ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಖಾನಾಪುರ ತಾಲೂಕಿನ ಭೀಮಗಡ ಅಭಿಯಾರಣ್ಯದಲ್ಲಿ ಸಫಾರಿ ಯೋಜನೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿವಾದವನ್ನು ಸೃಷ್ಟಿಸಿದೆ. ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಈ ಸಫಾರಿ ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.ರಾಜ್ಯ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ರಾಜ್ಯ ಸರ್ಕಾರ ಖಾನಾಪುರ ತಾಲೂಕಿನಲ್ಲಿರುವ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ 18 ಕಿಮೀ ಸಫಾರಿಗಾಗಿ ಮುಕ್ತಗೊಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಜಂಗಲ್ ಸಫಾರಿ ಆರಂಭಗೊಂಡ ಬಳಿಕ ಭೀಮಗಡ ಅಭಯಾರಣ್ಯ ಪ್ರದೇಶ ಆತ್ಯಾಕರ್ಷಕ ಪ್ರವಾಸಿ ತಾಣವಾಗಲಿದೆ. ಇದರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂದು ಹೇಳಿದ್ದರು. ಸಚಿವರ ಈ ಹೇಳಿಕೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವುದೇ ಕಾರಣಕ್ಕೂ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಅನುಷ್ಠಾನಗೊಳಿಸಬಾರದು. ಸಫಾರಿಯಿಂದಾಗಿ ವನ್ಯಜೀವಿಗಳು ಹಾಗೂ ಸೂಕ್ಷ್ಮ ವಲಯವಾಗಿರುವ ಪರಿಸರದ ಮೇಲೂ ಮಾರಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.ಭೀಮಗಡ ವನ್ಯಜೀವಿ ಅಭಯಾರಣ್ಯ ಸಂರಕ್ಷಿತ ಪ್ರದೇಶವಾಗಿದ್ದು, ಹುಲಿಗಳು ಸೇರಿದಂತೆ ಹಲವಾರು ವನ್ಯಜೀವಿ ಪ್ರಭೇದಗಳಿದ್ದು, ಮಾನವ ಪ್ರವೇಶ ನಿರ್ಬಂಧಿಸಲಾಗಿದೆ. ಭೀಮಗಡ ವನ್ಯಜೀವಿ ಅಭಿಯಾರಣ್ಯದ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ 13 ಹಳ್ಳಿಗಳಲ್ಲಿ 3,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಗ್ರಾಮಗಳಿಗೆ ರಸ್ತೆ ಸಂಪರ್ಕ, ಶಾಲಾ ಶಿಕ್ಷಣ, ಆರೋಗ್ಯ ಸೇರಿದಂತೆ ಮತ್ತಿತರ ಸೌಲಭ್ಯಗಳ ಕೊರತೆಯೂ ಇದೆ. ಮೂಲಸೌಲಭ್ಯಗಳಿಲ್ಲದೇ ಅರಣ್ಯವಾಸಿಗಳು ತೀವ್ರ ತೊಂದರೆ ಎದುರಿಸುತ್ತ ಬಂದಿದ್ದಾರೆ. ಕೇಂದ್ರ ಸರ್ಕಾರ 2011ರಲ್ಲಿ ಭೀಮಗಡ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಿದ ಬಳಿಕ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ನಿರ್ಬಂಧವಿದೆ. ಆದರೆ, ಜಂಗಲ್ ಸಫಾರಿಗೆ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಪರಿಸರವಾದಿಗಳನ್ನು ಅಚ್ಚರಿಗೊಳಿಸುವಂತೆ ಮಾಡಿದೆ ಎಂದು ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಹೇಳಿದ್ದಾರೆ.