ಸಾರಾಂಶ
ಎನ್ ವಿಶ್ವನಾಥ್ ಶ್ರೀರಾಂಪುರ
ಕನ್ನಡಪ್ರಭವಾರ್ತೆ ಹೊಸದುರ್ಗತಾಲೂಕಿನಲ್ಲಿ ಕಳೆದ 15 ದಿನಗಳಿಂದ ಉತ್ತಮವಾಗಿ ಸುರಿದ ಪೂರ್ವ ಮುಂಗಾರು ಮಳೆ ರೈತ ಸಮೂಹದಲ್ಲಿ ಹೊಸ ಭರವಸೆ ಮೂಡಿಸಿದ್ದು, ಬಿತ್ತನೆ ಕಾರ್ಯ ಚುರುಕುಕೊಂಡಿದೆ.
ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆಯ ಆಗಮನ ತಡವಾದರೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಆದರೆ ಹೆಸರು, ಎಳ್ಳು, ಅಲಸಂದೆ ಬೆಳೆಗೆ ತಡವಾಗಿದ್ದರಿಂದ ರೈತ ಸಿರಿಧಾನ್ಯದತ್ತ ಮುಖ ಮಾಡಿದ್ದಾನೆ.ತಾಲೂಕಿನಾದ್ಯಂತ ರೈತರು ಜಮೀನಿನಲ್ಲಿ ಕುಂಟೆ, ರಂಟೆ ಹೊಡೆದು ಭೂಮಿ ಸ್ವಚ್ಛಗೊಳಿಸುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಈಗಾಗಲೇ ಹಲವು ಕಡೆ ಸಾವೆ, ಹತ್ತಿ, ಹೆಸರು, ಅಲಸಂದೆ ಸೇರಿದಂತೆ ಇತರ ಬೆಳೆಗಳ ಬಿತ್ತನೆ ಕಾರ್ಯ ಜೋರಾಗಿದೆ.
ಬಿತ್ತನೆ ಗುರಿ: ತಾಲೂಕಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಸೇರಿದಂತೆ ಒಟ್ಟು 56385 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಏಪ್ರಿಲ್‌ನಲ್ಲಿ ಉಂಟಾದ ಮಳೆ ಕೊರತೆಯಿಂದ ಹೆಸರು ಬೆಳೆ ಬಿತ್ತನೆಗೆ ಹಿನ್ನಡೆ ಉಂಟಾಗಿತ್ತು. ಹೀಗಾಗಿ ಹೆಸರು ಬಿತ್ತನೆ ಬದಲು ರೈತರು ಸಾವೆ ಬೆಳೆಯತ್ತ ಮುಖ ಮಾಡಿದ್ದಾರೆ. ಈವರೆಗೂ 7570 ಹೆಕ್ಟೇರ್‌ನಲ್ಲಿ ಸಿರಿಧಾನ್ಯವಾದ ಸಾವೆ ಬೆಳೆ ಬಿತ್ತನೆಯಾಗಿದ್ದು, ಹೆಸರು -210, ಅಲಸಂದೆ- 90, ಶೇಂಗಾ -335, ಹತ್ತಿ- 230 ಹೆಕ್ಟೇರ್ ಬಿತ್ತನೆ ಆಗಿದೆ. ಸಿರಿಧಾನ್ಯ ಬೆಳೆಗೆ ಉತ್ತಮ ಮಳೆ ಹಾಗೂ ಸಮಯವಿರುವ ಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾವೆ ಬೆಳೆ ಬಿತ್ತನೆ ಮಾಡುವ ನಿರೀಕ್ಷೆ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ಸಿಎಸ್ ಈಶ ಕನ್ನಡಪ್ರಭಕ್ಕೆ ತಿಳಿಸಿದರು.ವಾಡಿಕೆಗಿಂತ ಹೆಚ್ಚು ಮಳೆ: ತಾಲೂಕಿನಲ್ಲಿ ವಾಡಿಕೆಯಂತೆ ಈವರೆಗೂ 135 ಮಿ.ಮೀ. ಮಳೆಯಾಗಬೇಕಿತ್ತು ಆದರೆ 217 ಮಿ.ಮೀ. ಮಳೆಯಾಗಿದ್ದು ಶೇ 82 ರಷ್ಠು ಹೆಚ್ಚುವರಿ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ ವಾಡಿಕೆಯಂತೆ 135 ಮಿಮೀ ಆಗಬೇಕಿತ್ತು ಆದರೆ 267.9 ಮಿ.ಮೀ., ಹೆಚ್ಚುವರಿ ಶೇ.98, ಮಾಡದಕೆರೆ - 120.5 (208.6) (ಶೇ.73), ಮತ್ತೋಡು- 121.6 (192.4) (ಶೇ58), ಶ್ರೀರಾಂಪುರ - 117.6 (183.9) (ಶೇ.61) ಮಳೆಯಾಗಿದೆ.
ಬೀಜ ಗೋಬ್ಬರ ಸಿದ್ಧತೆ: ಪೂರ್ವ ಮುಂಗಾರಿನಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆಯು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಾಲೂಕಿನಲ್ಲಿರುವ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇಂಗಾ 70 ಕ್ವಿಂಟಲ್, ಹೆಸರು 5 ಕ್ವಿಂಟಲ್, ಅಲಸಂದಿ 8 ಕ್ವಿಂಟಲ್, ತೊಗರಿ 6 ಕ್ವಿಂಟಲ್, ಮುಸುಕಿನ ಜೋಳ 240 ಕ್ವಿಂಟಲ್ ದಾಸ್ತಾನು ಮಾಡಿಟ್ಟುಕೊಂಡಿದೆ. ಜೊತೆಗೆ ರಸಗೊಬ್ಬರಗಳಾದ ಯೂರಿಯಾ 2521 ಮೆಟ್ರಿಕ್ ಟನ್, ಡಿಎಪಿ 215 ಮೆ.ಟ, ಎಂಒಪಿ 30 ಮೆ.ಟನ್, ಕಾಂಪ್ಲೆಕ್ಸ್ 710 ಮೆಟ್ರಿಕ್ ಟನ್ ದಾಸ್ತಾನು ಮಾಡಿಟ್ಟುಕೊಂಡಿದೆ.ಒಟ್ಟಾರೆ ಬರದ ಬೇಸಿಗೆಯಲ್ಲಿ ಬಸವಳಿದಿದ್ದ ತಾಲೂಕಿನ ರೈತಾಪಿ ವರ್ಗ ಮೇ ತಿಂಗಳಲ್ಲಿ ಸುರಿದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಉತ್ತಮ ಫಸಲು ಕೈಸೇರಲಿ ಎಂಬ ಆಶಾವಾದದಿಂದ ಗ್ರಾಮ ದೇವರಿಗೆ ಪೂಜೆ ಸಲ್ಲಿಸಿ ಕೃಷಿ ಕಾರ್ಯ ಆರಂಭಿಸಿದ್ದಾರೆ.
ತಾಲೂಕಿನಲ್ಲಿ ಮುನ್ನ ಮುಂಗಾರಿಗೆ ಅಗತ್ಯ ಇರುವಷ್ಟು ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ದಾಸ್ತಾನು ಇಡಲಾಗಿದೆ. ಮುಂದೆ ಇನ್ನಷ್ಟು ಬೇಕಾದಲ್ಲಿ ಅದಕ್ಕೂ ಬೇಡಿಕೆಯನುಸಾರ ಪೂರೈಸಲಾಗುವುದು. ರಸಗೊಬ್ಬರಕ್ಕೆ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಪೂರ್ವ ಮುಂಗಾರು ಆಗಮನ ತಡವಾಗಿದ್ದರಿಂದ ಅಧಿಕ ಪ್ರಮಾಣದಲ್ಲಿ ರೈತರು ಸಾವೆ ಬೆಳೆಯುತ್ತಿದ್ದಾರೆ.ಸಿ.ಎಸ್.ಈಶ. ಸಹಾಯಕ ಕೃಷಿ ನಿರ್ದೇಶಕ, ಹೊಸದುರ್ಗ.ಎತ್ತುಗಳಿಗೆ ಹೆಚ್ಚಿದ ಬೇಡಿಕೆ: ಗ್ರಾಮೀಣ ಭಾಗದ ಬಹುತೇಕ ರೈತರ ಬಳಿ ಎತ್ತುಗಳಿಲ್ಲದ ಕಾರಣ, ಎತ್ತು ಹೊಂದಿರುವ ರೈತರಿಗೆ ಬೇಡಿಕೆ ಹೆಚ್ಚಿದೆ. ನೇಗಿಲ ಮೂಲಕ ಬಿತ್ತನೆ ಮಾಡಿಸಲು ದಿನಕ್ಕೆ 1500 ರು. ನೀಡಬೇಕಿದೆ. ಬಿತ್ತನೆ ಮಾಡಿದ ನಂತರ ಹರಗುವ ಎತ್ತಿಗೆ 1500 ರು. ನೀಡಬೇಕು. ತಾಲೂಕಿನಲ್ಲಿ ಬರಗಾಲ ಆವರಿಸಿದ್ದರಿಂದ ರೈತರು ಧನ, ಕರು ಎತ್ತುಗಳಿಗೆ ಹೊಟ್ಟು, ಮೇವಿನ ಕೊರತೆಯಿಂದಾಗಿ ಕೆಲ ರೈತರು ಎತ್ತುಗಳನ್ನು ಈ ಹಿಂದೆ ಮಾರಾಟ ಮಾಡಿದ್ದರು. ಈಗ ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡರೂ ಅವರಲ್ಲಿ ಎತ್ತುಗಳನ್ನು ಖರೀದಿಸುವ ಶಕ್ತಿ ಇಲ್ಲವಾಗಿದೆ. ಹೀಗಾಗಿ ಬಾಡಿಗೆ ಎತ್ತು ಪಡೆದು ಬಿತ್ತನೆ ಮಾಡಿಸಲಾಗುತ್ತಿದೆ ಎಂದು ಕೃಷಿಕ ರಂಗನಾಥ್ ಹೇಳಿದರು.