ಸಾರಾಂಶ
- ಸುರಪುರದಲ್ಲಿ ನೌಕರರ ಸಂಘದ ಪ್ರತಿಭಟನೆ । ಕಾಮಗಾರಿಗೆ ವೆಚ್ಚ ಮಾಡಿದ ಹಣ ಕೊಡದ ಪಿಡಿಓ ವಿರುದ್ಧ ಆಕ್ರೋಶ
------ಕನ್ನಡಪ್ರಭ ವಾರ್ತೆ ಸುರಪುರ
ದೇವಾಪುರ ಗ್ರಾ.ಪಂ. ಕರ ವಸೂಲಿಗಾರನಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡ ಹಣವನ್ನು ಮರಳಿ ಕೊಡದ ಪಿಡಿಓ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಗರದ ತಾಲೂಕು ಪಂಚಾಯಿತಿ ಕಚೇರಿ ಎದುರು ರಾಜ್ಯ ಗ್ರಾ.ಪಂ. ನೌಕರರ ಸಂಘದ ಸದಸ್ಯರು ಪ್ರತಿಭಟಿಸಿ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮುಖಂಡರು, ದೇವಾಪುರ ಗ್ರಾ.ಪಂ. ಪಿಡಿಓ ದೇವಿಂದ್ರಪ್ಪ ಹಳ್ಳಿ ಮತ್ತು ಗ್ರಾ.ಪಂ. ಅಧ್ಯಕ್ಷ ರೇಣುಕಾ ಶಂಕರಗೌಡ, ಗ್ರಾ.ಪಂ. ವ್ಯಾಪ್ತಿಯಲ್ಲಿ ಮೋಟಾರ್ ದುರಸ್ತಿ ಮಾಡಿಸಿದ ಬಾಬತ್ತು, ರಸ್ತೆಗಳಿಗೆ ಮರಂ ಹಾಕಿದ ಟ್ರ‍್ಯಾಕ್ಟರ್ ಬಾಡಿಗೆ ಮತ್ತು ಗ್ರಾಮ ಸ್ವಚ್ಛತೆ ಕಾಪಾಡಿ ಚರಂಡಿ ಹೂಳೆತ್ತುವುದು ಕೂಲಿ ಹಣ, ಇತರೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಲ್ಲಪ್ಪ ಅವರು ಮಾಡಿದ ಕರ ವಸೂಲಿ ಹಣವನ್ನು ಬಳಸಿದ್ದಾರೆ.
ಹಣ ನೀಡಿದರೆ ಕರ ವಸೂಲಿಗಾರ, ಖಾತೆಗೆ ಜಮೆ ಮಾಡುತ್ತೇನೆ ಎಂದರೂ ಹಣ ನೀಡಿಲ್ಲ. ಇದರಿಂದ ಹೆದರಿ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ. ಈ ಆತ್ಮಹತ್ಯೆಗೆ ಕಾರಣರಾದ ಪಿಡಿಓ ಮತ್ತು ಅಧ್ಯಕ್ಷರು, ಅಧ್ಯಕ್ಷರ ಪತಿಯ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.ಪಿಡಿಓ ಅವರ ವಿರುದ್ಧ ಅಮಾನತು ಮಾಡಿ ತಕ್ಷಣವೇ ಶಿಸ್ತು ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಕಳಿಸಬೇಕು. ಗ್ರಾ.