ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ:
ಊರು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾದ ಹಾಗೆ ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಗ್ರಾಪಂ ಮಟ್ಟದಲ್ಲಿ ಸ್ವಚ್ಛ ಶನಿವಾರ ಅಭಿಯಾನ ನಡೆಸಲಾಯಿತು. ಅಭಿಯಾನದಲ್ಲಿ ಎಲ್ಲರೂ ಹಳ್ಳಿಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಚ್ಛ ಶನಿವಾರ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮವನ್ನು ಸ್ವಚ್ಛವಾಗಿಡುವುದರ ಜತೆಗೆ ಶುಚಿತ್ವದ ಬಗ್ಗೆ ಜನರಿಗೆ ಮತ್ತಷ್ಟು ಅರಿವು ಮೂಡಿಸುವ ಸಂಬಂಧ ಸ್ವಚ್ಛ ಶನಿವಾರವನ್ನು ಪ್ರತಿ ಗ್ರಾಪಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಯಶಸ್ಸಿಗೆ ಸಮುದಾಯದ ಸಹಕಾರ ಬಹುಮುಖ್ಯ ಎಂದರು.ಪಿಡಿಒ ಬಸವರಾಜ ಬಬಲಾದ ಮಾತನಾಡಿ, ಮಾದರಿ ಗ್ರಾಮ ನಿರ್ಮಾಣಕ್ಕಾಗಿ ಸ್ವಚ್ಚತೆ ಮತ್ತು ಸ್ವಾಸ್ಥ್ಯಕ್ಕೆ ಮೊದಲ ಆದ್ಯತೆ ಕೊಡಬೇಕು. ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ. ಹಾಗೆಯೇ ಗ್ರಾಮದ ಜನರ ಆರೋಗ್ಯ ಸುಧಾರಿಸಿದರೆ ದೇಶ ಸ್ವಸ್ಥವಾಗುತ್ತದೆ ಎಂದು ಹೇಳಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬಂತೆ ಇಂದು ನಾವು ನೆಡುವ ಸಸಿಗಳು ಮುಂದಿನ ಮಕ್ಕಳ ಬದುಕಿಗೆ ದಾರಿ ದೀಪವಾಗಲಿವೆ. ಆಧುನಿಕತೆಯ ಹೆಸರಲ್ಲಿ ಅರಣ್ಯನಾಶ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ಮರಗಿಡಗಳನ್ನು ನೆಟ್ಟು ಪರಿಸರ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು.ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು. ಯುವ ಮುಖಂಡ ಪರಶುರಾಮ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಜಬ್ಬಾರಅಲಿ ಹಳ್ಳಿ, ಸದಸ್ಯರಾದ ಶಿವಾನಂದ ಪೂಜಾರಿ, ದ್ಯಾವಪ್ಪ ಮಿರಗಿ, ಗ್ರಾಮಸ್ಥರಾದ ಉಮೇಶ ಹಲಸಂಗಿ, ಸುದರ್ಶನ ಬೇನೂರ ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ ಮಲ್ಲಮ್ಮ ಚವ್ಹಾಣ, ಶ್ರೀಧರ ಬಾಳಿ, ಅಕ್ಬರ ಕೊರಬು, ಸಚಿನ ಹೊಸೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಸಂತೆಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಜತೆಗೆ ಗಿಡಗಳನ್ನು ನೆಡಲಾಯಿತು.
-----------------------------ಬಾಕ್ಸ್‌ತಾಪಂ ಆವರಣದಲ್ಲಿ ಇಒ ಸ್ವಚ್ಛತಾ ಅಭಿಯಾನಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ತಾಲೂಕ ಪಂಚಾಯತಿಯಲ್ಲಿ ಶನಿವಾರ ಸ್ವಚ್ಛತಾ ಅಭಿಯಾನಕ್ಕೆ ಇಒ ಭಾರತಿ ಚಲುವಯ್ಯ ಚಾಲನೆ ನೀಡಿದರು. ಜಿಲ್ಲಾ ಪಂಚಾಯತಿ ಆದೇಶದ ಅನ್ವಯ ತಿಂಗಳ ಮೊದಲ ಶನಿವಾರ ತಾಲೂಕಿನ ಒಳಗಡೆ ಮತ್ತು ಹೊರಗಡೆ ಸ್ವಚ್ಛತೆ ಕಾಪಾಡುವ ಹಿನ್ನಲೆಯಲ್ಲಿ ಸ್ವತ ಇಒ ಪೊರಕೆ ಹಿಡಿದು ಸಿಬ್ಬಂದಿಯೊಂದಿಗೆ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದರು.ಈ ವೇಳೆ ಮಾತನಾಡಿದ ಅವರು ತಾಲೂಕ ಕಚೇರಿ ಒಳಗೊಂಡಂತೆ ಗ್ರಾಮ ಪಂಚಾಯಿತಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ದೃಷ್ಟಯಿಂದ ಪ್ರತಿ ತಿಂಗಳ ಮೊದಲನೇ ಶನಿವಾರ 2 ಗಂಟೆಗಳ ಕಾಲ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಾಲಯದ ಜನ ಸ್ನೇಹ ಕಚೇರಿ ವಾತಾವರಣ ನಿರ್ಮಿಸುವ ಹಿತದೃಷ್ಟಿಯಲ್ಲಿ ಮಾದರಿ ಕಚೇರಿಯನ್ನು ನಿರ್ಮಿಸುವುದು ಈ ಅಭಿಯಾನದ ಉದ್ದೇಶ. ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಂಚಾಯತ ರಾಜ್‌ನ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ, ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ತಾಲೂಕ ಯೋಜನಾಧಿಕಾರಿ ಶ್ರೀನಿವಾಸ ಪವಾರ, ವಿಷಯ ನಿರ್ವಾಹಕ ಜಿ.ಎಸ್.ರೋಡಗಿ, ತಾಪಂ ಲೆಕ್ಕಾಧಿಕಾರಿ ಬೈರು ಮೂಲಿಮನಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಕಿರಣ ಪಾಟೀಲ, ಆನಂದ ಮುದೋಡಗಿ, ಪರಶು ಗುಬ್ಬೇವಾಡ ಹಾಜರಿದ್ದರು.