ವಕೀಲರ ಕಲಿಕೆಗೆ ಇ-ಗ್ರಂಥಾಲಯ ಅವಶ್ಯಕ: ಹನುಮಂತರಾವ ಕುಲಕರ್ಣಿ

| Published : Aug 10 2025, 02:16 AM IST

ವಕೀಲರ ಕಲಿಕೆಗೆ ಇ-ಗ್ರಂಥಾಲಯ ಅವಶ್ಯಕ: ಹನುಮಂತರಾವ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ವಕೀಲರ ಕಲಿಕೆಗೆ ಇ-ಗ್ರಂಥಾಲಯ ಅವಶ್ಯವಾಗಿದ್ದು, ಅದನ್ನು ಸ್ಥಾಪಿಸುವುದರಿಂದ ಹಿರಿಯ, ಕಿರಿಯ ವಕೀಲರು ಹಾಗೂ ನ್ಯಾಯಾಧೀಶರಿಗೆ ನ್ಯಾಯಾಂಗ ವ್ಯವಸ್ಥೆಯ ಸದ್ಯದ ವಿದ್ಯಮಾನ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹನುಮಂತರಾವ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ವಕೀಲರ ಕಲಿಕೆಗೆ ಇ-ಗ್ರಂಥಾಲಯ ಅವಶ್ಯವಾಗಿದ್ದು, ಅದನ್ನು ಸ್ಥಾಪಿಸುವುದರಿಂದ ಹಿರಿಯ, ಕಿರಿಯ ವಕೀಲರು ಹಾಗೂ ನ್ಯಾಯಾಧೀಶರಿಗೆ ನ್ಯಾಯಾಂಗ ವ್ಯವಸ್ಥೆಯ ಸದ್ಯದ ವಿದ್ಯಮಾನ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹನುಮಂತರಾವ ಕುಲಕರ್ಣಿ ಹೇಳಿದರು.

ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡ ನ್ಯಾಯಾಲಯದಲ್ಲಿ ಇ-ಗ್ರಂಥಾಲಯವನ್ನು ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಹುನಗುಂದದಲ್ಲೂ ಕೂಡ ಇ-ಗ್ರಂಥಾಲಯ ಸ್ಥಾಪನೆ ಆಗಬೇಕು. ವಕೀಲರ ಭವನ ಕಟ್ಟಡ ಕುರಿತು ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್. ಕಠಾಣಿ ಸಾಕಷ್ಟು ಪ್ರಯತ್ನ ಮಾಡಿದರೂ ಅವರ ಅವಧಿಯಲ್ಲಿ ಸಾಧ್ಯವಾಗಲಿಲ್ಲ. ಸದ್ಯ ನೂತನ ಅಧ್ಯಕ್ಷ ಮಾಧವ ದೇಶಪಾಂಡೆ ಮತ್ತು ಅವರ ಪದಾಧಿಕಾರಿಗಳ ಮೂಲಕ ವಕೀಲರ ಬಹುದಿನದ ಕನಸು ನನಸಾಗಲಿ ಎಂದು ಹೇಳಿದರು.

ನೂತನ ಅಧ್ಯಕ್ಷ ಮಾಧವ ದೇಶಪಾಂಡೆ ಮಾತನಾಡಿ, ವಕೀಲರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಎರಡನೇ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಅವರ ಕೆಲಸಮಾಡುತ್ತೇನೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ರಾಜ್ಯಾಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಆಯ್ಕೆಯಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದ ನಂತರ ಗಣ್ಯರು ಹಾಗೂ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೀಲರ ಸಂಘದ ಚುನಾವಣಾಧಿಕಾರಿ ಎಲ್.ವೈ. ಜಡಿ, ಪ್ರಧಾನ ದಿವಾಣಿ ನ್ಯಾಯಾಧೀಶ ಬಸವರಾಜ ನೇಸರಗಿ, ಅಪರ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ, ಸರ್ಕಾರಿ ಸಹಾಯಕ ಅಭಿಯೋಜಕರಾದ ಎಸ್.ಕೆ. ಹುಣಚಗಿ, ಎನ್.ಎಚ್. ಹೊಸಮನಿ, ನೂತನ ಅಧ್ಯಕ್ಷ ಮಾಧವ ದೇಶಪಾಂಡೆ, ಮಾಜಿ ಅಧ್ಯಕ್ಷ ಪ್ರಕಾಶ ಕಠಾಣಿ, ಎಸ್.ಎಂ. ಉಪ್ಪಾರ, ಎಂ.ಎ. ಸಂಗಮಕರ, ನೂತನ ಉಪಾಧ್ಯಕ್ಷ ವೀರೇಶ ಬಂಡಿ, ಕಾರ್ಯದರ್ಶಿ ರಮೇಶ ಕೊಕಾಟಿ, ಸಹ ಕಾರ್ಯದರ್ಶಿ ಎಂ.ಎಚ್. ಮಳ್ಳಿ, ಖಜಾಂಚಿಗಳಾದ ಕೆ.ಆರ್. ಜಲರೆಡ್ಡಿ, ಎ.ಸಿ. ಗೌಡರ ಉಪಸ್ಥಿತರಿದ್ದರು.

ರಾಜ್ಯದಲ್ಲಿ 7 ಜನ ನಕಲಿ ವಕೀಲರ ಮೇಲೆ ಪ್ರಕರಣ ದಾಖಲು ಈಗಾಗಲೇ ರಾಜ್ಯದಲ್ಲಿ 6 ಜನ ನಕಲಿ ವಕೀಲರ ಮೇಲೆ ಪ್ರಕರಣ ದಾಖಲಾಗಿದೆ. ಗುರುವಾರ ಬೆಳಗಾವಿಯಲ್ಲಿ ಕೂಡ ಒಂದು ಪ್ರಕರಣ ದಾಖಲಾಗಿದ್ದು, ಬಾಗಲಕೋಟೆ ಮತ್ತು ಹುನಗುಂದದಲ್ಲೂ ಇಂತಹ ನಕಲಿ ವಕೀಲರು ಕಂಡು ಬಂದರೆ ತಕ್ಷಣವೇ ಬಾರ್ ಕೌನ್ಸಿಲ್‌ಗೆ ಮಾಹಿತಿ ನೀಡಬೇಕು. ನಕಲಿ ವಕೀಲರ ಬಗ್ಗೆ ಬಾಗಲಕೋಟೆ ಜಿಲ್ಲೆಯ ಮೇಲೆ ಸಾಕಷ್ಟು ಅಪಸ್ವರ ಕೇಳಿ ಬರುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಕೀಲರು ಶ್ರಮಿಸಬೇಕು.

- ಎಸ್.ಎಸ್. ವಿಟ್ಟಲಕೋಡ. ರಾಜ್ಯಾಧ್ಯಕ್ಷರು, ರ್ನಾಟಕ ವಕೀಲರ ಪರಿಷತ್ ಬೆಂಗಳೂರು