ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೋವಿಡ್ ಸಾಂಕ್ರಮಿಕ ರೋಗ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಮಾದರಿಯಲ್ಲಿ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳು ಡೆಂಘೀ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಡೆಂಘೀಗೆ ಕಾರಣವಾಗುವ ಈಡಿಸ್ ಈಜಿಪ್ಟೈ ಸೊಳ್ಳೆಗಳು ಹುಟ್ಟುವ ಮೂಲವನ್ನೇ ನಾಶ ಪಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಡೆಂಘೀ ನಿಯಂತ್ರಣ ಕುರಿತು ಜರುಗಿದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆಂತಕದ ಸಂಗತಿಯಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡೆಂಘೀ ಕುರಿತು ಜನರಲ್ಲಿ ಅರಿವು ಮೂಡಿಸುವ ಮೂಲಕ, ಜಾಗರೂಕತೆಯಿಂದ ಡೆಂಘೀ ಪ್ರಕರಣಗಳನ್ನು ನಿರ್ವಹಿಸಬೇಕು ಎಂದರು.
ಸರ್ಕಾರದ ಆದೇಶದಂತೆ ಪ್ರತಿ ಶುಕ್ರವಾರ ಆಂದೋಲನದ ಮಾದರಿಯಲ್ಲಿ ಈಡಿಸ್ ಈಜಿಪ್ಟೈ ಸೊಳ್ಳೆಗಳ ಲಾರ್ವ ನಾಶದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಹೆಚ್ಚಿನ ಪ್ರಕಣಗಳು ವರದಿಯಾದ ಸ್ಥಳಗಳಲ್ಲಿ ಮಂಗಳವಾರ ಹಾಗೂ ಶುಕ್ರವಾರ ಲಾರ್ವ ನಾಶದ ಕಾರ್ಯಕ್ರಮ ಕೈಗೊಂಡು ಡೆಂಘೀ ನಿಯಂತ್ರಣ ಕಾರ್ಯಗಳ ಮೇಲ್ವಿಚಾರಣೆಗಾಗಿ ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಡೆಂಘೀ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವ ಕಾರಣ, ಈ ರೋಗ ಬಾರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸಾರ್ವಜನಿಕರು ತಮ್ಮ ಮನೆಯ ಒಳಗೆ ಹಾಗೂ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ನೀರು ಸಂಗ್ರಹಿಸುವ ತೊಟ್ಟಿ, ಡ್ರಂಗಳಲ್ಲಿ ಸೊಳ್ಳೆ ನುಸುಳದಂತೆ ಮುಚ್ಚಿ ಶೇಖರಿಸಬೇಕು, ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು, ಒಣಗಿಸಿದ ಬಳಕವೇ ಮತ್ತೆ ನೀರು ಸಂಗ್ರಹಿಸಬೇಕು. ಹೀಗಾದಲ್ಲಿ ಮಾತ್ರ ಡೆಂಘೀಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ. ಇದಕ್ಕೆ ಸಾರ್ವಜನಿಕರು ಸ್ಥಳೀಯ ಸಂಸ್ಥೆಯೊಂದಿಗೆ ಸಹಕರಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.
ಡೆಂಘೀ ಪ್ರಕರಣಗಳು ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಎಲ್ಲಾ ನಗರ ಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ನಾಲಾ ಸ್ವಚ್ಛತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು. ಇದೇ ಮಾದರಿಯಲ್ಲಿ ಗ್ರಾಮಗಳಲ್ಲಿಯೂ ಚರಂಡಿಗಳ ಸ್ವಚ್ಛತೆ ಕೈಗೊಳ್ಳಬೇಕು. ಡೆಂಘೀ ಹರಡುವ ಸೊಳ್ಳೆ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ನಡೆಸುವುದರಿಂದ ಪ್ರತಿ ಮನೆಗಳಿಗೂ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಡೆಂಘೀ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹೇಳಿದರು.ಕಠಿಣ ಕ್ರಮದ ಎಚ್ಚರಿಕೆ
ಡೆಂಘೀ ಜ್ವರ ಕಂಡು ಬಂದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ತುರ್ತು ಸ್ಪಂದನೆ ದೊರಯಬೇಕು. ಎಲ್ಲಾ ಪ್ರಾಥಮಿಕ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಹಾಜರಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಹಾಗೂ ಸರ್ಕಾರ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‍ಗಳಲ್ಲಿ ಡೆಂಘೀ ಪತ್ತೆ ಪರೀಕ್ಷೆಗೆ ಏಕರೂಪ ದರ ನಿಗದಿ ಪಡಿಸಿದೆ. ಇದರ ಆಧಾರದಲ್ಲಿ ಡೆಂಗ್ಯೂ ಎಲಿಸಾ ಎನ್ಎಸ್ 1 ಹಾಗೂ ಎಲಿಸಾ ಐಜಿಎಂ ಪರೀಕ್ಷೆಗೆ ತಲಾ 300, ಎನ್ಎಸ್1, ಐಜಿಎಂ ಮತ್ತು ಐಜಿಜಿ ರ್ಯಾಪಿಡ್ ಕಾರ್ಡ್ ಪರೀಕ್ಷೆಗೆ ₹250 ಮಾತ್ರ ಪಡೆಯಬೇಕು. ಹೆಚ್ಚಿನ ದರ ವಿಧಿಸುವುದು ಕಂಡುಬಂದರೆ ತಕ್ಷಣವೇ ಅಂತಹ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೆಂಕಟೇಶ್ ಎಚ್ಚರಿಕೆ ನೀಡಿದರು.275 ಡೆಂಘೀ ಪ್ರಕರಣ ಧೃಡಚಿತ್ರದುರ್ಗ ಜಿಲ್ಲೆಯಲ್ಲಿ 2,573 ಡೆಂಘೀ ಶಂಕಿತ ಪ್ರಕರಣಗಳು ಇದ್ದು, ಇದರಲ್ಲಿ 2,033 ಪ್ರಕರಣಗಳಲ್ಲಿ ಡೆಂಘೀ ಪರೀಕ್ಷೆ ನಡೆಸಲಾಗಿದೆ. ಜು.5ರ ಅಂತ್ಯಕ್ಕೆ ಒಟ್ಟು 275 ಡೆಂಘೀ ಪ್ರಕರಣಗಳು ಧೃಡಪಟ್ಟಿವೆ. ಡೆಂಘೀ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. 2023ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 3,77 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ 2024ರಲ್ಲಿ ಜುಲೈ ವೇಳೆಗೇ 275 ಪ್ರರಣಗಳು ಧೃಡ ಪಟ್ಟಿರುವುದು ಕಳವಳಕಾರಿಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 195 ಪ್ರಕರಣಗಳು ಧೃಡಪಟ್ಟಿದ್ದು, ಇದರಲ್ಲಿ 83 ನಗರ ಪ್ರದೇಶದಲ್ಲಿ ಪತ್ತೆಯಾಗಿವೆ. ಉಳಿದ ತಾಲೂಕುಗಳ ಪೈಕಿ ಚಳ್ಳಕೆರೆ 32, ಹಿರಿಯೂರು 18, ಹೊಳಲ್ಕೆರೆ 19, ಹೊಸದುರ್ಗ 7 ಹಾಗೂ ಮೊಳಕಾಲ್ಮೂರಿನಲ್ಲಿ 4 ಪ್ರಕರಣಗಳು ಧೃಡಪಟ್ಟಿವೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರ ಸಭೆ ಆಯುಕ್ತೆ ಎಂ.ರೇಣುಕಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.