ಟಫ್‌ ಕ್ಲಬ್‌ಗೆ ಸಿಎಂ ಆಪ್ತನ ನಿಯಮಬಾಹಿರ ನೇಮಕ: ಲೋಕಾ ಪೊಲೀಸರ ಕೋರ್ಟ್‌ ಗರಂ

| Published : Aug 24 2024, 01:22 AM IST

ಟಫ್‌ ಕ್ಲಬ್‌ಗೆ ಸಿಎಂ ಆಪ್ತನ ನಿಯಮಬಾಹಿರ ನೇಮಕ: ಲೋಕಾ ಪೊಲೀಸರ ಕೋರ್ಟ್‌ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ತಮ್ಮ ಆಪ್ತ ವಿವೇಕಾನಂದ ಅವರಿಗೆ ಬೆಂಗಳೂರು ಟರ್ಫ್‌ ಕ್ಲಬ್‌ನ ಸ್ವವರ್ಡ್‌ ಹುದ್ದೆಗೆ ನಿಯಮಬಾಹಿರ ನೇಮಕಾತಿ ಮಾಡಿರುವ ಪ್ರಕರಣ ಸಂಬಂಧ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಪೊಲೀಸರ ಧೋರಣೆಗೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಗರಂ ಆಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ವಿವೇಕಾನಂದ ಅವರಿಗೆ ಬೆಂಗಳೂರು ಟರ್ಫ್‌ ಕ್ಲಬ್‌ನ ಸ್ವವರ್ಡ್‌ ಹುದ್ದೆಗೆ ನಿಯಮಬಾಹಿರ ನೇಮಕಾತಿ ಮಾಡಿರುವ ಪ್ರಕರಣ ಸಂಬಂಧ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಪೊಲೀಸರ ಧೋರಣೆಗೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಗರಂ ಆಗಿದೆ.

ಲೋಕಾಯುಕ್ತ ಎಡಿಜಿಪಿ ಅವರಿಗೆ ನೊಟೀಸ್‌ ಜಾರಿ ಮಾಡಿ ಮುಂದಿನ ವಿಚಾರಣೆಯಲ್ಲಿ ಖುದ್ದು ಹಾಜರಾಗುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ತಮ್ಮ ಆಪ್ತ ಸ್ನೇಹಿತ ವಿವೇಕಾನಂದ ಅವರಿಂದ 1.30 ಕೋಟಿ ರು. ಚೆಕ್‌ ರೂಪದಲ್ಲಿ ಪಡೆದು ಟರ್ಫ್‌ ಕ್ಲಬ್‌ನ ಅತ್ಯಂತ ಆಯಕಟ್ಟಿನ ಹುದ್ದೆಯಾದ ಸ್ಟಿವರ್ಡ್‌ ಹುದ್ದೆಗೆ ನಿಯೋಜಿಸುವ ಮೂಲಕ ಪ್ರಜಾ ಪ್ರತಿನಿಧಿಗಳ ಕಾಯ್ದೆಯಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ದೂರು ನೀಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ಲೋಕಾಯುಕ್ತ ಪೊಲೀಸರ ನಡೆಯನ್ನು ಎನ್‌.ಆರ್‌.ರಮೇಶ್‌ ಪ್ರಶ್ನಿಸಿದ್ದರಿಂದ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಮೊದಲಿನಿಂದ ಹೊಸದಾಗಿ ಪ್ರಾರಂಭಿಸಿ ಆರು ತಿಂಗಳೊಳಗಾಗಿ ಸಮರ್ಪಕವಾದ ಹೊಸ ತನಿಖಾ ವರದಿಯನ್ನು ಸಲ್ಲಿಸುವಂತೆ ಕಳೆದ ಫೆಬ್ರವರಿಯಲ್ಲಿ ಸೂಚನೆ ನೀಡಿತ್ತು.6 ತಿಂಗಳ ಗಡುವು ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಆರು ತಿಂಗಳ ಗಡುವು ಮುಗಿದರೂ ಹೊಸ ತನಿಖಾ ವರದಿಯನ್ನು ಸಲ್ಲಿಸದೇ ಇರುವುದಕ್ಕೆ ಲೋಕಾಯುಕ್ತ ಪರವಾದ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಮರು ತನಿಖೆಗೆ ಆದೇಶಿಸಿರುವ ವಿಷಯ ಲೋಕಾಯುಕ್ತದ ಎಡಿಜಿಪಿ ತಿಳಿದಿಲ್ಲದಿರುವುದರಿಂದ ಹೊಸದಾಗಿ ತನಿಖೆ ಪ್ರಾರಂಭವಾಗಿಲ್ಲ ಎಂಬ ವಿಷಯ ತಿಳಿದ ನ್ಯಾಯಾಲಯವು ಗರಂ ಆಯಿತು. ತಕ್ಷಣವೇ ಲೋಕಾಯುಕ್ತ ಎಡಿಜಿಪಿಗೆ ಈ ಸಂಬಂಧ ಕಾರಣ ಕೇಳಿ ನೋಟೀಸ್‌‍ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶ ನೀಡಿದೆ.