ಹವಾಮಾನ ಆಧರಿತ ಬೆಳೆವಿಮೆ ಶೀಘ್ರ ಬಿಡುಗಡೆ: ಸತೀಶ ಹೆಗಡೆ

| Published : Jan 10 2025, 12:49 AM IST

ಸಾರಾಂಶ

ಬೆಳೆವಿಮೆ ಯಾವ ಕಾರಣದಿಂದ ಜಮಾ ಆಗಿಲ್ಲ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ೨೦೨೩- ೨೦೨೪ನೇ ಸಾಲಿನ ಬೆಳೆ ವಿಮೆ ಕುರಿತು ತೋಟಗಾರಿಕಾ ಇಲಾಖೆಯು ವಿಮಾ ಕಂಪನಿಯ ಜತೆ ನಿರಂತರ ಸಂಪರ್ಕದಲ್ಲಿದೆ. ಹನಿ ನೀರಾವರಿಗೆ ಶೇ. ೯೦ರಷ್ಟು ಸಹಾಯಧನ ಲಭ್ಯವಿದೆ.

ಶಿರಸಿ: ಹವಾಮಾನ ಆಧರಿತ ಬೆಳೆವಿಮೆ ಮಾಹಿತಿಯಲ್ಲಿ ಕೆಲ ದೋಷ ಕಂಡುಬಂದಿರುವ ಪರಿಣಾಮ ವಿಮಾ ಕಂಪನಿಯವರು ಮರು ಸಲ್ಲಿಕೆ ಮಾಡಿದ್ದಾರೆ. ಇದು ೪೫ ದಿನದೊಳಗಡೆ ವಿಲೇವಾರಿ ಆಗಿ, ರೈತರ ಖಾತೆಗೆ ಜಮಾ ಆಗುವ ಸಾಧ್ಯತೆಯಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದರು.ನಗರದ ತಾಪಂ ಆವಾರದ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.ಬೆಳೆವಿಮೆ ಯಾವ ಕಾರಣದಿಂದ ಜಮಾ ಆಗಿಲ್ಲ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ೨೦೨೩- ೨೦೨೪ನೇ ಸಾಲಿನ ಬೆಳೆ ವಿಮೆ ಕುರಿತು ತೋಟಗಾರಿಕಾ ಇಲಾಖೆಯು ವಿಮಾ ಕಂಪನಿಯ ಜತೆ ನಿರಂತರ ಸಂಪರ್ಕದಲ್ಲಿದೆ. ಹನಿ ನೀರಾವರಿಗೆ ಶೇ. ೯೦ರಷ್ಟು ಸಹಾಯಧನ ಲಭ್ಯವಿದೆ ಎಂದರು.ಪಂಡಿತ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂದೀಪ ಹೆಗಡೆ ಮಾತನಾಡಿ, ಎಚ್‌ಎಂಪಿವಿ ನಮ್ಮ ತಾಲೂಕಿನಲ್ಲಿ ಕಂಡುಬಂದಿಲ್ಲ. ಸರ್ಕಾರದ ಸೂಚನೆಯಂತೆ ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿ ೮ ಆಕ್ಸಿಜನ್ ಹಾಸಿಗೆ ಮೀಸಲಿಟ್ಟಿದ್ದೇವೆ. ರೋಗದ ಕುರಿತು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, ತಾಲೂಕಿಗೆ ಮಂಜೂರಾಗಿದ್ದ ೩೦ ವಿವೇಕ ಕೊಠಡಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ನಗರ ಭಾಗದ ಶಾಲೆಗಳಿಗೆ ೮ ಹಾಗೂ ಗ್ರಾಮೀಣ ಭಾಗಗಳ ಶಾಲೆಗೆ ೮ ಶೌಚಾಲಯ ಮಂಜೂರಾಗಿತ್ತು. ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯನ್ನು ಹೊರತುಪಡಿಸಿ, ಉಳಿದ ಎಲ್ಲ ಶೌಚಾಲಯಗಳ ಕಾಮಗಾರಿ ಮುಕ್ತಾಯಗೊಂಡಿದೆ. ಅನಿರ್ಬಂಧಿತ ಯೋಜನೆಯಲ್ಲಿ ೩೦ ಶಾಲೆಗಳಿಗೆ ಅನುದಾನ ಮಂಜೂರಿಯಾಗಿದ್ದು, ಕೆಲಸ ಪ್ರಾರಂಭವಾಗಬೇಕು. ೧೦ನೇ ವರ್ಗದ ವಿದ್ಯಾರ್ಥಿಗಳಿಗೆ ೩ ಸರಣಿ ಪರೀಕ್ಷೆ ನಡೆಸಬೇಕು. ವೇಳಾಪಟ್ಟಿ ಬಿಡುಗಡೆಯಾಗಿದೆ ಎಂದರು.

