ಅಕ್ರಮ ಮದ್ಯ ಮಾರಾಟದ ಮೇಲೆ ಹದ್ದಿನ ಕಣ್ಣು

| Published : Apr 24 2024, 02:17 AM IST

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆ ಕುಷ್ಟಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ.

400 ಲೀಟರ್ ಮದ್ಯ ವಶಕ್ಕೆ, 94 ಪ್ರಕರಣ ದಾಖಲು, 16 ಬೈಕುಗಳು ವಶಕ್ಕೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಲೋಕಸಭೆ ಚುನಾವಣೆ ಹಿನ್ನೆಲೆ ಕುಷ್ಟಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಹಾಗೂ ಸಾಗಾಟದ ಹಿನ್ನೆಲೆ ದಾಳಿ ಮಾಡಲಾಗಿದ್ದು, ಮಾ. 16ರಿಂದ ಏ. 22ರ ವರೆಗೆ ಸುಮಾರು 94 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 19 ಘೋರ ಪ್ರಕರಣಗಳು, 11 ಬಿಎಲ್‌ಸಿ ಪ್ರಕರಣಗಳು, 64 (15ಎ) ಪ್ರಕರಣಗಳು ದಾಖಲಾಗಿದ್ದು, ಸುಮಾರು 400 ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ನಿರೀಕ್ಷಕ ಶಂಕರ್ ದೊಡ್ಡಮನಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಅಬಕಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪ್ರಕರಣ ದಾಖಲಿಸುವ ಮೂಲಕವಾಗಿ ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಮಾಹಿತಿ ಆಧರಿಸಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಕೆಲವೆಡೆ ದಾಳಿ ಮಾಡಿ ಪ್ರಕರಣ ದಾಖಲಿಸುವ ಕಾರ್ಯ ನಡೆಯುತ್ತಿದೆ.

75 ಜನರು ಅರೆಸ್ಟ್:

ಚುನಾವಣೆ ನೀತಿ ಸಂಹಿತೆಯು ಜಾರಿಗೆ ಬಂದ ದಿನದಿಂದ ಇಲ್ಲಿಯವರೆಗೂ ಒಟ್ಟು 94 ಕೇಸುಗಳು ದಾಖಲಾಗಿದ್ದು, ಅದರಲ್ಲಿ 75 ಜನರನ್ನು ವಶಕ್ಕೆ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

16 ದ್ವಿಚಕ್ರವಾಹನಗಳು ಸೀಜ್:

ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಸಾಗಾಟದ ಸಮಯದಲ್ಲಿ ದಾಳಿ ಮಾಡಿದಾಗ ಸುಮಾರು 16 ಬೈಕುಗಳನ್ನು ಸೀಜ್ ಮಾಡಲಾಗಿದೆ.

ಮದ್ಯದ ವಿವರ:

ಮಾ. 16ರಿಂದ ಏ. 22ರವರೆಗೆ ಸುಮಾರು 400 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 388 ಲೀಟರ್ ದೇಶಿಯ ಮದ್ಯ ಹಾಗೂ 12 ಲೀಟರ್ ಬಿಯರ್‌ ಬಾಟಲಿಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚುನಾವಣೆಯ ನೀತಿ ಸಂಹಿತೆಯ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಒಂದು ತಿಂಗಳಲ್ಲಿ 94 ಕೇಸುಗಳನ್ನು ಮಾಡಿದ್ದೇವೆ. 16 ಬೈಕ್‌ಗಳೊಂದಿಗೆ ಸುಮಾರು 400 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕ ಶಂಕರ್ ದೊಡ್ಡಮನಿ ತಿಳಿಸಿದ್ದಾರೆ.