ಸಾರಾಂಶ
ಹಳಿಯಾಳ: 21ನೇ ಶತಮಾನವನ್ನು ಸ್ಪರ್ಧೆಯ ಯುಗವೆಂದು ಹೇಳಲಾಗುತ್ತಿದ್ದರೂ ಹಣ ಮಾಡುವ ಹುಚ್ಚು ಪ್ರಾರಂಭವಾಗಿದೆ. ಇನ್ನೊಂದೆಡೆ ಮೋಸ ಮಾಡುವುದು ತಪ್ಪೆಂದು ಗೊತ್ತಿದ್ದರೂ ಮೋಸ ಮಾಡುವ ಪ್ರವೃತ್ತಿಯು ಬೆಳೆಯಲಾರಂಭಿಸಿದೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಕುಲುಷಿತಗೊಳ್ಳಲಾರಂಭಿಸಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ವಿಆರ್‌ಡಿಎಂ ಟ್ರಸ್ಟ್ ಅಧ್ಯಕ್ಷ ಆರ್.ವಿ. ದೇಶಪಾಂಡೆ ಆತಂಕ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಆರ್‌ಸೆಟಿ ಸಭಾಂಗಣದಲ್ಲಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಣ ಸಂಪಾದನೆ ಮಾಡಿ. ಆದರೆ ಮಾರ್ಗ ಉತ್ತಮವಾಗಿರಲಿ. ಅಡ್ಡ ಮಾರ್ಗದಲ್ಲಿ ಗಳಿಸಿದ ಸಂಪತ್ತು, ಹಣದಿಂದ ಆತ್ಮತೃಪ್ತಿ ದೊರೆಯದು. ಹಣ ಮಾಡುವುದೇ ಜೀವನದ ಮೂಲ ಉದ್ದೇಶವಾಗಿರಬಾರದು. ಬದಲಾಗಿ ಸಂಪಾದಿಸಿದ ಹಣವು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಸಲು ಮುಂದಾಗಬೇಕು ಎಂದರು.
ದೇಶದೆಲ್ಲೆಡೆ ಕೌಶಲ್ಯ ತರಬೇತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ನಮ್ಮ ಸಂಸ್ಥೆಯಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ಕೌಶಲ್ಯ ತರಬೇತಿ ಆರಂಭಿಸಿದೆ ಎಂದರು. ನಮ್ಮ ಆರ್‌ಸೆಟಿಯಲ್ಲಿ ಈವರೆಗೆ 26 ಸಾವಿರಕ್ಕಿಂತ ಹೆಚ್ಚು ಶಿಬಿರಾರ್ಥಿಗಳಿಗೆ ಸ್ವಾವಲಂಬಿ ಉದ್ಯೋಗ ತರಬೇತಿಯನ್ನು ನೀಡಲಾಗಿದ್ದು, ಅವರು ಯಶಸ್ವಿ ಜೀವನವನ್ನು ನಡೆಸುತ್ತಿದ್ದಾರೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಟ್ರಿಟಾನ್ ವಾಲ್ವಸ್ ಲಿ ಉದ್ಯಮದ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಗೋಕರ್ಣ ಮಾತನಾಡಿ, ಉತ್ತರ ಕನ್ನಡ ನನ್ನ ಜಿಲ್ಲೆಯಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಮಾಡಿದ ಶೈಕ್ಷಣಿಕ ಸಾಧನೆಯನ್ನು ನೋಡಿ ಹೆಮ್ಮೆಯೆನ್ನಿಸುತ್ತಿದೆ ಎಂದರು. ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಮಾತನಾಡಿದರು. ಟ್ರಸ್ಟ್ ಧರ್ಮದರ್ಶಿ ರಾಧಾಬಾಯಿ ದೇಶಪಾಂಡೆ, ಕಾರ್ಯದರ್ಶಿ ಶ್ಯಾಮ ಕಾಮತ ಇದ್ದರು. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಿಪಿಐಟಿಐ ಪ್ರಾಚಾರ್ಯ ದಿನೇಶ ನಾಯ್ಕ ವಂದಿಸಿದರು. ಶ್ರೀಧರ ಬುಳ್ಳಣ್ಣನವರ ಹಾಗೂ ನೆಲ್ಸಿ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರ್ವಹಿಸಿದರು.