ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮೀಳುನಾಡು ಸೇರಿದಂತೆ ದೇಶದ 6 ರಾಜ್ಯಗಳನ್ನು ಬೆಸೆಯುವ ದೇಶದ ಬಹುದೊಡ್ಡ ಸೂರತ್- ಚೆನ್ನೈ ಎಕನಾಮಿಕ್ ಕಾರಿಡಾರ್ ಕಾಮಗಾರಿಗೆ ಕರ್ನಾಟಕದಲ್ಲಿ ಗ್ರಹಣ ಹಿಡಿದಿರುವ ಸಂಗತಿ ಬೆಳಕಿಗೆ ಬಂದಿದೆ!
ಕಾಮಗಾರಿ ಗುತ್ತಿಗೆ ಹಿಡಿದಿರುವ ಸಂಸ್ಥೆಯವರಿಗೆ ಸಹಕಾರ ನೀಡುವಲ್ಲಿ ಸರಕಾರದ ಅಧಿಕಾರಿಗಳು ಅನುಸರಿಸುತ್ತಿರುವ ಧೋರಣೆ, ಅಸಡ್ಡೆತನ, ಚಲ್ತೇ ಹೈ ನೀತಿಗಳೇ ಹೆದ್ದಾರಿ ಕಾಮಗಾರಿಗೆ ಶಾಪವಾಗಿವೆ.ಭಾರತ ಮಾಲಾ ಪರಿಯೋಜನೆಯಡಿಯಲ್ಲಿ ಗುಜರಾತ್‌ನ ಸೂರತ್ ಹಾಗೂ ತಮೀಳುನಾಡಿನ ಚೆನ್ನೈ 1,271 ಕಿಮೀ ಎಕನಾಮಿಕ್ ಕಾರಿಡಾರ್ ಯೋಜನೆಯ 281 ಕಿಮೀ ಕರ್ನಾಟಕ ರಾಜ್ಯದ ಹಿಂದುಳಿದ ಭಾಗವಾಗಿರುವ ಕಲ್ಯಾಣ ನಾಡಿನ ರಾಯಚೂರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಹಾದು ಹೋಗಲಿದೆ.
ಈ ಕಾಮಗಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಮುುರುಮ್ ಅಂದರೆ ಗರಸು ಮಣ್ಣಿನ ಕೊರತೆ ಕಾಡಲಾರಂಭಿಸಿದೆ. ಗರಸು ಮಣ್ಣು ಅಥವಾ ಮುರುಮ್ ಕೊರತೆ ಅಂದಾಕ್ಷಣ ಅದು ಇಲ್ಲಿ ಲಭ್ಯವಿಲ್ಲ ಎಂದೇನಿಲ್ಲ, ಮುರುಮ್ ಗಣಿಗಾರಿಕೆಗೆ ಅಗತ್ಯವಿರುವ ಎನ್‌ಓಸಿ, ಅನುಮತಿಗಳು ಸರಕಾರಿ ಅಧಿಕಾರಿಗಳಿಂದ ಸಕಾಲಕ್ಕೆ ಗುತ್ತಿಗೆದಾರ ಸಂಸ್ಥೆ ಕೈ ಸೇರದೆ ಇಡೀ ಕಾಮಗಾರಿಯೇ ನಿಂತು ಹೋಗುವ ಅಪಾಯ ಎದುರಾಗಿದೆ!ದಿಢೀರನೆ ಕಾಣಿಸಿಕೊಂಡಿರುವ ಈ ಬೆಳವಣಿಗೆಯಿಂದಾಗಿ ಮೊದಲೇ ರಾಷ್ಟ್ರೀಯ ಹೆದ್ದಾರಿ ಜಾಲದ ಅಭಾವದಿಂದ ಬಣಗುಡುತ್ತಿರೋ ಕಲ್ಯಾಣ ನಾಡು ಅದೆಲ್ಲಿ ಅಧಿಕಾರಿಗಳ ಅಲಕ್ಷತನದಿಂದಾಗಿ ಹೆದ್ದಾರಿ ಜಾಲವನ್ನು ಹೊಂದಲಾಗದೆ ನರಳುವುದೋ ಎಂಬ ಪ್ರಶ್ನೆ ಎದುರಾಗಿದೆ.
