ಸಾರಾಂಶ
ಇ-ತ್ಯಾಜ್ಯಗಳು ನೇರವಾಗಿ ಭೂಮಿಗೆ ಸೇರದಂತೆ ನೋಡಿಕೊಂಡು ಅವುಗಳನ್ನು ಸಂಗ್ರಹಿಸಿ ಸಂಘಟಿತ ಕಂಪನಿಗಳಿಗೆ ನೇರವಾಗಿ ನೀಡಿದಾಗ ಅವುಗಳನ್ನು ಮಾಲಿನ್ಯವಿಲ್ಲದೆ ಸಂಸ್ಕರಿಸಿ ವಿಲೇವಾರಿ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಇ- ತ್ಯಾಜ್ಯದಿಂದ ಜಾಗತೀಕರಣ ಮಟ್ಟದಲ್ಲಿ ಋಣಾತ್ಮಕ ಬದಲಾವಣೆಯಾಗುತ್ತಿದ್ದು, ಅದು ಪರಿಸರದ ಮೇಲೂ ದುಷ್ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ಎನ್‌ಪಿಇ ವೆಸ್ಟ್ ಪ್ರೈವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ನಾಗೇಂದ್ರ ರಾವ್ ತಿಳಿಸಿದರು.ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗ ಐಕ್ಯುಎಸಿ ಸಹಯೋಗದೊಂದಿಗೆ ನಡೆದ ‘ಇ-ತ್ಯಾಜ್ಯ ಸಂಗ್ರಹಣೆ ಮತ್ತು ದೇಣಿಗೆ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇ-ತ್ಯಾಜ್ಯಗಳು ನೇರವಾಗಿ ಭೂಮಿಗೆ ಸೇರದಂತೆ ನೋಡಿಕೊಂಡು ಅವುಗಳನ್ನು ಸಂಗ್ರಹಿಸಿ ಸಂಘಟಿತ ಕಂಪನಿಗಳಿಗೆ ನೇರವಾಗಿ ನೀಡಿದಾಗ ಅವುಗಳನ್ನು ಮಾಲಿನ್ಯವಿಲ್ಲದೆ ಸಂಸ್ಕರಿಸಿ ವಿಲೇವಾರಿ ಮಾಡಲಾಗುವುದು ಎಂದ ಅವರು, ದೆಹಲಿಯಲ್ಲಾಗುತ್ತಿರುವ ಮಾಲಿನ್ಯದ ಬಗ್ಗೆ ತಿಳಿಸಿ ಇ- ತ್ಯಾಜ್ಯಗಳ ಸಂಗ್ರಹಣೆ, ವಿಲೇವಾರಿ ಮತ್ತು ಸಂಸ್ಕರಣೆಯ ವಿವಿಧ ವಿಧಾನಗಳ ಬಗ್ಗೆ ತಿಳಿಸಿದರು.ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ. ನಿಶಾಂತ್ ಎ.ನಾಯ್ಡು ಮಾತನಾಡಿ, ವಿದ್ಯಾರ್ಥಿಗಳು ಅವರ ಮನೆಯವರಿಗೆ ತಿಳಿ ಹೇಳಿ, ಇ-ತ್ಯಾಜ್ಯಗಳನ್ನು ಸಂಗ್ರಹಿಸಿ ಸಂಘಟಿತ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಬೇಕು. ಅದರಿಂದ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಉತ್ತಮ ಜಲ, ಉತ್ತಮ ಭೂಮಿ ಎಲ್ಲವನ್ನು ಕೊಡಲು ಸಾಧ್ಯವಾಗುತ್ತದೆ. ಇ- ತ್ಯಾಜ್ಯದ ಪುನರ್‌ಬಳಕೆಯ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, ಅದು ಕಾರ್ಯಗತವಾದಾಗ ಎಲ್ಲರೂ ಪರಿಸರ ಸ್ನೇಹಿಯಾಗಿ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭೌತಶಾಸ್ತ್ರದ ಮುಖ್ಯಸ್ಥ ಎಂ.ಭವ್ಯ ಹಾಗೂ ಐಕ್ಯುಎಸಿ ಸಂಯೋಜಕ ರಘುನಂದನ್ ಉಪಸ್ಥಿತರಿದ್ದರು.