ಪೌಷ್ಟಿಕಾಂಶ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿ: ಎಂ.ನರಸಿಂಹಮೂರ್ತಿ

| Published : Sep 29 2024, 01:34 AM IST

ಪೌಷ್ಟಿಕಾಂಶ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿ: ಎಂ.ನರಸಿಂಹಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುತ್ತಿರುವ ನಾವು ಸರಿಯಾದ ರೀತಿಯಲ್ಲಿ ತರಕಾರಿಗಳನ್ನು ಸೇವಿಸುತ್ತಿಲ್ಲ. ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆಯುವ ಉತ್ತಮ ಗುಣಮಟ್ಟದ ಬೆಳೆ ಮಾರಾಟ ಮಾಡಿ ಕಳಪೆ ಗುಣಮಟ್ಟದ ಬೆಳೆ ಉಪಯೋಗಿಸುತ್ತಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನೈಸರ್ಗಿಕವಾಗಿ ಬೆಳೆಯುವ ಹಣ್ಣು, ತರಕಾರಿ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹಮೂರ್ತಿ ತಿಳಿಸಿದರು.

ತಾಲೂಕಿನ ದೇವಲಾಪುರ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುತ್ತಿರುವ ನಾವು ಸರಿಯಾದ ರೀತಿಯಲ್ಲಿ ತರಕಾರಿಗಳನ್ನು ಸೇವಿಸುತ್ತಿಲ್ಲ. ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆಯುವ ಉತ್ತಮ ಗುಣಮಟ್ಟದ ಬೆಳೆ ಮಾರಾಟ ಮಾಡಿ ಕಳಪೆ ಗುಣಮಟ್ಟದ ಬೆಳೆ ಉಪಯೋಗಿಸುತ್ತಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

ಹಳ್ಳಿಗಳ ಬೀದಿಯಲ್ಲಿ ಆಟವಾಡುವ ಮಕ್ಕಳು ನೈಸರ್ಗಿಕವಾಗಿ ಸಿಗುವ ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ತಿನ್ನುತ್ತಾರೆ. ಹಾಗಾಗಿ ಅಂತಹ ಮಕ್ಕಳಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆ ಕಂಡುಬರುವುದಿಲ್ಲ. ನಗರ ಪ್ರದೇಶದ ಮಕ್ಕಳು ಬಾಯಿ ರುಚಿಗಾಗಿ ರಾಸಾಯನಿಕ ವಸ್ತು ಬಳಸಿ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಬಳಸುವುದರಿಂದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದಲ್ಲದೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದರು.

ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರೂ ಸೇರಿದಂತೆ ಪ್ರತಿಯೊಬ್ಬರೂ ಕೂಡ ಸಮತೋಲನ ಆಹಾರ ಪದ್ಧತಿ ಅಳವಡಿಸಿಕೊಂಡು ಆರೋಗ್ಯವಂತರಾಗಿ ಜೀವನ ನಡೆಸಬೇಕು ಎಂದರು.

ವಿಶ್ವ ಪೌಷ್ಟಿಕ ಆಹಾರ ದಿನದ ಮಹತ್ವ ಕುರಿತು ದೇವಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೇತನ್ ಮಾತನಾಡಿದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಮಹದೇವ, ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್.ಶ್ರೀದೇವಿ, ಅಪರ ಸರ್ಕಾರಿ ವಕೀಲ ಪಿ.ಸಿ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಟಿ.ಜೆ.ಮಂಜುಳ, ವಕೀಲೆ ಮಂಜುಳ, ನ್ಯಾಯಾಂಗ ಇಲಾಖೆ ಸೋನುಮೂರ್ತಿ, ರಮೇಶ್ ಸೇರಿದಂತೆ ಸ್ಥಳೀಯ ಜನರು ಇದ್ದರು.