ಗ್ರೇಡ್- ೨ ತಹಸೀಲ್ದಾರ್ ರಮೇಶ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ೨೩ ಮನೆ ಸಂಪೂರ್ಣ ಹಾನಿಯಾಗಿತ್ತು. ೨೧ ಮನೆಗಳಿಗೆ ಪರಿಹಾರ ನೀಡಲಾಗಿದೆ. ಒಬ್ಬರಿಗೆ ವಸತಿ ಯೋಜನೆಯಲ್ಲಿ ಮನೆ ಮಂಜೂರಿಯಾಗಿದೆ. ಒಬ್ಬರಿಗೆ ರೇಷನ್ ಕಾರ್ಡ್ ಇಲ್ಲವಾಗಿದೆ. ಈ ಕಾರಣದಿಂದ ಇಬ್ಬರಿಗೆ ಮಾತ್ರ ಬಾಕಿ ಇದೆ. ಮಾನವ ಹಾನಿಗೆ ₹೫ ಲಕ್ಷ, ೩ ಜಾನುವಾರುಗಳಿಗೆ ತಲಾ ₹೩೫ ಸಾವಿರ ಪರಿಹಾರ ನೀಡಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಮಾತನಾಡಿ, ನಗರದಲ್ಲಿ ೫ ವಸತಿಗೃಹ ಹಾಗೂ ಬನವಾಸಿಉಲ್ಲಿ ವಸತಿಗೃಹ ಹಾಗೂ ೧ರಿಂದ ೫ನೇ ತರಗತಿಯ ವಸತಿ ಶಾಲೆ ಇದೆ. ಸಿಬ್ಬಂದಿ ಕೊರತೆಯಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಅರಣ್ಯ ಹಕ್ಕು ಅರ್ಜಿ ತಿರಸ್ಕಾರ ಆಗಿರುವುದು ಪುನರ್ ಪರಿಶೀಲನೆ ಆರಂಭವಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಮಾತನಾಡಿ, ತಾಲೂಕಿನಲ್ಲಿ ೭೦ ಹಾಗೂ ೭೭ ಸಹಾಯಕಿಯರ ಹುದ್ದೆ ಖಾಲಿ ಇದೆ. ಅರ್ಜಿ ಕರೆಯಲಾಗಿತ್ತು. ತಾಂತ್ರಿಕ ಕಾರಣದಿಂದ ಅದನ್ನು ಸ್ಥಗಿತಗೊಳಿಸಿ, ಮರು ಅರ್ಜಿ ಕರೆಯಲಾಗಿದೆ. ೭ ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗುತ್ತಿದೆ. ೩ ಕಟ್ಟಡದ ಕಾಮಗಾರಿ ಪ್ರಾರಂಭವಾಗುವುದು ಬಾಕಿ ಇದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ೫೦೯೩೬ ಮಹಿಳೆಯರು ನೋಂದಣಿ ಆಗಿದ್ದಾರೆ ಎಂದರು.ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ನಾಗರಾಜ ಪಾಟೀಲ ಮಾತನಾಡಿದರು. ಕೃಷಿ, ಆಯುಷ್, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಆರೋಗ್ಯ ಇನ್ನಿತರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ವರದಿಯನ್ನು ಮಂಡಿಸಿದರು.

ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿರುವ ಬಸ್‌ಗಳು

ತೀರಾ ಹಳೆಯದಾದ ಬಸ್‌ಗಳು ಓಡಿಸಲಾಗುತ್ತಿದೆ. ಇದರಿಂದ ಮಾರ್ಗಮಧ್ಯೆಯಲ್ಲಿ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ ಎಂದು ಸಾರ್ವಜನಿಕರಿಂದ ದೂರು ಬಂದಿದೆ ಎಂದು ಡಿಪೋ ಮ್ಯಾನೇಜರ್ ಸವೇಶ ನಾಯ್ಕ ಅವರನ್ನು ತಾಪಂ ಆಡಳಿತಾಧಿಕಾರಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಘಟಕ ವ್ಯವಸ್ಥಾಪಕ, ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದೇವೆ. ೧೮ ಮಾರ್ಗಗಳ ಆರಂಭಕ್ಕೆ ಬೇಡಿಕೆ ಇದೆ ಎಂದು ಉತ್ತರಿಸಿದರು.