ವಂಚಿತ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಆರ್ಥಿಕ ಬಲ

| Published : Mar 14 2024, 02:01 AM IST

ಸಾರಾಂಶ

ಹಾವೇರಿ ಜಿಪಂ ಸಭಾಂಗಭಣದಲ್ಲಿ ಬುಧವಾರ ಪಿಎಂ-ಸೂರಜ್ ಪೋರ್ಟಲ್‌ ಚಾಲನಾ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿ, ಆರ್ಥಿಕ ಹಿಂದುಳಿದ ಸಮುದಾಯಕ್ಕೆ ವಿವಿಧ ಸೌಲಭ್ಯಗಳನ್ನು ವಿತರಿಸಿದರು.

ಹಾವೇರಿ: ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಇತರ ಅನ್ಯ ವರ್ಗದ ವಂಚಿತ ಸಮುದಾಯಕ್ಕೆ ಆರ್ಥಿಕ ಶಕ್ತಿ ಹಾಗೂ ನೆರವು ನೀಡಲು ಪಿಎಂ-ಸೂರಜ್ ನ್ಯಾಷನಲ್ ಪೋರ್ಟಲ್‌ಗೆ ಪ್ರಧಾನಿ ಚಾಲನೆ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಜಿಪಂ ಸಭಾಂಗಭಣದಲ್ಲಿ ಬುಧವಾರ ಪಿಎಂ-ಸೂರಜ್ ಪೋರ್ಟಲ್‌ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಥಿಕ ಹಿಂದುಳಿದ ಸಮುದಾಯಕ್ಕೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಮೋದಿ ಅವರು ಭಾರತದ ವಂಚಿತ ಸಮುದಾಯಗಳಿಗೆ ರೂಪಿಸಿರುವ ಆರೋಗ್ಯ, ಶಿಕ್ಷಣ, ಆರ್ಥಿಕ, ಸಾಮಾಜಿಕ ಹಾಗೂ ಪುನರ್ವಸತಿ ಮೂಲಕ ಎಲ್ಲ ವರ್ಗಗಳನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಸ್ವ ಉದ್ಯೋಗ ಹಾಗೂ ಸಾಮಾಜಿಕ ಯೋಜನೆಗಳ ಅರಿವಿನ ಕೊರತೆಯಿಂದ ಬಹುಸಂಖ್ಯಾತ ವಂಚಿತ ಸಮುದಾಯ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಈ ಯೋಜನೆಗಳ ಲಾಭ ಪಡೆಯುವುದರಿಂದ ಹೊರಗುಳಿದ ಸಮುದಾಯಕ್ಕೆ ಅರಿವು ಮತ್ತು ಜಾಗೃತಿಯ ಮೂಲಕ ಮಾಹಿತಿ ನೀಡಲು ಒಂದೇ ಸೂರಿನಡಿ ವಿವಿಧ ಯೋಜನೆಗಳ ಮಾಹಿತಿ, ಆ ಯೋಜನೆಗಳ ಲಾಭ ಪಡೆಯುವ ನಿಟ್ಟಿನಲ್ಲಿ ಪಿಎಂ-ಸೂರಜ್ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ ಎಂದರು.

ಆಯುಷ್ಮಾನ್ ಯೋಜನೆಯಡಿ ಒಂದು ಕುಟುಂಬಕ್ಕೆ ₹೫ ಲಕ್ಷದ ವರೆಗೆ ನೆರವು ಪಡೆಯಬಹುದಾಗಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮದಿಂದ ವಂಚಿತ ಸಮುದಾಯಕ್ಕೆ ಅನೇಕ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ಮೂಲಕ ನೀಡಲಾಗುತ್ತಿದೆ ಎಂದು ಹೇಳಿದರು.

ಸೌಲಭ್ಯ ವಿತರಣೆ: ಪಿಎಂ-ಸೂರಜ್ ರಾಷ್ಟ್ರೀಯ ಪೋರ್ಟಲ್ ಚಾಲನೆ ಅಂಗವಾಗಿ ಪೌರ ಕಾರ್ಮಿಕರಿಗೆ ಸುರಕ್ಷಾ ಕಿಟ್‌ಗಳನ್ನು ಹಾಗೂ ಆರ್ಥಿಕ ನೆರವಿನ ಚೆಕ್‌ಗಳನ್ನು ವಿತರಿಸಲಾಯಿತು. ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವಿನ ಮಂಜೂರಾತಿ ಪತ್ರಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿತರಿಸಿದರು.

ಸಮಾರಂಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹಿರೇಗೌಡ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಂಜಾನಾಯ್ಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ತೇಜರಾಜ ಹಲಸಬಾಳ, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹದೇವ ಮಳಲಿ, ಡಾ. ಬಿ.ಆರ್. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಮಾಲತಿ ಬೆಡಸೂರ ಇತರರು ಉಪಸ್ಥಿತರಿದ್ದರು.