ಸಾರಾಂಶ
- ಗ್ರಾಹಕರ ಜನಾಂದೋಲನ ಕಾರ್ಯಕ್ರಮದಲ್ಲಿ ರಾಮೇಶ್ವರ ರಾಕೇಶ್ ಒತ್ತಾಯ - - - ಕನ್ನಡಪ್ರಭ ವಾರ್ತೆ ನ್ಯಾಮತಿ
ನ್ಯಾಮತಿಯ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಪಡೆದಿರುವ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುತ್ತೇವೆ. ಚಿನ್ನ ಅಡವಿಟ್ಟವರ ಗ್ರಾಹಕರ ಪ್ರಾಣಹಾನಿ ಆಗುವುದರೊಳಗೆ ಅವರವರ ಬಂಗಾರದ ಒಡವೆಗಳನ್ನು ಬ್ಯಾಂಕ್‌ನವರು ಶೀಘ್ರ ವಾಪಸ್ ನೀಡಬೇಕು ಎಂದು ರಾಮೇಶ್ವರ ರಾಕೇಶ್ ಒತ್ತಾಯಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇತ್ತೀಚೆಗೆ ಕೋಟ್ಯಂತರ ರು. ಮೌಲ್ಯದ ಚಿನ್ನ, ಹಣ ದರೋಡೆಯಾದ ಹಿನ್ನೆಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಂಗಾರದ ಆಕಾಂಕ್ಷಿ ಬಳಗದವರು ಹಮ್ಮಿಕೊಂಡಿದ್ದ ಚಿನ್ನ ಕಳೆದುಕೊಂಡ ಗ್ರಾಹಕರ ಜನಾಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಮತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಒಟ್ಟು 509 ಗ್ರಾಹಕರು ತಮ್ಮ ಮುಂದಿನ ಬದುಕಿಗಾಗಿ ತಮ್ಮಲ್ಲಿದ್ದ ಬಂಗಾರದ ಒಡವೆಗಳನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ಆದರೆ, ಇತ್ತೀಚೆಗೆ ಕಳ್ಳರು ಬ್ಯಾಂಕ್‌ಗೆ ಕನ್ನ ಹಾಕಿ, ₹12.95 ಕೋಟಿ ಮೊತ್ತದ ಬಂಗಾರದ ಒಡವೆಗಳನ್ನು ದರೋಡೆ ಮಾಡಿದ್ದಾರೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡವಿಟ್ಟ ಗ್ರಾಹಕರು ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ, ಬಿತ್ತನೆಬೀಜ, ರಸಗೊಬ್ಬರ, ಹೋಟೆಲ್, ಅಂಗಡಿ, ಮದುವೆ ಮತ್ತಿತರೆ ಕೆಲಸ, ಕಾರ್ಯಗಳಿಗೆ ಗ್ರಾಹಕರು ತಮ್ಮ ಬಳಿಯಿದ್ದ ಬಂಗಾರದ ಒಡವೆಗಳನ್ನು ಹಾಗೂ ಸ್ನೇಹಿತರು, ಬಂಧುಗಳು, ಅಕ್ಕ-ತಂಗಿಯರಿಂದ ಎರವಲು ಪಡೆದ ಚಿನ್ನಾಭರಣಗಳನ್ನು ತಂದು ನ್ಯಾಮತಿಯ ಎಸ್‌ಬಿಐ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದಾರೆ. ಈಗ ಬ್ಯಾಂಕ್‌ನಲ್ಲಿ ದೊಡ್ಡ ಮಟ್ಟದ ದರೋಡೆ ನಡೆದಿರುವುದು ಜಗಜ್ಜಾಹೀರಾಗಿದೆ. ಇದರಿಂದ ಚಿನ್ನದ ಮೇಲೆ ಸಾಲ ಪಡೆದ ಗ್ರಾಹಕರ ಮನೆಗಳಲ್ಲಿ ಕಲಹಗಳು ಘಟಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ಗ್ರಾಹಕರ ಪ್ರಾಣಕ್ಕೆ ಹಾನಿಯಾದರೆ ಎಸ್‌ಬಿಐ ಬ್ಯಾಂಕಿನವರೇ ನೇರೆ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ನ್ಯಾಮತಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಜನಾಂದೋಲನ ಮೆರವಣಿಗೆ ನಡೆಸಿದ ಎಸ್‌ಬಿಐ ಗ್ರಾಹಕರು, ಸ್ಥಳೀಯ ಪೊಲೀಸ್ ಠಾಣೆ, ತಹಸೀಲ್ದಾರ್ ಕಚೇರಿ ಮತ್ತು ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶೀಘ್ರ ಗ್ರಾಹಕರ ಠೇವಣಿ ಹಣ ಹಾಗೂ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ, ಸಾಲವನನ್ನು ಮರುಪಾವತಿ ಮಾಡಿಕೊಳ್ಳುವಂತೆ ಒತ್ತಾಯಿಸಿದರು.ಎಸ್‌ಬಿಐ ಮ್ಯಾನೇಜರ್ ಸುನೀಲ್ ಕುಮಾರ್ ಯಾದವ್ ಈ ಸಂದರ್ಭ ಮನವಿ ಸ್ವೀಕರಿಸಿದರು. ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ದೊಡ್ಡಮಟ್ಟದ ದರೋಡೆಯಾಗಿ, ಚಿನ್ನದ ಒಡವೆಗಳು, ನಗದು ಕಳವಾಗಿರುವ ಬಗ್ಗೆ ಆರ್‌ಬಿಐ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ಸುತ್ತೋಲೆ ಬಂದ ನಂತರ ಗ್ರಾಹಕರು ಅಡವಿಟ್ಟ ಬಂಗಾರವನ್ನು ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಗ್ರಾಹಕರು ಯಾವುದೇ ಆತಂಕಪಡಬಾರದು ಎಂದು ಭರವಸೆ ನೀಡಿದರು.
ಜನಾಂದೋಲನದಲ್ಲಿ ಆರುಂಡಿ ಜಯಮ್ಮ, ನ್ಯಾಮತಿ ಸುಜಾತ, ರಾಮೇಶ್ವರ ತೀರ್ಥಲಿಂಗಪ್ಪ, ಮಧುಸುದನ್, ಕವಿತಾಶ್ರೀ, ಕಾವ್ಯಶ್ರೀ, ರವಿ, ಒಡೆಯರ ಹತ್ತೂರು ತಾಂಡ ತೀರ್ಥನಾಯ್ಕ ಮತ್ತಿತರ ಗ್ರಾಹಕರು, ಗ್ರಾಮಸ್ಥರು, ಪಾಲ್ಗೊಂಡಿದ್ದರು.- - - (ಫೋಟೋ):