ನಾಗಮಂಗಲದಲ್ಲಿ ಪೂರ್ವ ಮುಂಗಾರು ಚುರುಕು; 148.90 ಮಿ.ಮೀ ಉತ್ತಮ ಮಳೆ

| Published : May 23 2024, 01:14 AM IST

ನಾಗಮಂಗಲದಲ್ಲಿ ಪೂರ್ವ ಮುಂಗಾರು ಚುರುಕು; 148.90 ಮಿ.ಮೀ ಉತ್ತಮ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ರೈತರಿಗೆ ಜಮೀನು ಉಳುಮೆ ಮಾಡಲು ಹಾಗೂ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದೆರಡು ತಿಂಗಳಿಂದ ಸುಡು ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ತಾಲೂಕಿನ ರೈತರು ಮಳೆಗಾಗಿ ದಿನನಿತ್ಯ ಆಕಾಶವನ್ನೇ ಎದುರು ನೋಡುವಂತಾಗಿತ್ತು.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಳೆಯಾಶ್ರಿತ ತಾಲೂಕಿನಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಮೇ 21ಕ್ಕೆ 152.20 ಮಿ.ಮೀ. ವಾಡಿಕೆ ಮಳೆ ಪೈಕಿ 148.90 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗೆ ರೈತರು ಚಾಲನೆ ನೀಡಿದ್ದಾರೆ.

ಕಳೆದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿಯೇ ಪೂರ್ವ ಮುಂಗಾರು ಮಳೆ ಬಿದ್ದಿದ್ದರೆ ತಾಲೂಕಿನಲ್ಲಿ ರೈತರು 2150 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳು ಬಿತ್ತನೆ ಮಾಡುತ್ತಿದ್ದರು. ಆದರೆ, ಸಕಾಲದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ಯಾವೊಂದು ಪ್ರದೇಶದಲ್ಲಿಯೂ ಕೂಡ ಎಳ್ಳು ಬಿತ್ತನೆಯಾಗಿಲ್ಲ.

ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ರೈತರಿಗೆ ಜಮೀನು ಉಳುಮೆ ಮಾಡಲು ಹಾಗೂ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದೆರಡು ತಿಂಗಳಿಂದ ಸುಡು ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ತಾಲೂಕಿನ ರೈತರು ಮಳೆಗಾಗಿ ದಿನನಿತ್ಯ ಆಕಾಶವನ್ನೇ ಎದುರು ನೋಡುವಂತಾಗಿತ್ತು.

ಕಳೆದ ಮಾರ್ಚ್ ತಿಂಗಳಲ್ಲಿ 18.10 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತಾದರೂ ಒಂದು ಹನಿಯೂ ಮಳೆ ಬೀಳಲಿಲ್ಲ. ಏಪ್ರಿಲ್ ತಿಂಗಳಲ್ಲಿ 46.90ಮಿ.ಮೀ. ವಾಡಿಕೆ ಮಳೆಗೆ ಕೇವಲ 8.90 ಮಿ.ಮೀ.ನಷ್ಟು ಮಳೆಯಾಗಿತ್ತು. ಸಣ್ಣ ಪುಟ್ಟ ಕೆರೆ ಕಟ್ಟೆಗಳಲ್ಲಿಯೂ ನೀರಿಲ್ಲದೆ ಜನ ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು.

ಮಳೆಗಾಗಿ ಪ್ರಾರ್ಥಿಸಿ ರೈತರು ದೇವರ ಮೊರೆ ಹೋಗಿದ್ದರು. ಕಳೆದ ವಾರವಷ್ಟೆ ಪಟ್ಟಣದ ನಿವಾಸಿಗಳು ಮಳೆಗಾಗಿ ಪ್ರಾರ್ಥಿಸಿ ನಾಗಮಂಗಲದ ಶಕ್ತಿದೇವತೆ ಮೇಗಲಕೆರಿಯ ಶ್ರೀ ಬಡಗೂಡಮ್ಮದೇವಿ ದೇವಸ್ಥಾನದಲ್ಲಿ ಹೋಮ ಹವನಾದಿ ವಿಶೇಷ ಪೂಜೆ ಸಲ್ಲಿಸಿ ಕತ್ತೆಗಳಿಗೆ ಮದುವೆ ಮಾಡಿಸಿದ್ದರು.

