ಸಾರಾಂಶ
ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್ ಸಾರ್ವಜನಿಕರ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡುವಂತೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಸಮರ್ಪಕ ಕಡತ ವಿಲೇವಾರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್ ನೇತೃತ್ವದ ತಂಡ ಪಂಚಾಯಿತಿಯಲ್ಲಿ ವಿಲೇವಾರಿಯಾಗದ 9/11 ಅರ್ಜಿಗಳೇ ಹೆಚ್ಚಾಗಿರುವ 50ಕ್ಕೂ ಹೆಚ್ಚು ಕಡತಗಳನ್ನು ಪರಿಶೀಲಿಸಿ ಪಂಚಾಯಿತಿ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಪಂಚಾಯಿತಿಯಲ್ಲಿ ಇ- ಸ್ವತ್ತು ತಂತ್ರಾಂಶ ಹೊಸ ವರ್ಶನ್ ಅಳವಡಿಸಿರುವುದರಿಂದ ಒಂದು ತಿಂಗಳ ಅಂತರದಲ್ಲಿ 9/11 ಅರ್ಜಿ ಸಲ್ಲಿಕೆಗೆ ತೊಡಕುಟಾಗುತ್ತಿದೆ ಎಂದು ಪಿಡಿಒ ಲೋಕಾಯುಕ್ತ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದರು.ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್ ಸಾರ್ವಜನಿಕರ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡುವಂತೆ ಸೂಚಿಸಿದರು.
ಪಂಚಾಯಿತಿ ಸದಸ್ಯ ಧನರಾಜ್ ಸಸಿಹಿತ್ಲು ಅವರು ಸಮಸ್ಯೆಗಳ ಬಗ್ಗೆ ಲೋಕಾ ಅಧಿಕಾರಿಗಳಿಗೆ ವಿವರಿಸಿದರು. ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಎ., ಸಿಬ್ಬಂದಿ ಸುರೇಂದ್ರ ಮತ್ತಿತರರು ಇದ್ದರು.