ಸಾರಾಂಶ
ಕನ್ನಡಪ್ರಭವಾರ್ತೆ ಹೊಸಕೋಟೆ
ಬಿಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಅಗತ್ಯವಾದ ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸುಲಭವಾಗಿ, ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿದ್ದು, ರೈತಾಪಿ ವರ್ಗ ಬ್ಯಾಂಕಿನ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಶರತ್ ಬಚ್ಚೆಗೌಡ ತಿಳಿಸಿದರು.ತಾಲೂಕಿನ ನಂದಗುಡಿಯಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಂದಗುಡಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ತಾಲೂಕಿನಲ್ಲಿ ಯಾವುದೇ ರೀತಿಯ ಶಾಶ್ವತ ನೀರಿನ ಸೆಲೆ ಇಲ್ಲದ ಕಾರಣ, 1200 ಅಡಿ ಕೊಳವೆ ಬಾವಿ ಕೊರೆಸಿ ನೀರು ತೆಗೆಯುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅನಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ಹೋಬಳಿ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉಳಿದಂತೆ ನಂದಗುಡಿ, ಸೂಲಿಬೆಲೆ ಕೆರೆಗಳಿಗೆ ಎಚ್.ಎನ್ ವ್ಯಾಲಿ ಮೂಲಕ ನೀರು ಹರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದ್ದು, ಮುಂದಿನ ಸಚಿವ ಸಂಪುಟದಲ್ಲಿ ೧೫೦೦ ಕೋಟಿ ರು.ಗಳ ಅನುದಾನದೊಂದಿಗೆ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗುವುದು. ಇದರ ನಡುವೆ ಕೃಷಿ, ಹೈನುಗಾರಿಕೆಯಿಂದ ನಮ್ಮ ಭಾಗದ ರೈತರು ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದು, ನೀರಾವರಿ ಯೋಜನೆ ಸಾಕಾರಗೊಂಡರೆ ಮತ್ತಷ್ಟು ಪ್ರಗತಿ ಸಾಧಿಸಲಿದ್ದಾರೆ. ರೈತರ ಅಭ್ಯುದಯಕ್ಕೆ ಬಿಡಿಸಿಸಿ ಬ್ಯಾಂಕ್ ಸುಲಭ ಸಾಲದ ಮೂಲಕ ಮತ್ತಷ್ಟು ಸಹಕಾರ ನೀಡುವ ಕೆಲಸ ನಿರಂತರವಾಗಿ ಆಗಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ರೈತಪರವಾಗಿರುವ ಬ್ಯಾಂಕ್ ಆಗಿದ್ದು ಬೆಳೆಸಾಲ, ಆಭರಣ ಸಾಲ, ಮನೆ ಕಟ್ಟಲು, ನಿವೇಶನ ಕೊಳ್ಳಲು ಸಾಲ, ಹಾಲು ಉತ್ಪಾದಕರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ, ದೀರ್ಘಾವಧಿ- ಅಲ್ಪಾವಧಿ ವಿತರಣೆ ಮಾಡುತ್ತಿದ್ದೇವೆ. ಆದ್ದರಿಂದ ಉಳ್ಳವರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಇಡುವ ಬದಲಾಗಿ ಬಿಡಿಸಿಸಿ ಬ್ಯಾಂಕ್ ನಲ್ಲಿ ಇಟ್ಟರೆ ಹೆಚ್ಚಿನ ಬಡ್ಡಿ ಸಹ ನೀಡುತ್ತೇವೆ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ವಿಜಯದೇವ್ ಮಾತನಾಡಿ, ರೈತಾಪಿ ಹಾಗೂ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಬಿಡಿಸಿಸಿ ಬ್ಯಾಂಕ್ ಹಲವಾರು ರೀತಿಯಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಸಹಕಾರಿ ಬಂಧುಗಳು ಹಾಗೂ ಸಿಬ್ಬಂದಿ ನಮ್ಮ ಸವಲತ್ತುಗಳ ಬಗ್ಗೆ ನಾಗರಿಕರಿಗೆ ತಿಳಿಸಬೇಕು ಎಂದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ವಿಜಯದೇವ್, ಉಪಾಧ್ಯಕ್ಷ ಪೂಜೇನ ಅಗ್ರಹಾರ ಕೃಷ್ಣಮೂರ್ತಿ, ನಿರ್ದೇಶಕರಾದ ಬಿವಿ.ಸತೀಶ್ ಗೌಡ, ಮುತ್ಸಂದ್ರ ಬಾಬುರೆಡ್ಡಿ, ಸೋಮಶೇಖರ್ ರೆಡ್ಡಿ, ಪಿ.ಎಂ. ನಾಗರಾಜ್, ರಮೇಶ್, ಸೊಣ್ಣೆಗೌಡ, ಸಿಇಒ ಪುಂಡಲೀಕ ಎಲ್. ಸಾದುರೆ, ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ರಾಜಶೇಖರ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮ, ಹಾಜರಿದ್ದರು.
ಕೇಂದ್ರದಿಂದ ನಬಾರ್ಡ್ ನ ಶೇಕಡ 60 ರಷ್ಟು ಸಹಾಯಧನ ಸ್ಥಗಿತ:ನಾವು ರೈತರ ಪರ ಎಂದು ಹೇಳುವ ಬಿಜೆಪಿ ಅವರು ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ರೈತರಿಗೆ ಕೆಸಿಸಿ ಸಾಲ ವಿತರಣೆ ಮಾಡಲು ಆಗುತ್ತಿಲ್ಲ. ಸಹಕಾರ ಇಲಾಖೆಯಲ್ಲಿ ಕೇಂದ್ರದ ಹಸ್ತಕ್ಷೇಪ ಎಂದೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆ ಸೃಷ್ಟಿ ಮಾಡಿ ಅದಕ್ಕೆ ಅಮಿತ್ ಶಾ ಅವರನ್ನು ಸಚಿವರನ್ನಾಗಿ ಮಾಡಿದ ನಂತರ ನಬಾರ್ಡ್ ಅನುದಾನವನ್ನು ಸ್ಥಗಿತಗೊಳಿಸಿದ್ದು, ಬಿಜೆಪಿಯವರು ಸಹಕಾರ ತತ್ವಕ್ಕೆ ರೈತರಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ರೈತರು ಹೋರಾಟ ಮಾಡಬೇಕಾಗುತ್ತದೆ ಎಂದು ವಿಪ ಸದಸ್ಯ ಎಸ್.ರವಿ ತಿಳಿಸಿದರು.