ಮಂಡ್ಯ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚುರುಕು

| Published : May 22 2024, 12:47 AM IST

ಸಾರಾಂಶ

ಮಾರ್ಚ್, ಏಪ್ರಿಲ್‌ನಲ್ಲೇ ಕಾಣಿಸಿಕೊಳ್ಳಬೇಕಿದ್ದ ಪೂರ್ವ ಮುಂಗಾರು ಮೇ ೪ ರಿಂದ ಶುರುವಾಯಿತು. ಆರಂಭದಲ್ಲಿ ಮಂದಗತಿಯಿಂದ ಶುರುವಾದ ಮಳೆ ನಂತರದಲ್ಲಿ ಬಿರುಸನ್ನು ಪಡೆದುಕೊಂಡಿದೆ. ಕಳೆದ ಹದಿನೈದು ದಿನಗಳಿಂದ ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತೋಟ, ಜಮೀನುಗಳಿಗೆ ಹೊಸ ಮಣ್ಣನ್ನು ತುಂಬಿಸಿಕೊಂಡಿರುವ ರೈತರು ಕೃಷಿ ಚಟುವಟಿಕೆಗೆ ಭೂಮಿಯನ್ನು ಹದಗೊಳಿಸಿಕೊಳ್ಳುತ್ತಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದ ರೈತರು ಮುಂಗಾರು ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸಿದ್ದರೆ ಒಣಗುವ ಹಂತದಲ್ಲಿದ್ದ ತೆಂಗು, ಅಡಿಕೆ ಬೆಳೆಗೆ ಹೊಸ ಜೀವಕಳೆ ಬಂದಂತಾಗಿದೆ.

ಮಾರ್ಚ್, ಏಪ್ರಿಲ್‌ನಲ್ಲೇ ಕಾಣಿಸಿಕೊಳ್ಳಬೇಕಿದ್ದ ಪೂರ್ವ ಮುಂಗಾರು ಮೇ ೪ ರಿಂದ ಶುರುವಾಯಿತು. ಆರಂಭದಲ್ಲಿ ಮಂದಗತಿಯಿಂದ ಶುರುವಾದ ಮಳೆ ನಂತರದಲ್ಲಿ ಬಿರುಸನ್ನು ಪಡೆದುಕೊಂಡಿದೆ. ಕಳೆದ ಹದಿನೈದು ದಿನಗಳಿಂದ ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತೋಟ, ಜಮೀನುಗಳಿಗೆ ಹೊಸ ಮಣ್ಣನ್ನು ತುಂಬಿಸಿಕೊಂಡಿರುವ ರೈತರು ಕೃಷಿ ಚಟುವಟಿಕೆಗೆ ಭೂಮಿಯನ್ನು ಹದಗೊಳಿಸಿಕೊಳ್ಳುತ್ತಿದ್ದಾರೆ.

ಮಳವಳ್ಳಿಯಲ್ಲಿ ಅತಿ ಹೆಚ್ಚು ಮಳೆ:

ಸೋಮವಾರ ರಾತ್ರಿ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ೮೦.೫ ಮಿ..ಮೀ. ಅತಿ ಹೆಚ್ಚು ಮಳೆಯಯಾಗಿದೆ. ಉಳಿದಂತೆ ಮಂಡ್ಯ-೨೨.೨ ಮಿ.ಮೀ., ಮದ್ದೂರು-೨೭ ಮಿ.ಮೀ., ಕೆ.ಆರ್.ಪೇಟೆ-೨೧.೨ ಮಿ.ಮೀ., ಪಾಂಡವಪುರ-೬.೮ ಮಿ.ಮೀ., ಶ್ರೀರಂಗಪಟ್ಟಣ-೧೮ ಮಿ.ಮೀ., ನಾಗಮಂಗಲ ತಾಲೂಕಿನಲ್ಲಿ ೧೩ ಮಿ.ಮೀ.ನಷ್ಟು ಮಳೆಯಾಗಿದೆ.

ಮಳೆಯಿಂದಾಗಿ ನಿಧಾನವಾಗಿ ಹಳ್ಳ-ಕೊಳ್ಳಗಳು ತುಂಬಿಕೊಳ್ಳಲಾರಂಭಿಸವೆ. ಬತ್ತಿಹೋಗಿದ್ದ ಕೆರೆಗಳಲ್ಲೂ ಅಲ್ಪಸ್ವಲ್ಪ ನೀರು ಸಂಗ್ರಹಗೊಂಡಿದೆ. ರಣಬಿಸಿಲಿನ ಹೊಡೆತದಿಂದ ಕಾದುಕೆಂಡವಾಗಿದ್ದ ಇಳೆ ಇದೀಗ ತಂಪಾಗುತ್ತಿದೆ. ಭೂಮಿಯೊಳಗೆ ಸಾಕಷ್ಟು ನೀರು ಇಂಗುತ್ತಿರುವುದರಿಂದ ಹಲವೆಡೆ ನೀರಿನ ಸಂಗ್ರಹ ಕುಂಠಿತವಾಗಿದೆ. ಮಳೆ ಪರಿಸ್ಥಿತಿ ಮುಂಗಾರಿನಲ್ಲೂ ಹೀಗೆಯೇ ಮುಂದುವರೆದರೆ ಭೂಮಿ ತಣಿದು ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹಗೊಳ್ಳಲಿದೆ.

ತೆಂಗು-ಅಡಿಕೆಗೆ ಜೀವಕಳೆ:

ಹಿಂದೆಂದೂ ಕಂಡಿರಿಯದ ಬೇಸಿಗೆ ಹವೆಗೆ ಒಣಗಿಹೋಗುತ್ತಿದ್ದ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಇದೀಗ ಸುರಿಯುತ್ತಿರುವ ಮಳೆಯಿಂದ ಹೊಸ ಜೀವಕಳೆ ಬಂದಂತಾಗಿದೆ. ಕೆಂಡದಂಥ ಬಿಸಿಲು, ಉಷ್ಣ ಹವೆಗೆ ತೆಂಗು-ಅಡಿಕೆ ಬೆಳೆಯ ಸುಳಿಗಳೇ ಒಣಗುವ ಹಂತಕ್ಕೆ ತಲುಪಿದ್ದವು. ಎಷ್ಟೋ ತೆಂಗು-ಅಡಿಕೆ ಬೆಳೆಯ ಗರಿಗಳು ಸಂಪೂರ್ಣ ಇಳೆ ಬಿದ್ದು ಮರಗಳೇ ಒಣಗಿಹೋಗಿದ್ದವು. ಇದರ ನಡುವೆ ಅಲ್ಪಸ್ವಲ್ಪ ಜೀವ ಉಳಿಸಿಕೊಂಡಿದ್ದ ತೆಂಗು-ಅಡಿಕೆ ಬೆಳೆಗಳು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿವೆ.

ಚೇತರಿಕೆಗೆ ಒಂದು ವರ್ಷ ಬೇಕು:

ಮಳೆ ಕೊರತೆಯಿಂದ ತೆಂಗು-ಅಡಿಕೆ ಬೆಳೆಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಬಿಸಿಲಿನ ಹೊಡೆತಕ್ಕೆ ಸಿಲುಕಕಿ ನಲುಗಿಹೋಗಿರುವ ತೆಂಗು ಮತ್ತು ಅಡಿಕೆ ಬೆಳೆಗಳು ಸುಧಾರಿಸಿಕೊಳ್ಳಬೇಕಾದರೆ ಕನಿಷ್ಠ ಒಂದರಿಂದ ಒಂದೂವರೆ ವರ್ಷ ಬೇಕಿದೆ. ಇಳುವರಿ ಕುಸಿತದಿಂದಾಗಿ ಬೆಳೆಗಾರರು ಲಕ್ಷಾಂತರ ರು. ನಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ತೋಟಗಾರಿಕೆ ಇಲಾಖೆ ವತಿಯಿಂದ ಇದುವರೆಗೂ ತೆಂಗು-ಅಡಿಕೆ ಬೆಳೆಗಳ ಹಾನಿ ಕುರಿತಂತೆ ಸರ್ವೇಯೇ ನಡೆದಿಲ್ಲ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಅವರಿಗೆ ಪರಿಹಾರ ದೊರಕಿಸಿಕೊಡುವ ಕಾರ್ಯ ತೋಟಗಾರಿಕೆ ಇಲಾಖೆಯಿಂದ ತುರ್ತಾಗಿ ನಡೆಯುವುದು ಅತ್ಯವಶ್ಯವಾಗಿದೆ.

ರೈತರ ಪ್ರಾರ್ಥನೆಗೆ ಒಲಿದ ವರುಣ:

ತಡವಾಗಿಯಾದರೂ ಪೂರ್ವ ಮುಂಗಾರು ಚುರುಕುಗೊಂಡಿರುವುದು ರೈತರಲ್ಲಿ ಸಮಾಧಾನವನ್ನು ತಂದುಕೊಟ್ಟಿದೆ. ಹದಿನೈದು ದಿನಗಳ ಕಾಲ ಮಳೆ ಬಾರದೇ ಇದ್ದಲ್ಲಿ ತೆಂಗು- ಅಡಿಕೆ ಬೆಳೆಗಾರರ ಜೀವನ ದುಸ್ಥಿತಿಯ ಹಂತ ತಲುಪುತ್ತಿತ್ತು. ಜಿಲ್ಲೆಯ ಹಲವಾರು ಗ್ರಾ ಮಗಳ ರೈತರು ಮಳೆಗಾಗಿ ಮೊರೆ ಇಟ್ಟ ಪ್ರಾರ್ಥನೆಗೆ ವರುಣದೇವ ಒಲಿದು ಮಳೆ ಸುರಿಸಲಾರಂಭಿಸಿದ್ದಾನೆ. ಮುಂಗಾರು ಮಳೆಯೂ ಇದೇ ರೀತಿಯಾಗಿ ಸುರಿದು ಜಿಲ್ಲೆಯ ಕೃಷಿ ಚಟುವಟಿಕೆಗೆ ಹೊಸ ಆಯಾಮವನ್ನು ತಂದುಕೊಡಬೇಕಿದೆ.