ಮುರುಮ್ ಹೊಂದಲು ಅನುಮತಿ ಸಿಗದೆ ಕಾಮಗಾರಿ ಕುಂಠಿತ!: 2022ರಲ್ಲಿ ಮಂಜೂರಾದ ಈ ಯೋಜನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳದಿಂದ ಜೇವರ್ಗಿ ತಾಲೂಕಿನ ಮಾರಡಗಿ ಎಸ್‌ಎನ್ ವರೆಗೆ 71 ಕಿಮೀ ಹಾದು ಹೋಗುತ್ತದೆ.ಕಲಬುರಗಿ ಜಿಲ್ಲೆಯ ಅಫಜಲ್ಪುದ ಆತನೂರ್ ಎಂಬಲ್ಲಿ ಸಾಗಿರುವ ಸೂರತ್- ಚೆನ್ನೈ ಎಕನಾಮಿಕ್ ಕಾರಿಡಾರ್ ಕಾಮಗಾರಿಗೆ ಮುರುಮ್ ಅಭಾವ ಕಾಡಲಾರಂಭಿಸಿದೆ.
ಹೆದ್ದಾರಿ ಕಾಮಗಾರಿ ಬುನಾದಿಗೆ ಮುರುಮ್ (ಗರಸು ಮಣ್ಣು) , ಕಂಕರ್ ಮುಖ್ಯ. ಸ್ಥಳೀಯವಾಗಿ ಇದನ್ನು ಪಡೆಯಲು ತಹಸಿಲ್ದಾರ, ಕೃಷಿ ಅಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಅಂಕಿ ಸಂಖ್ಯೆ ಇಲಾಖೆಗಳ ಎನ್‌ಓಸಿ , ಅನುಮತಿ ಅಗತ್ಯ. ಕಲ್ಲುಗಳು ಬೇರೆಡೆಯಿಂದ ತರಿಸಿಕೊಳ್ಳಲಾಗುತ್ತಿದೆ. ಆದರೆ, ಮುರುಮ್ ಸ್ಥಳೀಯವಾಗಿ ಲಭ್ಯವಿದ್ದು, ಅದನ್ನು ಪಡೆಯುವುದೇ ಕಾಮಗಾರಿ ಗುತ್ತಿಗೆದಾರರಿಗೆ ಕಷ್ಟವಾಗಿದೆ.ಮುರುಮ್ ಪಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ರಾಯಲ್ಟಿ ನೀಡಬೇಕು. ಕಾಮಗಾರಿ ನಿರ್ವಹಿಸುತ್ತಿರುವ ಪಿಎನ್‍ಸಿ ಸಂಸ್ಥೆಯವರು ಈಗಾಗಲೇ 10 ಲಕ್ಷ ರು.ಗಳಷ್ಟು ರಾಯಲ್ಟಿ ಪಾವತಿ ಮಾಡಿದ್ದಾರೆಂದು ಹೇಳಲಾಗಿದೆ. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಇದುವರೆಗೂ ಮುರುಮ್ ಪಡೆಯಲು ಅನುಮತಿ, ಎನ್‌ಓಸಿ ಪಿಎನ್‌ಸಿ ಸಂಸ್ಥೆಗೆ ದೊರೆತಿಲ್ಲ, ಇದರಿಂದಲೇ ಹೆದ್ದಾರಿಯ ಬಹುಮುಖ್ಯ ಬುನಾದಿ ಭಾಗದ (ಬೇಸ್ಮೆಂಟ್) ಕೆಲಸವೇ ನಿಂತು ಹೋಗಿದೆ!
