ಕುಶಾಲನಗರ ಸುತ್ತಮುತ್ತ ಭೂಮಿ ಕಂಪನ ಅನುಭವ

| Published : Aug 24 2024, 01:22 AM IST

ಸಾರಾಂಶ

ಹೆಬ್ಬಾಲೆ, ಹಕ್ಕೆ, ಕೂಡು ಮಂಗಳೂರು, ಮುಳ್ಳುಸೋಗೆ, ಕುಶಾಲನಗರ, ಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಭೂಮಿ ಕಂಪಿಸಿರುವುದಾಗಿ ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.ಕೆಲವೇ ಸೆಕೆಂಡುಗಳ ಕಾಲ ನಡೆದ ಈ ಘಟನೆಯಿಂದ ಈ ಭಾಗದ ಗ್ರಾಮಾಂತರ ಪ್ರದೇಶದ ಜನತೆ ತಲ್ಲಣಗೊಂಡ ದೃಶ್ಯ ಗೋಚರಿಸಿತು. ಭೂಕಂಪನ ಅಧಿಕೃತವಾಗಿ ದೃಢಪಟ್ಟಿಲ್ಲ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವದೊಂದಿಗೆ ಆತಂಕ ಮೂಡಿಸಿದ ಘಟನೆ ಶುಕ್ರವಾರ ಬೆಳಗಿನ ವೇಳೆ ನಡೆದಿದೆ.

ಹೆಬ್ಬಾಲೆ, ಹಕ್ಕೆ, ಕೂಡು ಮಂಗಳೂರು, ಮುಳ್ಳುಸೋಗೆ, ಕುಶಾಲನಗರ, ಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಭೂಮಿ ಕಂಪಿಸಿರುವುದಾಗಿ ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.ಕೆಲವೇ ಸೆಕೆಂಡುಗಳ ಕಾಲ ನಡೆದ ಈ ಘಟನೆಯಿಂದ ಈ ಭಾಗದ ಗ್ರಾಮಾಂತರ ಪ್ರದೇಶದ ಜನತೆ ತಲ್ಲಣಗೊಂಡ ದೃಶ್ಯ ಗೋಚರಿಸಿತು.

ಈ ಬಗ್ಗೆ ಅಲ್ಲಲ್ಲಿ ಜನರು ಅಭಿಪ್ರಾಯಗಳನ್ನು ತಿಳಿಸಿದರೂ, ಭೂಕಂಪನ ಬಗ್ಗೆ ಖಚಿತ ಮಾಹಿತಿ ಎಲ್ಲಿಯೂ ಹೊರಬಿದ್ದಿಲ್ಲ.

ಯಾವುದೇ ಭೂಕಂಪನ ಮಾಪಕ ಕೇಂದ್ರಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ಎಲ್ಲಿಯೂ ದಾಖಲೆಗಳು ಕಂಡುಬಂದಿಲ್ಲ ಎಂದು ಬೆಂಗಳೂರಿನ ಹಿರಿಯ ಭೂವಿಜ್ಞಾನಿ ಡಾ.ಎಚ್‌.ಎಸ್.ಎಂ.ಪ್ರಕಾಶ್‌ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ದಾಖಲೆಗಳ ಪ್ರಕಾರ ಇದೇ ಅವಧಿಯಲ್ಲಿ ಹರಿಯಾಣ ಮತ್ತು ಮಣಿಪುರ ಭಾಗಗಳಲ್ಲಿ ಅಲ್ಪ ಪ್ರಮಾಣದ ಭೂಕಂಪನ ನಡೆದಿರುವುದಾಗಿ ಮಾಹಿತಿಗಳು ಲಭ್ಯವಾಗಿವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ..

ಬೆಳಗ್ಗೆ ಭೂಮಿ ಕಂಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟೀಕರಣ ಲಭ್ಯವಾಗಿಲ್ಲ.

ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕಾ ಕೇಂದ್ರಗಳಲ್ಲಿ ಭಾರಿ ಪ್ರಮಾಣದ ಸ್ಪೋಟಗಳು ನಡೆಯುತ್ತಿರುವ ಬಗ್ಗೆ ನಾಗರಿಕರು ಆರೋಪಿಸಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.