೫೦ಕ್ಕೂ ಹೆಚ್ಚು ಪಿಎಚ್‌ಸಿಗಳಿಗೆ ಇಸಿಜಿ ಯಂತ್ರ: ಚಲುವರಾಯಸ್ವಾಮಿ

| Published : Nov 04 2025, 12:00 AM IST

೫೦ಕ್ಕೂ ಹೆಚ್ಚು ಪಿಎಚ್‌ಸಿಗಳಿಗೆ ಇಸಿಜಿ ಯಂತ್ರ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದಂತ ಚಿಕಿತ್ಸೆಯ ಆಶಾಕಿರಣ ಯೋಜನೆಯಡಿ ನುರಿತ ದಂತ ವೈದ್ಯರು ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ೩೦-೪೦ ಸಾವಿರ ತಗುಲುವ ಚಿಕಿತ್ಸೆಗಳನ್ನು ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ೨-೩ ಸಾವಿರ ತೆಗೆದುಕೊಂಡು ಚಿಕಿತ್ಸೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ ೫೦ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರವನ್ನು ಸಿಎಸ್‌ಆರ್ ಅನುದಾನದ ಮೂಲಕ ಕೊಡಿಸಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸೋಮವಾರ ನಗರದ ಮಿಮ್ಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ರಾಜ್ಯದಲ್ಲೇ ಪ್ರಥಮವಾಗಿ ದಂತ ಚಿಕಿತ್ಸೆಯ ಆಶಾಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ವಾತಾವರಣವೇ ವಿಷವಾಗಿ ಪರಿವರ್ತನೆಗೊಳ್ಳುತ್ತಿದೆ. ಆದ್ದರಿಂದಲೇ ಮಗು ಹುಟ್ಟುವ ಮೊದಲು ಹತ್ತಾರು ಚಿಕಿತ್ಸೆ ಹಾಗೂ ಹುಟ್ಟಿದ ನಂತರವೂ ಹಲವಾರು ಚಿಕಿತ್ಸೆಗಳಿಗೆ ಒಳಪಡಿಸಲಾಗುತ್ತಿದೆ ಎಂದು ವಿಷಾದಿಸಿದರು.

ಸಾರ್ವಜನಿಕರು ಕೂಡ ತಮ್ಮ ಆರೋಗ್ಯವನ್ನು ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಅದು ನಮ್ಮ ಕರ್ತವ್ಯ. ಎಲ್ಲಾ ಮಟ್ಟದ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದಂತ ಚಿಕಿತ್ಸೆಯ ಆಶಾಕಿರಣ ಯೋಜನೆಯಡಿ ನುರಿತ ದಂತ ವೈದ್ಯರು ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ೩೦-೪೦ ಸಾವಿರ ತಗುಲುವ ಚಿಕಿತ್ಸೆಗಳನ್ನು ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ೨-೩ ಸಾವಿರ ತೆಗೆದುಕೊಂಡು ಚಿಕಿತ್ಸೆ ಮಾಡಲಾಗುವುದು. ಸಾರ್ವಜನಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ೧೪ ಇಸಿಜಿ ಯಂತ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ನೀಡಲಾಯಿತು.

ಸಭೆಯಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ ಅಶ್ವತ್ಥ್, ಡಾ. ಆಶಾಲತಾ ಇತರರಿದ್ದರು.