ಗುತ್ತಿಗೆದಾರ ಪಿಎನ್‌ಸಿ ಲಿಮಿಟೆಡ್ ಸಂಸ್ಥೆಯವರು ಅನೇಕ ಬಾರಿ ಗಣಿ ಇಲಾಖೆಗೆ ಅಲೆದಾಡಿದರೂ ಇಲಾಖೆಯಿಂದ ಅನುಮತಿ ದೊರೆಯದೇ ಕಾಮಗಾರಿ ಮುಂದುವರೆಸುವುದು ಕಷ್ಟವೆಂದು ಸಂಸ್ಥೆಯವರು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಹಾಗೂ ದೂರು ನೀಡಿದ್ದಾರೆಂದು ಗೊತ್ತಾಗಿದೆ.ಹೀಂಗಾದ್ರೆ ಹೇಂಗೆ ಸಮಯಕ್ಕೆ ಸರಿಯಾಗಿ ಕೆಲ್ಸ ಮುಗಿತದ್ರಿ?: 2022ರಲ್ಲಿ ಆರಂಭವಾದ ಈ ಕಾಮಗಾರಿ 2025ರಲ್ಲಿ ಪೂರ್ಣಗೊಳಿಸಬೇಕು. ಅಂದರೆ 712 ದಿನಗಳಲ್ಲಿ ಪೂರ್ಣಗೊಳಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ತಿಳಿಸಿದೆ. ಈಗಾಗಲೇ 356 ದಿನಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಶೇ.40 ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಅಂದರೆ ಭೂಮಿ ಪರಿಹಾರ, ರೋಡ್ ಮಾರ್ಕ್ ಮತ್ತು ಅಡಿಪಾಯ ತೋಡುವ ಕೆಲಸಗಳು ಮಾತ್ರ ಮುಗಿದಿವೆ. ತಕ್ಷಣವೇ ಮುರುಮ್ ಹಾಕಿ ಮುಂದಿನ ಕಂಕರ್ ಹಾಕುವುದಕ್ಕೆ ಸಿದ್ಧಪಡಿಸಬೇಕಾಗಿದೆ. ಇದೆಲ್ಲವೂ ಇನ್ನುಳಿದ 356 ದಿನಗಳಲ್ಲಿ ಕಾಮಗರಿ ಪೂರ್ಣಗೊಳಿಸಬೇಕಾದರೆ, ಮೊದಲು ಮುರುಮ್ ಹಾಕಿ ಭೂಮಿಯನ್ನು ಗಟ್ಟಿಗೊಳಿಸಿ ರೋಲಿಂಗ್ ಮಾಡಬೇಕು. ಅದುವೇ ಆಗುತ್ತಿಲ್ಲ. ಅದಕ್ಕಾಗಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಅಫಜಲ್ಪುರ ತಾಲೂಕಿನ ಅತನೂರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಕನ್ನಡಪ್ರಭದ ಜೊತೆಗೆ ಗುತ್ತಿಗೆದಾರ ಸಂಸ್ಥೆಯವರು ಎದುರಾಗಿರುವ ಸಮಸ್ಯೆಗಳನ್ನು ವಿವರಿಸಿದರು.
ಹೆದ್ದಾರಿ ಜಾಲ ಮಂಜೂರು ಮಾಡುವಲ್ಲಿ ಕಲಬುರಗಿಗೆ, ಕಲ್ಯಾಣ ನಾಡಿಗೆ ಕೇಂದ್ರದಿಂದ ಅನ್ಯಾಯವಾಗಿದೆ ಎಂಬ ಕೂಗು, ಆರೋಪ, ಅಟಾಟೋಪಗಳಿಗಿಲ್ಲಿ ಕೊರತೆ ಇಲ್ಲ. ಆದರೆ, ಮಂಜೂರಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರಾಜ್ಯ ಸರ್ಕಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಂಬಲವಾಗಿ ನಿಲ್ಲದೆ ಅಸಹಕಾರ ತೋರಿದ್ದರಿಂದ ಕಾಮಗಾರಿ ತ್ರಿಶಂಕು ಸ್ಥಿತಿಗೆ ತಲುಪಿದ್ದು, ವಿಳಂಬವಾಗೋ ಆತಂಕ ಎದುರಿಸುತ್ತಿದೆ.-----------