ಪಂ. ಅಧ್ಯಕ್ಷರು ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಧ್ಯಕ್ಷರ ಹುದ್ದೆ ಮತ್ತು ಅವರ ಸದಸ್ಯತ್ವ ರದ್ದುಗೊಳಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಬೇಕು. ಕರ ವಸೂಲಿಗಾರನಿಂದ ಪಡೆದಿರುವ ಬಾಕಿ ಮೊತ್ತ ಹಿಂದಿರುಗಿಸಬೇಕು. ತಕ್ಷಣವೇ ನೌಕರನಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾ.ಪಂ. ಕಾರ್ಯವಿರ್ವಾಹಕ ಬಸವರಾಜ ಸಜ್ಜನ್ ಮಾತನಾಡಿ, ಗ್ರಾ.ಪಂ. ಸಿಬ್ಬಂದಿಗೆ ಯಾವುದೇ ತರಹದ ಅನ್ಯಾಯವಾಗಲೂ ಬಿಡುವುದಿಲ್ಲ. ಸರ್ಕಾರದಿಂದ 50 ಸಾವಿರವರೆಗೆ ಆಸ್ಪತ್ರೆ ಖರ್ಚು ಕೊಡಲು ಅನುಮತಿಯಿದೆ. ಹೆಚ್ಚೇನಾದರೆ ನೌಕರರು ಮತ್ತು ಬೇರೆ ಮೂಲಗಳಿಂದ ಒದಗಿಸಿ ಕೊಡಲಾಗುವುದು. ಯಾವುದೇ ಸಮಸ್ಯೆಯಿದ್ದರೆ ತಕ್ಷಣವೇ ಗಮನಕ್ಕೆ ತಂದರೆ ಬಗೆಹರಿಸಿಕೊಡಲಾಗುವುದು ಎಂದು ತಿಳಿಸಿದರು.ಸಹಕಾರ: ಗ್ರಾ.ಪಂ.ಕರ ವಸೂಲಿಗಾರ ಪ್ರತಿಭಟನೆಗೆ ಕಂಪ್ಯೂಟರ್ ಆಪರೇಟರ್ ಸಂಘದ ಸದಸ್ಯರು ಸಾಥ್ ನೀಡಿದರು. ಯಾರೊಬ್ಬರಿಗೂ ತೊಂದರೆ ಆಗಬಾರದು ಮನವಿ ಮಾಡಿಕೊಂಡರು. ಸಂಘದ ಸದಸ್ಯರಾದ ಮಲ್ಲಿಕಾರ್ಜುನ ಚಳಚಕ್ರ, ಬಸವರಾಜ ದೊರೆ, ಜೈಲಾಲ್ ತೋಟದ ಮನೆ, ಮಹಾದೇವಪ್ಪ, ಎಂಪಡ ಮುನಿಯಪ್ಪಗೌಡ, ಅಮರಪ್ಪ ಸಗರ, ಬಸವರಾಜ ಯಮನೂರ, ಮೌಲಾಲಿ ಮಲ್ಲಾ, ಷರೀಫ್ ಅಗ್ನಿ, ಮಲ್ಲಿಕಾರ್ಜುನ ಬಂದಳ್ಳಿ, ನಾಗಪ್ಪ ಹುಣಸಗಿ, ಸದ್ದಾಂ ಹುಸೇನ್, ಪಿಡ್ಡಪ್ಪ ಮಗ್ಗದ, ಬಸವರಾಜ, ಲಕ್ಷ್ಮಣ, ಹಣಮಂತ್ರಾಯ ಗೌಡ, ಗೌಡಪ್ಪಗೌಡ ವಾಗಣಗೇರಾ, ಚಂದ್ರು ಹೆಗ್ಗಣದೊಡ್ಡಿ, ಗುಡದಪ್ಪ ಇದ್ದರು.
-----23ವೈಡಿಆರ್1: ಸುರಪುರ ನಗರದ ತಾ.ಪಂ. ಕಚೇರಿ ಎದುರು ರಾಜ್ಯ ಗ್ರಾ.ಪಂ. ನೌಕರರ ಸಂಘದ ಸದಸ್ಯರು ಪ್ರತಿಭಟಿಸಿ, ತಾಲೂಕು ಪಂಚಾಯತ್ ಅಧಿಕಾರಿ ಬಸವರಾಜ ಸಜ್ಜನ್‌ರಿಗೆ ಮನವಿ ಸಲ್ಲಿಸಿದರು.