ತಾಲೂಕಿನ ರೈತರು ಹಾಗೂ ಪಟ್ಟಣದ ಜನತೆಯ ಪ್ರಾರ್ಥನೆಗೆ ಒಲಿದು ವರುಣ ಕೃಪೆ ತೋರಿದ ಹಿನ್ನೆಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಈ ಮಾಸಾಂತ್ಯಕ್ಕೆ 75.20 ಮಿ.ಮೀ.ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ವರುಣನ ಕೃಪೆಯಿಂದ ಮೇ 21ಕ್ಕೆ 136 ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆ ಕಾರ್ಯ ಆರಂಭಿಸಿದ್ದಾರೆ. ನಿಗಧಿತ ಸಮಯಕ್ಕೆ ಮಳೆಯಾಗದ ಕಾರಣದಿಂದಾಗಿ ತಾಲೂಕಿನ ರೈತರಿಗೆ ಈ ಬಾರಿ ಎಳ್ಳು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಆದರೂ 300 ಹೆಕ್ಟೇರ್ ಪ್ರದೇಶದಲ್ಲಿ ರೈತರು ಅಲಸಂದೆ ಬಿತ್ತನೆ ಮಾಡಿದ್ದಾರೆ. ಇಲಾಖೆಯಲ್ಲಿ ದಾಸ್ತಾನಿದ್ದ 28 ಕ್ವಿಂಟಾಲ್ ಅಲಸಂದೆ ಡಿಸಿ-15 ಪೈಕಿ 16.5 ಕ್ವಿಂಟಾಲ್ ಮಾರಾಟವಾಗಿದೆ. 2 ಕ್ವಿಂಟಾಲ್ ತೊಗರಿ ಬಿಆರ್‌ಜಿ 5 ದಾಸ್ತಾನಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂತರ್ಜಲದಲ್ಲಿ ಚೇತರಿಕೆ:

ಕಳೆದ ಮೂರ್‍ನಾಲ್ಕು ತಿಂಗಳಿಂದ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಅಂರ್ತಜಲ ಕುಸಿದು ಅದೆಷ್ಟೋ ರೈತರ ಕೃಷಿ ಕೊಳವೆಬಾವಿಗಳು ನಿಂತು ಹೋಗಿದ್ದವು. ಇನ್ನೂ ಕೆಲ ರೈತರ ಕೊಳವೆಬಾವಿಗಳು ನಿಂತುಹೋಗುವ ಹಂತಕ್ಕೆ ತಲುಪಿದ್ದವು. ಜಾನುವಾರುಗಳ ಹಸಿ ಮೇವಿಗೂ ನೀರು ಒದಗಿಸುವುದು ಕಷ್ಟವಾಗಿತ್ತು. ಆದರೆ, ಈಗ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳಿಗೆ ನೀರು ಬಾರದಿದ್ದರೂ ಸಹ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಅಂತರ್ಜಲದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ.ರಾಜ್ಯದಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಆರಂಭಗೊಂಡಿದೆ. ಈ ವರ್ಷವಾದರೂ ನಾಡಿನ ಎಲ್ಲಾ ಭಾಗದ ರೈತರಿಗೂ ಬೇಸಾಯದಲ್ಲಿ ಒಳ್ಳೆಯ ಫಲ ನೀಡಲಿ. ಅದೇ ರೀತಿ ತಾಲೂಕಿನಲ್ಲೂ ಉತ್ತಮ ಮಳೆಯಾಗಿ ರೈತರು ಬೆಳೆದು ನೆಮ್ಮದಿ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ. ಸಕಾಲದಲ್ಲಿ ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗಿದೆ.

- ಎನ್.ಚಲುವರಾಯಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಎರಡು ತಿಂಗಳ ಅವಧಿಯಲ್ಲಿ ತಾಲೂಕಿಗೆ ಬೀಳಬೇಕಿದ್ದ ವಾಡಿಕೆ ಮಳೆ ಕೇವಲ ಮೂರ್‍ನಾಲ್ಕು ದಿನಗಳಲ್ಲಿಯೇ ಬಿದ್ದಿರುವುದು ಸಂತಸದ ವಿಚಾರ. ತಾಲೂಕಿನ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು.

- ಆರ್.ಹರೀಶ್, ಸಹಾಯಕ ಕೃಷಿ ನಿರ್ದೇಶಕ, ನಾಗಮಂಗಲ