ಸಾರಾಂಶ
ಹುಬ್ಬಳ್ಳಿ:
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಹೇಳಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಶಕ್ತಿ ಯೋಜನೆಯಿಂದ ವಾಯುಮಾಲಿನ್ಯ ಕಡಿಮೆಯಾಗಿದೆ ಎಂದು ತಿಳಿಸಿದರು.ಇಲ್ಲಿನ ನೆಹರು ಮೈದಾನದಲ್ಲಿ ಜಿಲ್ಲಾಡಳಿತ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಗಳ ಸಹಯೋಗದೊಂದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಯು ಮಾಲಿನ್ಯ ತಡೆಯಲು ಸಾರ್ವಜನಿಕ ಸಾರಿಗೆ ಬಳಸುವುದು ಅನಿವಾರ್ಯವಾಗಿದೆ ಎಂದಿರುವ ಅವರು, ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ವಾಯ ಮಾಲಿನ್ಯ ಅಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಕೈಗಾರಿಕೆಗಳಿಂದಲೂ ಉಂಟಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಮಂಡಳಿ ಚಾಟಿ ಬೀಸಿದೆ. ಮಂಡಳಿಯು ನಿತ್ಯ ವಾಯು ಗುಣಮಟ್ಟ ಮಾಪನ ಮಾಡುತ್ತಿದೆ ಎಂದು ಹೇಳಿದರು.ಜನರು ಜಾಗೃತರಾಗಲಿ:
ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತಿದಿನ 3.5 ಲಕ್ಷದಿಂದ 4 ಲಕ್ಷ ಹಾಲಿನ ಪಾಕೆಟ್ ಬಳಕೆ ಮಾಡಲಾಗುತ್ತದೆ. ಹಾಲಿನ ಪಾಕೆಟ್‌ನ ಮೂಲೆ ಕತ್ತರಿಸಿ ತುಣಕನ್ನು ಸಂಸ್ಕರಿಸದೆ ಎಸೆಯಲಾಗುತ್ತದೆ. ಅದು ಭೂಮಿ ಅಥವಾ ಪರಿಸರವನ್ನು ಸೇರುತ್ತಿದೆ. ಇದು ಸಣ್ಣ ವಿಷಯವಾದರೂ ಇದರಿಂದ ಪರಿಸರ ಎಷ್ಟು ಹಾನಿಯಾಗುತ್ತಿದೆ ಎಂಬುದನ್ನು ನಾವು ಯೋಚಿಸಬೇಕಿದೆ. ಮಾಲಿನ್ಯ ನಿಯಂತ್ರಣ ಮಾಡುವುದು ಕೇವಲ ಕಾಯ್ದೆ ಹಾಗೂ ಮಂಡಳಿಯಿಂದ ಮಾತ್ರ ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು. ಇದೇ ಕಾರಣಕ್ಕೆ ಸುವರ್ಣ ಮಹೋತ್ಸವವನ್ನು ಬೆಂಗಳೂರಿನಲ್ಲಿ ಮಾತ್ರ ಸೀಮಿತಗೊಳಿಸದೇ ರಾಜ್ಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶ ಮಂಡಳಿಯದ್ದು ಎಂದರು.ಶೇ.20ಕ್ಕಿಂತ ಕಡಿಮೆ ಅರಣ್ಯ:
ಶೇ.33ರಷ್ಟು ಅರಣ್ಯ ಪ್ರದೇಶವನ್ನು ಒಂದು ದೇಶ ಹೊಂದಬೇಕು. ಆದರೆ ಶೇ.20ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಹೊಂದಿದ್ದೇವೆ. ಗ್ರೀನ್ ಟ್ರಿಬುನಲ್ ಕೂಡ ಪರಿಸರ ರಕ್ಷಣೆಗೆ ಒತ್ತು ನೀಡಿದೆ. ಅತಿಯಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಅಂತರ್ಜಲ ಕೂಡ ಕಲುಷಿತಗೊಳ್ಳುತ್ತಿದೆ. ನಗರ ಪ್ರದೇಶದಲ್ಲಿನ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕಿದೆ. ವಾಯು ಮಾಲಿನ್ಯ ತಡೆಗೆ ಕ್ರಮ ವಹಿಸಬೇಕಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಶಾಲಾ-ಕಾಲೇಜುಗಳಲ್ಲಿ ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ರೀಲ್ಸ್ ಮಾಡಿದವರಿಗೆ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.ಧಾರವಾಡ ಜಿಲ್ಲೆಯಲ್ಲಿ 6 ವಾಯು ಮಾಪನ ಗುಣಮಟ್ಟ ಕೇಂದ್ರ ಸ್ಥಾಪನೆ ಮಾಡಲಾಗುವುದು. ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕಿದೆ. ಕುಡಿಯುವ ನೀರಿನ ಗುಣಮಟ್ಟ ಮಾಪನ ಮಾಡಬೇಕು. ಪರಿಸರ ರಕ್ಷಣೆಗೆ ಸೇವೆ ಸಲ್ಲಿಸಿದವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪರಿಸರದ ಕಾಳಜಿ ಬಹಳಷ್ಟು ಅವಶ್ಯಕವಾಗಿದೆ. ಕೊರೋನಾ ಸಂದರ್ಭದಲ್ಲಿ ನಾವೆಲ್ಲರೂ ಸಾಕಷ್ಟು ತೊಂದರೆ ಎದುರಿಸಿದ್ದೇವೆ. ಆಕ್ಸಿಜನ್ ಖರೀದಿ ಮಾಡಿದ್ದುಂಟು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ತ್ಯಾಜ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕಸಮುಕ್ತ, ಮಾಲಿನ್ಯ ಮುಕ್ತ ನಗರ ನಿರ್ಮಿಸಲು ಎಲ್ಲರೂ ಪಣ ತೊಡಬೇಕು. ಕೈಗಾರಿಕೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ತರಬೇತಿ ನೀಡಬೇಕಿದೆ ಎಂದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ್ ಮಾತನಾಡಿ, ಕೈಗಾರಿಕೆಗಳು ಸಂಸ್ಕರಣೆ ಮಾಡದೇ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವುದರಿಂದ ಕಲುಷಿತವಾಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.ಮಾಜಿ ಸಂಸದ ಐ.ಜಿ. ಸನದಿ, ಶಾಸಕ ಅರಬೈಲ್ ಶಿವರಾಮ ಹೆಬ್ಬಾರ, ಮೇಯರ್ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಧಾರವಾಡ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸತೀಶ ಪಿ ನಾಯ್ಕ, ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್. ಲಿಂಗರಾಜ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್. ಘಾಳಿ, ಹುಡಾ ಆಯುಕ್ತ ಸಂತೋಷ್ ಬಿರಾದಾರ, ಮಂಡಳಿಯ ಪರಿಸರ ಅಧಿಕಾರಿಗಳಾದ ಗೋಪಾಲಕೃಷ್ಣ ಬಿ. ಸಣತಂಗಿ, ಐ.ಎಚ್. ಜಗದೀಶ, ಬಿ.ಕೆ. ಸಂತೋಷ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಇದೇ ವೇಳೆ ಪರಿಸರಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗಳು, ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.
ಡಾ. ಅನಿಲ್ ಮೇತ್ರಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಪರಿಸರ ಅಧಿಕಾರಿ ಲೋಕೇಶ ಸಂವಿಧಾನ ಪೀಠಿಕೆ ಬೋಧಿಸಿದರು. ಆಕಾಶವಾಣಿ ಉದ್ಘೋಷಕಿ ಮಾಯಾ ರಾಮನ್ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))