ಸಾರಾಂಶ
ಚನ್ನಪಟ್ಟಣ: ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ದಂತ ರಕ್ಷಣೆ ಮಾಡಿಕೊಳ್ಳಬಹುದು. ಪ್ರತಿಯೊಬ್ಬರು ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ಹಿರಿಯ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.
ತಾಲೂಕಿನ ಹೊಂಗನೂರು ಗ್ರಾಮದ ಅರಸು ಸಮುದಾಯ ಭವನದಲ್ಲಿ ರೋಟರಿ ಟಾಯ್ಸ್ ಸಿಟಿ ಚನ್ನಪಟ್ಟಣ, ದಿ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜ್ ಅಂಡ್ ಹಾಸ್ಪಿಟಲ್ ಹೊಸೂರ್ ರೋಡ್ ಹಾಗೂ ಹೊಂಗನೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ಬೆಳಗು, ರಾತ್ರಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟಿಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ರೋಟರಿ ಟಾಯ್ಸ್ ಸಿಟಿ ಅಧ್ಯಕ್ಷ ರಾಜೇಶ್ ಮಾತನಾಡಿ, ಈಗಿನ ಜೀವನ ಶೈಲಿ ಬದಲಾವಣೆಯಿಂದ ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಹಲ್ಲುಗಳು ಬೇಗ ಹಾಳಾಗುತ್ತಿವೆ. ಆದ್ದರಿಂದ ನಮ್ಮ ಸಂಸ್ಥೆಯಿಂದ ದಂತ ಚಿಕಿತ್ಸಾ ಶಿಬಿರದ ಮೂಲಕ ಸಾರ್ವಜನಿಕರಿಗೆ ಹಲ್ಲಿನ ಸ್ವಚ್ಛತೆ ಬಗ್ಗೆ ಜಾಗತಿ ಮೂಡಿಸುತ್ತಿದ್ದೇವೆ ಎಂದರು.ಹೊಂಗನೂರು ಗ್ರಾಪಂ ಅಧ್ಯಕ್ಷೆ ರೂಪ ನಂಜೇಗೌಡ ಮಾತನಾಡಿ, ಇತ್ತೀಚಿನ ದಿನದಲ್ಲಿ ತಂಬಾಕು ಸೇವನೆ ಹೆಚ್ಚಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಹಲ್ಲಿನ ಸಮಸ್ಯೆಗಳು ಹೆಚ್ಚು ಕಂಡುಬರುತ್ತದೆ. ಸರಿಯಾದ ರೀತಿಯಲ್ಲಿ ಹಲ್ಲಿನ ಸ್ವಚ್ಛತೆ, ರಕ್ಷಣೆ ಮಾಡದೆ ನಿರ್ಲಕ್ಷ್ಯ ಮಾಡಿದರೆ ಹಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದರು.
ದಂತ ಚಿಕಿತ್ಸಾ ಶಿಬಿರದಲ್ಲಿ ದ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ೨೫ ಮಂದಿ ನುರಿತ ವೈದ್ಯರ ತಂಡ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಇತ್ಯಾದಿ ಚಿಕಿತ್ಸೆಗಳನ್ನು ನೀಡಿದರು. ಹೊಂಗನೂರು ಭಾಗದ ಸುಮಾರು ೩೦೦ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು.ರೋಟರಿ ಟಾಯ್ಸ್ ಸಿಟಿ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಗ್ರಾಪಂ ಸದಸ್ಯ ರಾಮಕೃಷ್ಣೇಗೌಡ , ಶ್ರೀ ವಿಜಯನಗರದ ಅರಸು ಅಭಿವೃದ್ಧಿ ಸಂಘದ ಅಧ್ಯಕ್ಷ ಸುಗಂಧರಾಜೇ ಅರಸು, ದ ಆಕ್ಸ್‌ಫರ್ಡ್ ಡೆಂಟಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮಗೇಶ್, ರೋಟರಿ ಟಾಯ್ಸ್ ಸಿಟಿ ಕ್ಲಬ್ ಅಡ್ವೈಸರ್ ಬಿ.ಎಂ.ನಾಗೇಶ್, ಪದಾಧಿಕಾರಿಗಳಾದ ನಿತಿನ್, ಮೋಹನ್, ರಘು, ಬೈ ಶ್ರೀನಿವಾಸ್, ಯದುಗಿರಿಗೌಡ, ಜಯರಾಮು, ರಾಜೇಶ್ ಇತರರಿದ್ದರು.
ಪೊಟೋ೯ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಅರಸು ಸಮುದಾಯ ಭವನದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.