ಭೀಮಗಡ ವನ್ಯಜೀವಿ ಅಭಯಾರಣ್ಯವನ್ನು ಸಫಾರಿಗಾಗಿ ಮುಕ್ತಗೊಳಿಸುವ ಸರ್ಕಾರದ ಕ್ರಮ ಅರಣ್ಯ ಪ್ರದೇಶಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ವನ್ಯಜೀವಿಗಳ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆಯಿದೆ. ಪ್ರವಾಸೋದ್ಯಮಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಹಾಗಾಗಿ, ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದಾಗಿ ನೇರವಾಗಿಯೇ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ವನ್ಯಜೀವಿಗಳು ತೊಂದರೆ ಎದುರಿಸಬೇಕಾಗುತ್ತದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಅಳಿವಿನಂಚಿನಲ್ಲಿ ಬಾವಲಿ ಸಂತತಿ:
ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಭೀಮಗಢ ವನ್ಯಜೀವಿ ಅಭಯಾರಣ್ಯವು 190 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇದನ್ನು ಡಿ.2011 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಅಳಿವಿನಂಚಿನಲ್ಲಿರುವ ಬಾವಲಿಗಳ ಸಂತಾನೋತ್ಪತ್ತಿ ಪ್ರದೇಶವೆಂದು ಕರೆಯಲ್ಪಡುವ ಬರಪೆಡೆ ಗುಹೆಗಳಿಗೂ ಹೆಸರುವಾಸಿಯಾಗಿದೆ. ಈ ಅಭಯಾರಣ್ಯವು ತನ್ನ ಶ್ರೀಮಂತ ಸಸ್ಯವರ್ಗ, ಆಳವಾದ ಕಾಡುಗಳು ಮತ್ತು ವೈವಿಧ್ಯಮಯ ಸ್ಥಳಾಕೃತಿಗೆ ಹೆಸರುವಾಸಿಯಾಗಿದೆ. ಇದು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಅದರ ಅಗಾಧ ಜೈವಿಕ ಶ್ರೀಮಂತಿಕೆ ಮತ್ತು ಪರಿಸರ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇದು ಮಲಬಾರ್ ಬೂದು ಹಾರ್ನ್‌ಬಿಲ್, ಸಾಮ್ರಾಜ್ಯಶಾಹಿ ಪಾರಿವಾಳ, ಪಚ್ಚೆ ಪಾರಿವಾಳ, ಹುಲಿಗಳು, ಚಿರತೆಗಳು, ಕರಡಿಗಳು ಮತ್ತು ಇತರೆ ಪ್ರಭೇದಗಳಿಗೆ ನೆಲೆಯಾಗಿದೆ. ಭೀಮಗಢ ಕೋಟೆಯು ಭೀಮಗಢ ವನ್ಯಜೀವಿ ಅಭಯಾರಣ್ಯದೊಳಗೆ ಇದೆ. ಇದನ್ನು 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪೋರ್ಚುಗೀಸರ ರಕ್ಷಣೆಗಾಗಿ ನಿರ್ಮಿಸಿದರು. ಕೋಟೆಯು ಸಿಹಿನೀರಿನ ಕೊಳಗಳು, ಕ್ಯಾನನ್‌ಗಳು ಮತ್ತು ತುಲನಾತ್ಮಕವಾಗಿ ಹಾನಿಗೊಳಗಾಗದ ದೊಡ್ಡ ಗೋಡೆಗಳನ್ನು ಹೊಂದಿದೆ. ಈ ಅಪರೂಪದ ಮತ್ತು ಅದ್ಭುತವಾದ ದೊಡ್ಡ ಬೆಕ್ಕುಗಳು ಈ ಅಭಯಾರಣ್ಯ ಸೇರಿದಂತೆ ಕೆಲವು ಸ್ಥಳಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ.ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಯಾವುದೇ ಕಾರಣಕ್ಕೂ ಸಫಾರಿ ಯೋಜನೆ ಜಾರಿಗೊಳಿಸಬಾರದು. ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ.- ಸುರೇಶ ಉರಬಿನಹಟ್ಟಿ,
ಅಧ್ಯಕ್ಷರು, ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ.