ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ಇ ಖಾತಾ ನೋಂದಣಿ ಅರ್ಜಿಗಳ ವಿಲೇವಾರಿ ವಿಳಂಬಕ್ಕೆ ಪಾಲಿಕೆ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮೇಯರ್ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸಭಾಭವನದಲ್ಲಿ ಗುರುವಾರ ನಡೆದ ಪಾಲಿಕೆ ಸಾಮಾನ್ಯಸಭೆಯಲ್ಲಿ ಇ ಖಾತಾ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿರುವ ವಿಚಾರ ಪ್ರತಿಧ್ವನಿಸಿತು. ಆಸ್ತಿ ಇ ಖಾತಾ ಅರ್ಜಿ ತ್ವರಿತ ವಿಲೇವಾರಿಗೆ ಸಾವಿರಾರು ರುಪಾಯಿ ಪಡೆಯಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಏಕೆ ಅರ್ಜಿ ವಿಲೇವಾರಿ ವಿಳಂಬ ಮಾಡಲಾಗುತ್ತಿದೆ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಆಸ್ತಿಗಳ ಇ ಖಾತಾ ನೋಂದಣಿಗೆ ಸಲ್ಲಿಸಲಾದ ಅರ್ಜಿಗಳ ವಿಲೇವಾರಿಗೆ ಸಾವಿರಾರು ರುಪಾಯಿ ಬೇಡಿಕೆ ಇಡುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬರುತ್ತಿವೆ. ದಕ್ಷಿಣ ಕ್ಷೇತ್ರದಲ್ಲಿ ಇ ಖಾತಾ ಅರ್ಜಿಗಳ ವಿಲೇವಾರಿಗೆ ಒಂದು ದಿನ ನಿಗದಿಪಡಿಸಬೇಕು. ಅರ್ಜಿ ವಿಲೇವಾರಿಗೆ ₹25 ಶುಲ್ಕ ಪಡೆಯಬೇಕು. ₹50 ಸಾವಿರ ಕೇಳಿದರೆ ಹೇಗೆ? ಇ ಖಾತಾ ನೋಂದಣಿ ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಇ ಖಾತಾ ನೋಂದಣಿ ಅರ್ಜಿ ವಿಲೇವಾರಿ ಮಾಡಲು ಏಜೆಂಟರು ಹುಟ್ಟಿಕೊಂಡಿದ್ದಾರೆ. ಅವರಿಗೆ ಕಡಿವಾಣ ಹಾಕಬೇಕು. ಅಲ್ಲದೇ, ದಾಖಲೆಗಳನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.ಪಾಲಿಕೆ ಆಯುಕ್ತೆ ಶುಭ. ಬಿ ಮಾತನಾಡಿ, ಇ ಖಾತಾ ನೋಂದಣಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ತಮ್ಮ ಆಸ್ತಿಗಳನ್ನು ಇ ಖಾತಾ ನೋಂದಣಿಗೆ ಸೇಲ್ ಡೀಡ್, ಆಧಾರ ಕಾರ್ಡ್, ಆಸ್ತಿ ತೆರಿಗೆ ರಸೀದಿ ದಾಖಲೆ ನೀಡಬೇಕು. ನಾಗರಿಕರಿಗೆ ಅನುಕೂಲವಾಗುವಂತೆ ಬೆಳಗಾವಿ ಒನ್ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸಾವಿರಾರು ಎ ಖಾತಾ ಅರ್ಜಿ ಬಾಕಿಯಿವೆ. ಬಿ. ಖಾತಾ ಆಸ್ತಿ ಮಾತ್ರ ನೋಂದಣಿ ಮಾಡಲಾಗುತ್ತಿದೆ. ನೋಂದಣಿಯಾಗಿರುವ ಆಸ್ತಿಗಳಿಗೆ ಮಾತ್ರ ಇ ಖಾತಾ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.ಸದಸ್ಯ ರವಿ ಧೋತ್ರೆ, ಬೆಳಗಾವಿ ಒನ್ ಕೇಂದ್ರದಲ್ಲಿ ಇ ಖಾತಾ ನೋಂದಣಿ ಅರ್ಜಿ ಸ್ವೀಕರಿಸುತ್ತಿಲ್ಲ ಎಂದು ಗಮನ ಸೆಳೆದರು. ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.ನೀರಿನ ಸಮಸ್ಯೆ, ಒಂದು ವಾರದಲ್ಲಿ ಸಭೆ:
