ಆರ್ಥಿಕ ಮುಗ್ಗಟ್ಟಿಂದ ಬೇಸತ್ತು ಮಕ್ಕಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಬೇಸತ್ತ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂಕೋಳ್ ಚಂದ್ರಶೇಖರ (56) ಕಾರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ:
ಆರ್ಥಿಕ ಮುಗ್ಗಟ್ಟಿಂದ ಬೇಸತ್ತು ಮಕ್ಕಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಬೇಸತ್ತ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂಕೋಳ್ ಚಂದ್ರಶೇಖರ (56) ಕಾರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ತಾಲೂಕಿನ ನಾಗನೂರು ಬಳಿಯ ಬಿಸಲೇರಿ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಹಣಕಾಸಿನ ವಿಚಾರವಾಗಿ ಜಗಳವಾಗಿತ್ತು. ಇದರಿಂದ ಬೇಸತ್ತ ಪುತ್ರಿ, ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದ ಪುತ್ರ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಕ್ಕಳಾದ ನರೇಶ್ ಹಾಗೂ ಪವಿತ್ರಾರ ಆತ್ಮಹತ್ಯೆ ಯತ್ನದ ಹಿನ್ನೆಲೆಯಲ್ಲಿ ಮನನೊಂದ ಚಂದ್ರಶೇಖರ, ತಮ್ಮ ನಿವಾಸದಿಂದ ಬಿಸಲೇರಿ ಗ್ರಾಮದ ತಮ್ಮ ಜಮೀನು ಬಳಿ ತೆರಳಿದ್ದರು. ಅಲ್ಲಿ ತಾವು ತೆಗೆದುಕೊಂಡು ಹೋಗಿದ್ದ ಆಲ್ಟೋ ಕಾರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆಲ್ಟೋ ಕಾರಿನ ಹಿಂಬದಿಯ ಸೀಟಿನಲ್ಲಿ ಚಂದ್ರಶೇಖರ್ ಅವರ ಮೃತದೇಹ ಸುಟ್ಟು ಕರಕಲಾಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿ ದೊರೆತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮೃತರ ಮನೆಗೆ ಭೇಟಿ ನೀಡಿದ್ದ ಮಾಜಿ ಸಚಿವ ಹಾಗೂ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಈ ವೇಳೆ ಮಾತನಾಡಿ, ಚಂದ್ರಶೇಖರ್ ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ ಎಂದು ಆಪ್ತನ ನೆನೆದು ಕಣ್ಣೀರಿಟ್ಟರು.