ಸಾರಾಂಶ
ಬೆಂಗಳೂರು : ಉಪನಗರ ರೈಲ್ವೆ ಯೋಜನೆ ಅಡಿ ನಾಲ್ಕು ಕಾರಿಡಾರ್‌ಗಳ 58 ನಿಲ್ದಾಣಗಳನ್ನು ಭಾರತೀಯ ಹಸಿರು ಕಟ್ಟಡ ಮಂಡಳಿ (ಐಜಿಬಿಸಿ) ಮಾನದಂಡದ ಅನುಸಾರ ನಿರ್ಮಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಯೋಜಿಸಿದೆ.
ಸೌರಶಕ್ತಿ ಅಳವಡಿಕೆ, ಮಳೆನೀರು ಕೊಯ್ಲು ತಂತ್ರಜ್ಞಾನ ಅಳವಡಿಕೆ ಮೂಲಕ ಹಾಗೂ ಪರಿಸರ ಸ್ನೇಹಿ ಪರಿಕರಗಳನ್ನು ಒಳಗೊಂಡು ಉಪನಗರ ರೈಲ್ವೆ ನಿಲ್ದಾಣಗಳು ತಲೆ ಎತ್ತಲಿವೆ. ಇಂಗಾಲದ ಹೊರಸೂಸುವಿಕೆ ಕಡಿಮೆಗೊಳಿಸುವ ಉದ್ದೇಶದಿಂದ ಐಬಿಜಿಸಿ ಪ್ಲಾಟಿನಂ ದರ್ಜೆಯಲ್ಲಿ (ಹಸಿರೀಕರಣ ಮಾನದಂಡ) ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಬಳಕೆಯಲ್ಲಿ ಸ್ವಲ್ಪ ಮಟ್ಟಿಗೆ ಸ್ವಾವಲಂಬನೆ ಸಾಧಿಸಲು ನಿಲ್ದಾಣಗಳ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಕೆ ಹಾಗೂ ಎಲಿವೆಟೆಡ್ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಸ್ಕೈವಾಕ್ ಮೇಲೆಯೂ ಸೋಲಾರ್ ರೂಫ್‌ಟಾಪ್ ಅಳವಡಿಸಲು ಯೋಜಿಸಲಾಗಿದೆ. ಪ್ರತಿ ನಿಲ್ದಾಣದ ಶೇಕಡ 20-30ರಷ್ಟು ವಿದ್ಯುತ್ ಉಳಿತಾಯಕ್ಕೆ ಕ್ರಮ ವಹಿಸಲಾಗುವುದು ಎಂದು ನಿಗಮ ಮಾಹಿತಿ ನೀಡಿದೆ.
ಪ್ರತಿ ನಿಲ್ದಾಣದಲ್ಲೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸುವ ಮೂಲಕ ಒಟ್ಟಾರೆ ಎಲ್ಲ ನಿಲ್ದಾಣಗಳಿಂದ 12 ಲಕ್ಷ ಲೀಟರ್ ನೀರು ಉಳಿಸಲಿದ್ದೇವೆ. ಪ್ರತಿ ನಿಲ್ದಾಣದಲ್ಲಿ ಶೇ.30-50 ರಷ್ಟು ನೀರು ಪೋಲಾಗುವುದನ್ನು ತಡೆಯಲಿದ್ದೇವೆ. ಅತೀ ಹೆಚ್ಚು ಜನಬಳಕೆಯಾಗುವ ನಿಲ್ದಾಣಗಳಲ್ಲಿ ಎಸ್‌ಟಿಪಿ ಅಳವಡಿಸಿ ನೀರಿನ ಶುದ್ಧೀಕರಣಕ್ಕೂ ಆದ್ಯತೆ ನೀಡಲಾಗುವುದು. ಈ ನೀರನ್ನು ನಿಲ್ದಾಣದಲ್ಲೇ ಮರುಬಳಕೆ ಮಾಡಿಕೊಳ್ಳಲಿದ್ದೇವೆ ಎಂದು ಕೆ-ರೈಡ್ ಅಧಿಕಾರಿಗಳು ವಿವರಿಸಿದರು.