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಲೋಕೋಪಯೋಗಿ, ಅರಣ್ಯ ಇಲಾಖೆ, ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳ ಜೊತೆಗೆ ಸಭೆ ಕರೆಯಲಾಗುವುದು ಎಂದು ಮೇಯರ್ ಮಂಗೇಶ ಪವಾರ ಸಭೆಗೆ ತಿಳಿಸಿದರು. ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅವುಗಳ ನಿರ್ವಹಣೆಯನ್ನು ಎಲ್ ಆ್ಯಂಡ್ ಟಿ ಕಂಪನಿ ಮಾಡುತ್ತಿದೆ ಎಂದರು.ಶಾಸಕ ಆಸೀಫ್ ಸೇಠ್ ಪಾಲಿಕೆ ವಾರ್ಡ್‌ವಾರು ಮಾಹಿತಿ ನೀಡಬೇಕು. ಸರ್ಕಾರದ ಅನುದಾನದಲ್ಲಿ ವಿವಿಧೆಡೆ 100 ಕೊಳವೆ ಬಾವಿ ಕೊರೆಸಲಾಗಿದೆ ಎಂದರು. ನಿಮಗಷ್ಟೇ ಸರ್ಕಾರ ಅನುದಾನ ನೀಡಿದೆ. ನಮಗೆ ನೀಡಿಲ್ಲ. ಹಾಗಾಗಿ ನಾವು ಶಾಸಕರ ನಿಧಿಯಲ್ಲಿ ಕೊಳವೆ ಬಾವಿ ಕೊರೆಸಿದ್ದೇವೆ. ನಿಮ್ಮ ಸರ್ಕಾರ ಕುರುಡಾಗಿದೆ ಎಂದು ಶಾಸಕ ಅಭಯ ಪಾಟೀಲ ಸರ್ಕಾರದ ವಿರುದ್ಧ ಕಿಡಿಕಾರಿದರು.ಈಗ ವಿಧಾನಮಂಡಲ ಅಧಿವೇಶನ ಶುರುವಾಗಲಿದೆ. ಅನುದಾನದ ಬಗ್ಗೆ ಅಲ್ಲಿಯೇ ಚರ್ಚಿಸೋಣ. ಈಗ ಪಾಲಿಕೆಗೆ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸೋಣ ಎಂದು ಆಸೀಫ್ ಸೇಠ್ ಚರ್ಚೆಗೆ ತೆರೆಎಳೆದರು. ಇತರೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿನ ನೀರಿನ ಸಮಸ್ಯೆ ಕುರಿತು ಸಭೆ ಗಮನ ಸೆಳೆದರು. ಪಾಲಿಕೆ ಆಯುಕ್ತ ಶುಭ ಬಿ ಅವರು, ನಗರದಲ್ಲಿರುವ 786 ಬೋರ್‌ವೆಲ್‌ಗಳನ್ನು ಆಲ್ ಆ್ಯಂಡ್ ಟಿ ಕಂಪನಿ ನಿರ್ವಹಣೆ ಮಾಡುತ್ತಿದೆ. ಇನ್ನುಳಿದಿರುವ ಬೋರ್‌ವೆಲ್‌ಗಳ ನಿರ್ವಹಣೆ ಹೊಣೆಯನ್ನು ನೀಡಬೇಕಿದೆ ಎಂದರು.ತ್ಯಾಜ್ಯ ವಿಲೇವಾರಿ ಸಮಸ್ಯೆ: ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯದ್ದೇ ದೊಡ್ಡ ಸಮಸ್ಯೆಯಿದೆ. ತ್ಯಾಜ್ಯ ನಿರ್ವಹಣೆಗೆ ಎ,ಬಿ,ಸಿ ವಿಭಾಗ ಮಾಡಿರುವುದು ಏಕೆ ಎಂದು ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು. ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ನಗರದ 58 ವಾರ್ಡ್‌ಗಳಲ್ಲಿ 6 ಪ್ಯಾಕೇಜ್ ಮಾಡಲಾಗಿದೆ. ಕಸ ಸಂಗ್ರಹಕ್ಕೆ ಎ, ಬಿ, ಸಿ, ವಿಭಾಗ ಮಾಡಲಾಗಿದೆ. ಎ ಎಂದರೆ ನಿತ್ಯ ಕಸ ಸಂಗ್ರಹಿಸಲಾಗುತ್ತದೆ. ಚರಂಡಿ ಸ್ವಚ್ಛತೆ ಮಾಡಲಾಗುತ್ತದೆ. ಬಿ ಎಂದರೆ 92 ಕಿಮೀಯಲ್ಲಿ 2 ದಿನಕ್ಕೊಮ್ಮೆ ಕಸ ಸಂಗ್ರಹಿಸಲಾಗುತ್ತದೆ. ಸಿ ಎಂದರೆ, 362 ಕಿ.ಮೀ. ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆ ಗಮನ ಸೆಳೆದರು. ಕಸ ಯಾವ ವಿಭಾಗದಲ್ಲಿ ಸಂಗ್ರಹಿಸಲಾಗುತ್ತದೆ ಎಂಬುದರ ಕುರಿತು ಆಯಾ ಪ್ರದೇಶಗಳಲ್ಲಿ ಬೋರ್ಡ್‌ಗಳನ್ನು ಹಾಕುವಂತೆ ಶಾಸಕ ಅಭಯ ಪಾಟೀಲ ಸಲಹೆ ನೀಡಿದರು.ಬೆಳಗಾವಿಯಲ್ಲಿ ಕಾಯ್ದೆ ಇಲ್ಲವೇ?:ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಬೆಳಗಾವಿಯಲ್ಲಿ ಕಾನೂನು ಕಾಯ್ದೆ ಇಲ್ಲವೇ ಎಂದು ಶಾಸಕ ಅಭಯ ಪಾಟೀಲ ಅವರು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಪಾಲಿಕೆಯಿಂದ ಅನುಮತಿ ಪಡೆಯದೇ ಬೃಹತ್ ಮಹಡಿಯ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಂತಹ ಕಟ್ಟಡಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಡ ವರ್ಗದ ಜನರು ಚಿಕ್ಕ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳ ಕಟ್ಟಡವನ್ನು ತೆರವುಗೊಳಿಸಬಾರದು. ಅಕ್ರಮವಾಗಿ ತಲೆ ಎತ್ತಿರುವ ಬೃಹತ್ ಕಟ್ಟಡಗಳ ತೆರವುಗೊಳಿಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪಾಲಿಕೆ ನಗರ ಯೋಜನಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಪಾಲಿಕೆ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ತಮ್ಮ ವಾರ್ಡ್‌ನಲ್ಲಿ ಅನುಮತಿ ಪಡೆದಿದ್ದರೂ ನಿಯಮ ಉಲ್ಲಂಘಿಸಿ ವಾಣಿಜ್ಯ ಮತ್ತು ವಸತಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಚರಂಡಿಗಳು ಕಲ್ಲುಗಳಿಂದ ಮುಚ್ಚಲಾಗುತ್ತಿದೆ. ಆಯಾ ಕಟ್ಟಡಕ್ಕೆ ಎಷ್ಟು ಮಹಡಿ ಅನುಮತಿ ಸಿಕ್ಕಿದೆ ಎಂಬುದರ ಕುರಿತು ಅಧಿಕಾರಿಗಳಾಗಲಿ, ಮನೆ ನಿರ್ಮಿಸುತ್ತಿರುವವರು ತಮಗೆ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾಲಿಕೆ ನೀಡಿರುವ ಅನುಮತಿಯಂತೆ ವಸತಿ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಉಪಮೇಯರ್ ವಾಣಿ ಜೋಶಿ, ಪಾಲಿಕೆ ಆಯುಕ್ತ ಶುಭ ಬಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.