಂವಾದಾತ್ಮಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ವಿಕಾಸಗೊಳ್ಳುತ್ತಿರುವ ಮಾಧ್ಯಮದ ಬಗ್ಗೆ ತಿಳಿಸಿದರು.
ಮುಖ್ಯವಾಹಿನಿಗಳ ಮಧ್ಯೆ, ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಪ್ರಭಾವದ ಬಗ್ಗೆ ಕೇಂದ್ರೀಕರಿಸಿದ ಅವರು, ಮುದ್ರಣ ಮಾಧ್ಯಮ ಮತ್ತು ಇ-ಪೇಪರ್ ಗಳ ಕುರಿತು ವಿವರಿಸಿದರು. ಇ-ಪೇಪರ್ ನ ವಿಶೇಷತೆ, ಉಪಯೋಗಗಳು ಮತ್ತು ಪ್ರಸ್ತುತತೆಯ ಬಗ್ಗೆ ಮಾತನಾಡಿದರು.ಮುದ್ರಣ ಮತ್ತು ಇ-ಪೇಪರ್ಗಳಲ್ಲಿ ಇರುವ ಮಾಹಿತಿ ಒಂದೇ ಆಗಿರುತ್ತದೆ. ಮುದ್ರಣ ಪತ್ರಿಕೆಗಳನ್ನು ಓದುಗರು ಕೊಂಡುಕೊಂಡರೂ, ಓದುವವರ ಸಂಖ್ಯೆ ಕಡಿಮೆ ಈಗ ಪ್ರತಿಯೊಬ್ಬರು ಮೊಬೈಲ್ ಬಳಸುವುದರಿಂದ ಎಲ್ಲವನ್ನೂ ಮೊಬೈಲ್ ನಲ್ಲೇ ಹುಡುಕುತ್ತಾರೆ. ಹಾಗಾಗಿ ಕಾಲ ಬದಲಾದಂತೆ ಪತ್ರಿಕೆಗಳು ಸಹ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿವೆ. ಮುದ್ರಣ ಪತ್ರಿಕೆಗಳನ್ನು ಒಂದು ಕಡೆ ಕೂತೇ ಓದಬೇಕು. ಆದರೆ, ಇ-ಪೇಪರ್ಗಳನ್ನು ಮೊಬೈಲ್ ನಲ್ಲಿ ಎಲ್ಲಿ, ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಓದಬಹುದು. ಜೊತೆಗೆ ಸುಲಭವಾಗಿ, ನಿರ್ದಿಷ್ಟ ವಿಷಯವನ್ನು, ಸುದ್ದಿಯನ್ನು, ನಿರ್ದಿಷ್ಟ ದಿನಾಂಕದ ಸುದ್ದಿಯನ್ನು ಹುಡುಕಿಓದಬಹುದು ಮತ್ತುಇನ್ನೊಬ್ಬರಿಗೆ ಸುಲಭವಾಗಿ ನಿರ್ದಿಷ್ಟ ಸುದ್ದಿಯನ್ನು ಹಂಚಿಕೊಳ್ಳಬಹುದು. ಈ ಮೂಲಕ ಇ-ಪೇಪರ್ ಗಳು ಓದುಗರನ್ನು ಆಕರ್ಷಿಸುತ್ತಿವೆ ಎಂದು ತಿಳಿಸಿದರು.
ಕನ್ನಡಿಗರು ಬೇರೆ ರಾಜ್ಯಗಳಲ್ಲಿ ಇದ್ದರೆ, ಅವರಿಗೆ ಸ್ಥಳೀಯ ಮುದ್ರಣ ಪತ್ರಿಕೆಗಳು ಸಿಗುವುದು ಕಷ್ಟ. ಆದರೆ, ಇ-ಪೇಪರ್ಗಳನ್ನು ಹೊರರಾಜ್ಯದಲ್ಲಿರುವ ಆಸಕ್ತ ಕನ್ನಡಿಗರು ಸುಲಭವಾಗಿ ಪಡೆಯಬಹುದಾಗಿದೆ. ಜೊತೆಗೆ ಇ-ಪೇಪರ್ ಗಳನ್ನು ಓದಲು ಸಹ ಇಂತಿಷ್ಟು ಮೊತ್ತವನ್ನು ಪಾವತಿಸಬೇಕಾಗಿರುವುದರಿಂದ ಮತ್ತು ಅದರಲ್ಲಿ ಬರುವ ಜಾಹೀರಾತುಗಳ ಮೂಲಕವೂ ಇ-ಪೇಪರ್ಉತ್ತಮ ಆದಾಯವನ್ನು ತಂದು ಕೊಡುತ್ತದೆ ಎಂದು ವಿವರಿಸಿದರು.ಇದೇ ವೇಳೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಇರುವ ಅನುಮಾನ, ಗೊಂದಲದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪರಿಹಾರ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಅಮೃತ ಶಂಕ್ಪಾಲ್, ಸಹಾಯಕ ಪ್ರಾಧ್ಯಾಪಕಿ ಸ್ವರ್ಣ ಕಿತ್ತೂರು, ತಾಂತ್ರಿಕ ವಿಭಾಗದ ಮುಖ್ಯಸ್ಥ ರಾಜೇಂದ್ರ ಪ್ರಸಾದ್ ಇದ್ದರು.