ಈ ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ 60 ರಿಂದ 65 ರಷ್ಟು ಎನ್‌ಓಸಿ ಕಡತ ವಿಲೇವಾರಿ ಮಾಡಿ ಸುರಳೀತ ನಡೆಯುವಂತೆ ನೋಡಿಕೊಂಡಿದ್ದೇವೆ. ಇದೀಗ ಮುರುಮ್ ಎನ್‌ಓಸಿ, ಪರವಾನಿಗೆ ಸಮಸ್ಯೆ ಎದುರಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದೀರಿ, ನಾನೇ ಖುದ್ದು ಪರಿಶೀಲನೆ ನಡೆಸುವೆ. ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವೆ. ಗಣಿ ಇಲಾಖೆಗೂ ಮಾತನಾಡುವೆ.- ಸಂಜೀವ ಕುಮಾರ್ ದಾಸರ್, ತಹಸೀಲ್ದಾರ್ ಅಫಜಲ್ಪುರ
-------------ಕಲಬುರಗಿ ಮೂಲಕ ಹಾದು ಹೋಗುವ ಎಕನಾಮಿಕ್ ಕಾರಿಡಾರ್ ಕಾಮಗಾರಿಗೆ ಅಧಿಕಾರಿಗಳ ಅಸಡ್ಡೆಯೇ ಮಾರಕವಾಗಿ ಕೈಬಿಟ್ಟುಹೋದರೆ ಯಾರು ಹೊಣೆ? ಸರಕು ಸಾಗಣೆ, ಉದ್ಯೋಗಾವಕಾಶಕ್ಕೆ ವ್ಯಾಪಕ ಅವಕಶ ಕಲ್ಪಿಸುವ ಈ ಹೆದ್ದಾರಿಯಿಂದ ಈ ಭಾಗದ ತೊಗರಿ, ಸಕ್ಕರೆ ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿಗೂ ಕಳಿಸಲು ಸಾಧ್ಯ. ಉತ್ಪಾದಕ ರೈತರಿಗೆ ಸ್ಪರ್ಧಾತ್ಮಕ ಬೆಲೆ ನಿಶ್ಚಿತ. ಕಾಮಗಾರಿಗೆ ಅಧಿಕಾರಿಗಳ ಅಸಹಕಾರ ಎದುರಾಗಿದ್ದು ದುರಂತ. ಸಂಬಂಧಟ್ಟವರು ಇದಕ್ಕೆ ಪರಿಹಾರ ನೀಡಿ ಯೋಜನೆ ಕೈಗೂಡುವಂತೆ ಮಾಡಲಿ.
- ಶ್ರೀಕಾಂತಾಚಾರ್ಯ್ ಮಣ್ಣೂರ, ಹಿರಿಯ ಪತ್ರಕರ್ತರು ಕಲಬುರಗಿ------------
ಸೂರತ್- ಚೆನ್ನೈ ಎಕನಾಮಿಕ್ ಕಾರಿಡಾರ್ ಸುತ್ತಮುತ್ತ...1) ಗುಜರಾತ್‌ನ ಸೂರತ್, ತಮೀಳುನಾಡಿನ ಚೆನ್ನೈ ಸಂಪರ್ಕಿಸುವ 1, 271 ಕಿಮೀ ಕಾರಿಡಾರ್
2) ಈ ಯೋಜನೆಯ 281 ಕಿಮೀ ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿ ಹಾದು ಹೋಗಲಿದೆ3) ಕಾಮಗಾರಿಯ 2 ನೇ ಹಂತ ಸೊಲ್ಲಾಪುರ- ಚೆನ್ನೈ ಎಕ್ಸಪ್ರೆಸ್ ವೇನಲ್ಲಿದೆ ಕಲಬುರಗಿ ಕಾಮಗಾರಿ
3) ಅಫಜಲ್ಪುರ ಬಡದಾಳದಿಂದ ಜೇವರ್ಗಿಯ ಮಾರಡಗಿ ವರೆಗೆ 71 ಕಿಮೀ, 1500ಕೋಟಿ ರು ಪ್ಯಾಕೇಜ್4) ಉತ್ತರ ಪ್ರದೇಶ ಪಿಎನ್‌ಸಿ ಲಿಮಿಟೆಡ್ ಗುತ್ತಿಗೆ ಪಡೆದು ಕಾಮಗಾರಿ ಆರಂಭ
5) ಭೂಸ್ವಾಧೀನ, ಇತರೆ ಕೆಲಸಕ್ಕೆ ವೇಗ, ಮುರುಮ್ ಕೊರತೆಯಿಂದ ಆತನೂರ್ ಕಾಮಗಾರಿ ನೆನೆಗುದಿಗೆ.