ನಿಲ್ದಾಣಗಳ ನಿರ್ಮಾಣದಲ್ಲಿ ಮರುಬಳಕೆಗೆ ಅನುಗುಣವಾಗುವ ಪರಿಕರಗಳನ್ನು ಹೆಚ್ಚಾಗಿ ಬಳಸಲಾಗುವುದು. ಸಿ ಆ್ಯಂಡ್ ಡಿ (ಕನ್ಸಟ್ರಕ್ಷನ್ ಆ್ಯಂಡ್ ಡೆಮಾಲಿಶನ್) ವೇಸ್ಟ್, ಗ್ರೀನ್ ಕಾಂಕ್ರೀಟ್‌ಗಳನ್ನು ಬಳಸಲಿದ್ದೇವೆ. ಇದರಿಂದ ನಿರ್ಮಾಣ ವೆಚ್ಚ ಕಡಿಮೆಗೊಳಿಸುವುದು ಮಾತ್ರವಲ್ಲದೆ ಪರಿಸರ ಸ್ನೇಹಿಯಾಗಿರಲಿದೆ. ನಿಲ್ದಾಣಕ್ಕೆ ಪರಿಸರ ಸ್ನೇಹಿ ಬಣ್ಣವನ್ನು ಬಳಸಲು ತೀರ್ಮಾನವಾಗಿದೆ ಎಂದರು.
ಉಪನಗರ ರೈಲ್ವೆ ಯೋಜನೆಯಡಿ ಕೆಎಸ್‌ಆರ್-ದೇವನಹಳ್ಳಿ ಸಂಪರ್ಕಿಸುವ ‘ಸಂಪಿಗೆ’ ಮಾರ್ಗದಲ್ಲಿ 15 ನಿಲ್ದಾಣ, ಬೈಯಪ್ಪನಹಳ್ಳಿ-ಚಿಕ್ಕಬಾಣಾವರವರೆಗಿನ ‘ಮಲ್ಲಿಗೆ’ ಮಾರ್ಗದಲ್ಲಿ 14 ನಿಲ್ದಾಣ, ಕೆಂಗೇರಿ-ವೈಟ್‌ಫೀಲ್ಡ್ ಸಂಪರ್ಕಿಸುವ ‘ಪಾರಿಜಾತ’ ಮಾರ್ಗದಲ್ಲಿ 14 ನಿಲ್ದಾಣ ಹಾಗೂ ಹೀಲಲಿಗೆ-ರಾಜಾನುಕುಂಟೆ ಸಂಪರ್ಕಿಸುವ ‘ಕನಕ’ ಮಾರ್ಗದಲ್ಲಿ 19 ನಿಲ್ದಾಣ ನಿರ್ಮಾಣ ಆಗಲಿದೆ.
ನಿಲ್ದಾಣ ನಿರ್ಮಾಣಕ್ಕೆ ಬಿಡ್‌ದಾರರ ನಿರಾಸಕ್ತಿ
ಕಾಮಗಾರಿ ನಡೆಯುತ್ತಿರುವ ‘ಮಲ್ಲಿಗೆ’ ಮಾರ್ಗದಲ್ಲಿ 14 ನಿಲ್ದಾಣ ನಿರ್ಮಾಣಕ್ಕೆ ಬಿಡ್‌ದಾರರ ನಿರಾಸಕ್ತಿ ತೋರಿದ್ದರಿಂದ ಕೆ-ರೈಡ್ ಟೆಂಡರ್ ರದ್ದುಗೊಳಿಸಿದೆ. ಬಳಿಕ ಎರಡು ಹಂತದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಕರೆಯಲು ಚಿಂತನೆ ನಡೆಸಿದೆ. ನೆಲಹಂತದ 8 ನಿಲ್ದಾಣ ಹಾಗೂ ಎತ್ತರಿಸಿದ ಮಾರ್ಗದ 8 ನಿಲ್ದಾಣಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆಯಲು ನಿರ್ಧರಿಸಿದೆ.