ಪ್ರಭು ಕ್ರಿಸ್ತರ ಪುನರುತ್ಥಾನದ ಈಸ್ಟರ್ ಹಬ್ಬ ಆಚರಣೆ

| Published : Apr 01 2024, 12:52 AM IST

ಪ್ರಭು ಕ್ರಿಸ್ತರ ಪುನರುತ್ಥಾನದ ಈಸ್ಟರ್ ಹಬ್ಬ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈಸ್ಟರ್ ಹಬ್ಬ ಕ್ರೈಸ್ತ ಬಾಂಧವರಿಗೆ ವಿಶಿಷ್ಟ ಹಬ್ಬವಾಗಿದೆ. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಡಿನಾದ್ಯಂತ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ ಪಾಸ್ಕಕಾಲದ (ಈಸ್ಟರ್) ಹಬ್ಬವನ್ನು ಕ್ರೈಸ್ತ ಬಾಂಧವರಿಗೆ ವಿಶಿಷ್ಟ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ಆಚರಿಸಲಾಯಿತು.

ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ನೆರವೇರಿಸುವ ಮೂಲಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಈಸ್ಟರ್ (ಪಾಸ್ಕ)ಹಬ್ಬವನ್ನು ಸಡಗರ ಸಂಭ್ರಮದಿಂದ ಮನೆಗಳಲ್ಲಿ ಆಚರಿಸಿಕೊಂಡರು.

ಭುವಿಯಲ್ಲಿ ಮಾನವರನ್ನು ಸಂರಕ್ಷಿಸುವ ಸಲುವಾಗಿ ಪ್ರಭು ಯೇಸು ಕ್ರಿಸ್ತರು ಮಾನವರ ಪಾಪಕ್ಕಾಗಿ ಶಿಲುಬೆಯ ಮರದಲ್ಲಿ ಪ್ರಾಣವನ್ನಪ್ಪಿದರು. ಅವರು ಹೇಳಿದಂತೆ 3ನೇ ದಿನ ಸಮಾಧಿಯಿಂದ ಪುನರುತ್ಥಾನಗೊಂಡಿರುವುದನ್ನು ಕ್ರಿಸ್ತರು ಮರಣವನ್ನು ಜಯಿಸಿದ ಹಬ್ಬ ಮತ್ತು ಕ್ರೈಸ್ತ ಬಾಂಧವರಿಗೆ ವಿಶಿಷ್ಟವಾದ ಪಾಸ್ಕ ಕಾಲದ (ಈಸ್ಟರ್) ಹಬ್ಬವನ್ನಾಗಿ ಆಚರಿಸುವುದು ವಾಡಿಕೆ.

ಪುನರುತ್ಥಾನ ಹಬ್ಬದ ಅಂಗವಾಗಿ ಶನಿವಾರ ಸಂಜೆ 7 ಗಂಟೆಗೆ ಸಂತ ಮೇರಿ ಶಾಲಾವರಣದಲ್ಲಿ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ.ಅರುಳ್ ಸೇಲ್ವಕುಮಾರ್ ಅವರು ನೂತನ ಬೆಂಕಿಯನ್ನು ಆಶೀರ್ವಚಿಸಿದರು. ಜೇನುಮೇಣದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿಯನ್ನು ಆಶೀರ್ವಚಿಸಿ ಸಂತ ಮೇರಿ ಶಾಲಾವರಣದಿಂದ ಅದನ್ನು ಬೆಳಗಿಸಿಕೊಂಡು ಭಕ್ತಾದಿಗಳೊಂದಿಗೆ ಮೆರವಣಿಗೆಯೊಂದಿಗೆ ಪೀಠದಲ್ಲಿ ತಂದು ಗುರುಗಳು ಪ್ರತಿಷ್ಠಾಪಿಸಿ ಆಚರಣೆಗೆ ಮುನ್ನುಡಿಯನ್ನು ಇಡಲಾಯಿತು. ನಂತರ ನಡೆದ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆಯಲ್ಲಿ ಮರಣಹೊಂದಿದ ಸಮಾಧಿಗೊಳಿಸಲಾದ ಯೇಸುವು ಸಮಾಧಿಯಿಂದ ಪುನರುತ್ಥಾನಗೊಂಡಿರುವ ರೂಪಕ ದೃಶ್ಯದ ಅಂಗವಾಗಿ ಪ್ರಭು ಕ್ರಿಸ್ತರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆಯನ್ನು ಸಮರ್ಪಿಸಿದರು.

ಈ ಆಡಂಬರ ದಿವ್ಯ ಬಲಿಪೂಜೆಯಲ್ಲಿ ಸಹಾಯಕ ಧರ್ಮಗುರುಗಳಾದ ರೇ.ಫಾ.ನವೀನ್‌ಕುಮಾರ್, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ಗಾಯನ ವೃಂದದೊಂದಿಗೆ ನೂರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತಾದಿಗಳು ದೇವಾಲಯದಲ್ಲಿ ಪುನರುತ್ಥಾನದ ಆಡಂಬರ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ನಂತರ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನಗೊಂಡು (ಈಸ್ಟರ್)ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು.