ಹಾನಗಲ್ಲಿಗೆ ಪೂರ್ವವಲಯ ಐಜಿಪಿ ಭೇಟಿ

| Published : Jan 14 2024, 01:30 AM IST

ಸಾರಾಂಶ

ಹಾನಗಲ್ಲನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆ ಘಟನಾ ಸ್ಥಳಕ್ಕೆ ಶನಿವಾರ ಪೂರ್ವವಲಯದ ಐಜಿಪಿ ಡಾ. ಕೆ. ತ್ಯಾಗರಾಜನ್ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಹಾನಗಲ್ಲನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆ ಘಟನಾ ಸ್ಥಳಕ್ಕೆ ಶನಿವಾರ ಪೂರ್ವವಲಯದ ಐಜಿಪಿ ಡಾ. ಕೆ. ತ್ಯಾಗರಾಜನ್ ಭೇಟಿ ನೀಡಿ ಪರಿಶೀಲಿಸಿದರು.ನಂತರ ಹಾನಗಲ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಘಟನೆಗೆ ಸಂಬಂಧಪಟ್ಟಂತೆ ಸಮಗ್ರ ಮಾಹಿತಿ ಪಡೆದುಕೊಂಡು ಎಲ್ಲಾ ಆಯಾಮದ ತನಿಖೆ ಕುರಿತು ಸೂಚನೆ ನೀಡಿದರು.ಕಿಡ್ನ್ಯಾಪ್ ಪ್ರಕರಣ ದಾಖಲು:

ನೈತಿಕ ಪೊಲೀಸ್‌ಗಿರಿ, ಗ್ಯಾಂಗ್ ರೇಪ್ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಹಾನಗಲ್ಲನಲ್ಲಿ ಮತ್ತೊಂದು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಹಾನಗಲ್ಲ ಪಟ್ಟಣದ ಯುವಕ ಅಫ್ತಾಬ್ ವಿರುದ್ಧ ಅಪಹರಣದ ಆರೋಪ ಕೇಳಿಬಂದಿದ್ದು, ಯುವತಿಯ ತಂದೆ ಮೇಘರಾಜ ಕಲಾಲ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾಂಗ್ ರೇಪ್‌ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ; ಅನಿಲ್ ಥಾಮಸ್:ಸರ್ಕಾರ ಒಂದು ಸಮುದಾಯದ ಓಲೈಕೆ ಮಾಡುತ್ತಿದೆ. ಗ್ಯಾಂಗ್‌ ರೇಪ್‌ ಪ್ರಕರಣ ಮುಚ್ಚಿ ಹಾಕದೇ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು. ಪ್ರಕರಣದ ಎಲ್ಲ 7 ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಅನಿಲ್ ಥಾಮಸ್ ಆಗ್ರಹಿಸಿದರು.

ಹಾನಗಲ್ಲ ಗ್ಯಾಂಗ್‌ ರೇಪ್‌ ಸಂತ್ರಸ್ತೆಯನ್ನು ಇಲ್ಲಿಯ ಸ್ವಾಧಾರ ಸಾಂತ್ವನ ಕೇಂದ್ರದಲ್ಲಿ ಭೇಟಿಯಾಗಿ ಧೈರ್ಯ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಕೆಲವು ಕೇಸ್‌ಗಳನ್ನು ಹಿಂಪಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ, ಇದು ಹಾಗಾಗಬಾರದು. ಆರೋಪಿಗಳು ಜೀವನಪೂರ್ತಿ ಜೈಲಿನಲ್ಲೇ ಕೊಳೆಯಬೇಕು ಎಂದರು.ಬಲಿಷ್ಠವಾದ ಸೆಕ್ಷನ್ ಹಾಕಿ ಈ ಕೇಸ್ ಪೊಲೀಸರು ಮುಂದುವರೆಸಬೇಕು. ಸ್ಥಳೀಯ ಪೋಲೀಸರಿಗೆ ಪ್ರಕರಣ ಭೇದಿಸಲು ಆಗದಿದ್ದರೆ ಸಿಬಿಐಗೆ ಪ್ರಕರಣ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಪಿಎಫ್‌ಐ ಸಂಘಟನೆಯ ಬ್ಯಾನ್ ಆಗಿದೆ. ಆದರೆ, ಅವರು ಬೇರೆ ಮೂಲದಿಂದ ಕೆಲಸ ಮಾಡುತ್ತಿರಬಹುದು. ಕಾಂಗ್ರೆಸ್ ಸರ್ಕಾರ ತಮ್ಮನ್ನು ಉಳಿಸುತ್ತೆ ಎಂಬ ನಂಬಿಕೆ ಕೆಲವರಿಗಿದೆ. ಹೀಗಾಗಿ ಇಂತಹ ಪ್ರಕರಣ ಮಾಡಲು ಮುಂದಾಗುತ್ತಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಆರೋಪಿಯನ್ನು ಅಮಾಯಕರು ಎಂದು ಕಾಂಗ್ರೆಸ್ಸಿನವರು ಹೇಳಿದ್ದಾರೆ. ಈ ಸರ್ಕಾರ ಒಂದು ಸಮಾಜದ ಓಲೈಕೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.