ಸಾರಾಂಶ
ಧಾರವಾಡ:
ಪ್ರಸ್ತುತ ಸೈಬರ್ ಅಪರಾಧ ಪ್ರಕರಣ ಹೆಚ್ಚುತ್ತಿದ್ದು ಸುಶಿಕ್ಷಿತರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಅಪರಿಚಿತ ಕರೆ, ಸಂದೇಶಗಳಿಂದ ದೂರವಿದ್ದು, ಸುರಕ್ಷತಾ ಕ್ರಮ ಅನುಸರಿಸಿ ಅಂತರ್ಜಾಲ ಬಳಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತವು ಜಿಲ್ಲಾ ಎನ್‌ಐಸಿ ಘಟಕ ಮತ್ತು ಧಾರವಾಡ ಸಿಇಎನ್ ಪೊಲೀಸ್ ಠಾಣೆ ಸಹಯೋಗದೊಂದಿಗೆ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಂತರ್ಜಾಲ ಜಾಗೃತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ದಿನನಿತ್ಯದ ಜೀವನದಲ್ಲಿ ಇಂಟರ್‌ನೆಟ್ ಬಳಕೆ ಸಾಮಾನ್ಯ. ಆದರೆ, ಬಳಕೆಯಲ್ಲಿ ಮುಂಜಾಗ್ರತೆ, ಜಾಗೃತಿ ಇರಬೇಕು. ಸೈಬರ್ ಅಪರಾಧಗಳಲ್ಲಿ ಬಲಿಯಾಗುತ್ತಿರುವವರು ವಿದ್ಯಾವಂತರ ಸಂಖ್ಯೆಯೇ ಗಣನೀಯ. ಆದ್ದರಿಂದ ಇದನ್ನು ತಡೆಗಟ್ಟಲು ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.ಅಪರಿಚಿತರು ಕರೆ ಮಾಡಿ ಸಾಲ ಕೊಡುತ್ತೇವೆ ಹಾಗೂ ಪಿಂಚಣಿ ದುಡ್ಡು ಹಾಕುತ್ತೇವೆ ಎಂದು ಬ್ಯಾಂಕ್ ಅಕೌಂಟ್ ನಂಬರ್ ಕೇಳಿದರೆ ನಿರಾಕರಿಸಿ. ಈ ರೀತಿಯ ಅಪರಾಧಗಳನ್ನು ನಿರುದ್ಯೋಗಿ ಮತ್ತು ನಿವೃತ್ತರನ್ನೇ ಗುರಿಯಾಗಿಸಿ ಕರೆ ಮಾಡುತ್ತಾರೆ. ಅನಾವಶ್ಯಕವಾಗಿ ಬಂದ ಲಿಂಕ್ ಹಾಗೂ ಜಾಹೀರಾತು ತೆರೆಯಬೇಡಿ. ಇದರಿಂದಾಗಿ ನಿಮ್ಮ ವೈಯಕ್ತಿಕ ವಿವರ ಬಹಿರಂಗವಾಗಿ ಹಣ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಧಾರವಾಡ ಸಿಇಎನ್ ಪೊಲೀಸ್ ಠಾಣೆ ಪಿಎಸ್‌ಐ ಅಭಜಿತ ಎ. ಮಾತನಾಡಿ, ಮೊಬೈಲ್‌ನಲ್ಲಿರುವ ಜಿಬಿ ವಾಟ್ಸ್‌ಆ್ಯಪ್ ತೆಗೆದು ಹಾಕಬೇಕು. ವೈಯಕ್ತಿಕ ವಿವರಗಳು ಇದರಲ್ಲಿ ಸುರಕ್ಷಿತವಲ್ಲ. ಇದು ಶೇ. 99 ವಿಷಯಗಳನ್ನು ಲೀಕ್ ಮಾಡುತ್ತಿದೆ. ಎಲ್ಲ ಆ್ಯಪ್‌ಗಳಿಗೆ ಮತ್ತು ಫೈಲ್‌ಗಳಿಗೆ ಪಾಸ್‌ವರ್ಡ್ ಇಡಬೇಕು. ಸೈಬರ್ ಅಪರಾಧಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ದೇಶಾದ್ಯಂತ ಇರುವ ಸಹಾಯವಾಣಿ 1930 ನಂಬರ್ ಆಗಿದೆ ಎಂದು ತಿಳಿಸಿದರು.ಹಣ ಕಳೆದುಕೊಂಡ ನಂತರ ಎಷ್ಟು ಬೇಗ ಫೋನ್ ಮಾಡುತ್ತಿರೋ ಅಷ್ಟು ಬೇಗ ಅಪರಾಧಿ ಹುಡುಕಬಹುದು. ಫೋನ್ ಮಾಡಿದ ನಂತರ ಹ್ಯಾಕ್ ಮಾಡಿದ ವ್ಯಕ್ತಿಯು ಒಂದೇ ಅಕೌಂಟ್‌ನಲ್ಲಿ ಹಣ ಇಡುವುದಿಲ್ಲ. ಬೇರೆ ಬೇರೆ ಅಕೌಂಟ್‌ಗಳಿಗೆ ವರ್ಗಾಯಿಸುತ್ತಾರೆ. ಕೂಡಲೇ ಕರೆ ಮಾಡಿದರೆ ಹಣವು ಪೆಂಡಿಂಗ್ ರೀತಿಯಲ್ಲಿ ಇರುತ್ತದೆ. ಹಣ ತೆಗೆದುಕೊಳ್ಳಲು ಹ್ಯಾಕರ್‌ಗಳಿಗೆ ಸಾಧ್ಯವಾಗುವುದಿಲ್ಲ ಎಂದರು.
ಸೈಬರ್ ದೋಸ್ತ್, ಧಾರವಾಡ ಡಿಸ್ಟ್ರಿಕ್ಟ್ ಪೊಲೀಸ್ ಎಂಬ ಪೇಜ್‌ಗಳಿದ್ದು, ಇವುಗಳು ಫೇಸ್‌ಬುಕ್ ಅಥವಾ ಇನ್ಸ್ಟಾಗ್ರಾಮ್‌ಗಳಲ್ಲಿ ಸಿಗುತ್ತವೆ. ಅದರಲ್ಲಿ ಪೊಲೀಸ್ ಇಲಾಖೆಯಿಂದ ನಾವು ಸೈಬರ್ ಅಪರಾಧಿಗಳ ಬಗ್ಗೆ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ಸಾರ್ವಜನಿಕರು ಎಚ್ಚರವಹಿಸಬೇಕೆಂದರು.ಧಾರವಾಡ ಸಿಇಎಸ್ ಪೊಲೀಸ್ ಠಾಣೆ ಅಧಿಕಾರಿ ಮುರಗೇಶ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ರಾಜು ಚಡಚಾಳ ವಂದಿಸಿದರು.11ಡಿಡಬ್ಲೂಡಿ,5,6