ಸಾರಾಂಶ
- ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನೆ: ಶೇ. 98 ಗ್ಯಾರಂಟಿ ಯೋಜನೆ ಅನುಷ್ಠಾನಕನ್ನಡಪ್ರಭ ವಾರ್ತೆ, ಬೀರೂರು.
ರಾಜ್ಯ ಸರ್ಕಾರ ನೀಡಿರುವ 5ಗ್ಯಾರಂಟಿ ಯೋಜನೆಗಳಿಂದ ಬಡವರ್ಗ ಸೇರಿದಂತೆ ಎಲ್ಲಾ ವರ್ಗದ ಸಾಮಾನ್ಯ ಜನರ ಕುಟುಂಬದ ಆರ್ಥಿಕ ನಿರ್ವಹಣೆಗೆ ಪುನಃಶ್ಚೇತನ ನೀಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ನಡೆದ ಬೀರೂರು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಡೂರು ತಾಲೂಕಿನಾದ್ಯಂತ ಬಹುತೇಕ ಹೋಬಳಿ ಮಟ್ಟದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿವೆ. ಸಭೆಯಲ್ಲಿ ಯೋಜನೆಗಳಿಂದ ತಾಂತ್ರಿಕವಾಗಿ ವಂಚಿತರಾಗಿರುವ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆ ಯಲ್ಲಿ ಗ್ರಾಮಗಳ ಹಲವು ಜ್ವಲಂತ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸಕಾರಾತ್ಮಾಕವಾಗಿ ಸ್ಪಂದಿಸಿ ಉತ್ತರದೊರಕಿಸಿಕೊಡಲು ಸಾಧ್ಯವಾಗಿದ್ದು, ಬರಪೀಡಿತ ಪ್ರದೇಶವಾದ ತಾಲೂಕಿಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿ ಬಡಕುಟುಂಬಗಳಿಗೆ ಆಸರೆಯಾಗಿವೆ ಎಂದರು.ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸುಮಾರು 50ಸಾವಿರ ಹಣ ನೀಡುವ ಮೂಲಕ ಆರ್ಥಿಕ ಸಬಲತೆಗೆ ಪ್ರೋತ್ಸಾಹ ನೀಡುತ್ತಿರುವುದು ಬಡಕುಟುಂಬಗಳ ಜೀವನ ನಿರ್ವಹಣೆಗೆ ಹೆಚ್ಚಿನ ಸಹಕಾರಿಯಾಗಿರುವುದಕ್ಕೆ ಫಲಾನುಭವಿಗಳ ಅಭಿಪ್ರಾಯಗಳೇ ಸಾಕ್ಷಿಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ಎಂಪಿ ಚುನಾವಣೆ ಬಳಿಕ ರದ್ದುಪಡಿಸಲಾಗುತ್ತದೆ ಎಂದು ಬೊಬ್ಬೆ ಹೊಡೆಯುವ ವಿರೋಧಪಕ್ಷಗಳ ಅಪಪ್ರಚಾರಗಳಿಗೆ ಜನತೆ ಕಿವಿಗೊಡಬೇಡಿ. ಬಡವರ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸರಕಾರ ಬಂದರೂ ಯಾರಿಂದಲೂ ರದ್ದುಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಾಳಜಿ ಹಿತದೃಷ್ಟಿಯಿಂದ ಆರ್ಥಿಕ ಪುನಶ್ಚೇತನ ಕಂಡುಕೊಳ್ಳಲು ಶ್ರಮಜೀವಿಗಳಿಗೆ ಹೆಚ್ಚು ಫಲಪ್ರದವಾಗಿ ಯೋಜನೆ ಜಾರಿಗೆ ತರಲಾಗಿದೆ ಎಂದರು.ಪ್ರಧಾನಿ ಮೋದಿಯವರು ಮೊದಲು ಗ್ಯಾರಂಟಿ ಯೋಜನೆ ಬಂದಾಗ ವಿರೊಧಿಸುತ್ತಿದ್ದರು. ಆದರೆ ಅವರೇ ಈಗ ಮೋದಿ ಗ್ಯಾರಂಟಿ ಎನ್ನಲು ಪ್ರಾರಂಭಿಸಿದ್ದಾರೆ. ಇದು ಈ ಗ್ಯಾರಂಟಿ ಯೋಜನೆಗಳಿಗಿರುವ ತಾಕತ್ತು ಎಂದರು.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ರೀತಿ ಯಾವುದೇ ದೇಶದಲ್ಲಿ ಯೋಜನೆ ನೀಡಲು ಸಾಧ್ಯವಾಗದೇ ಇರುವುದರಿಂದ ವಿದೇಶದವರು ಸಹ ರಾಜ್ಯಕ್ಕೆ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳನ್ನು ತಮ್ಮ ದೇಶದಲ್ಲಿ ನೀಡಲು ಅಧ್ಯಯನ ನಡೆಸುವಂತಾಗಿದೆ ಎಂದು ವಿವರಿಸಿದರು.ಸದ್ಯ ಬೀರೂರು ಹೋಬಳಿಯ 6 ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಸೇರಿ ಗೃಹಲಕ್ಷ್ಮಿ ಯೋಜನೆಯಡಿ 10.084 ಜನ ಮಹಿಳೆಯರು ಅರ್ಜಿ ಸಲ್ಲಿಸಿದ್ದು 9833 ಜನರಿಗೆ ಪ್ರತಿ ತಿಂಗಳು 1.96 ಕೋಟಿ ರು. ಜಮೆಯಾಗುತ್ತಿದೆ. 251 ಜನಕ್ಕೆ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಹಣ ಬರಲು ವಿಳಂಬವಾಗಿದ್ದು, ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಹೋಬಳಿಯಲ್ಲಿ 10.085 ರೇಷನ್ ಕಾರ್ಡಗಳಿದ್ದು ಅದರಲ್ಲಿ ಒಟ್ಟು ಫಲಾನುಭವಿಗಳು 33215 ಜನ,ಎಲ್ಲರಿಗೂ ಸೇರಿ 5ಕೆಜಿ ಅಕ್ಕಿ ಜೊತೆ 170 ರು. ಜಮೆಯಾಗುತ್ತಿದ್ದು, ಕೇವಲ 205 ರೇಷನ್ ಕಾರ್ಡದಾರರಿಗೆ ಬರುತ್ತಿಲ್ಲ. ಬೇರೆಡೆ ವಾಸಿಸುತ್ತಿದ್ದವರು ಇವರು. ಕಳೆದ 7ತಿಂಗಳಿನಿಂದ 3.85 ಕೋಟಿ ಜಮೆಯಾಗಿದೆ.ಗೃಹಜ್ಯೋತಿಯಡಿ 10936 ಮೀಟರ್ ಗುರುತಿಸಲಾಗಿದ್ದು ಅದರಲ್ಲಿ 9357ಜನರಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಶಕ್ತಿ ಯೋಜನೆಯಡಿ ಇದುವರೆಗೂ 5.5ಲಕ್ಷ ಜನ ಮಹಿಳೆಯರು ತಾಲೂಕಿನಿಂದ ವಿವಿಧೆಡೆಗೆ ಸಂಚರಿಸಿದ್ದಾರೆ. ಕಳೆದ 8 ತಿಂಗಳಿಂದ 18.24ಕೋಟಿ ವ್ಯಯವಾಗಿದೆ ಎಂದರು.
ತಹಸೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿ, ಹೋಬಳಿ ಮಟ್ಟದ ಫಲಾನುಭವಿಗಳು ಯೋಜನೆಯಲ್ಲಿ ಸವಲತ್ತು ಪಡೆಯಲು ವಂಚಿತರಾದ ಜನರಿಗೆ ಸಮಸ್ಯೆ ಬಗೆಹರಿಸಲು ತಾಲೂಕು ಮಟ್ಟದ ಅಧಿಕಾರಿಗಳನ್ನು ಒಂದೆಡೆ ಸೇರಲು ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗಿದೆ. ಬರಪೀಡಿತ ಪ್ರದೇಶವಾದ ತಾಲೂಕಿನಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಅನಗತ್ಯವಾಗಿ ನೀರನ್ನು ಯಾರು ಪೋಲಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕಿದೆ.ಕುಡಿವ ನೀರಿನ ಟ್ಯಾಂಕರ್ ಮಾಲೀಕರು ತಪ್ಪದೇ ಇದೇ ಸೋಮವಾರ ಸಂಜೆ 5.30ರ ಒಳಗೆ ಟ್ಯಾಂಕರ್ ಗಳನ್ನು ಗ್ರಾಮೀಣ ಕುಡಿಯುವ ನೀರಿನ ಯೋಜನೆ ಇಲಾಖೆಗೆ ಕಡ್ಡಾಯವಾಗಿ ರಿಜಿಸ್ಟರ್ ಮಾಡಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಫಲಾನುಭವಿ ಜೋಡಿತಿಮ್ಮಾಪುರ ಜ್ಯೋತಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಮಹಿಳೆಯರ ಪಾಲಿನ ಬೆಳಕಾಗಿವೆ. ಮಹಿಳೆಯ ಆರ್ಥಿಕ ಸದೃಢತೆ ಜೊತೆಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿವೆ ಎಂದರು.ತಾಪಂ ಇಒ ಸಿ.ಆರ್.ಪ್ರವೀಣ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ, ವೃತ್ತ ನಿರೀಕ್ಷಕ ಶ್ರೀಕಾಂತ್, ಗ್ರಾಪಂ ಅಧ್ಯಕ್ಷರಾದ ಲೋಕೇಶ್, ಸೋಮಶೇಖರ್, ರತ್ನಮ್ಮ ರಾಜಪ್ಪ, ಶಾಂತಮ್ಮ ,ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಎಲೆ ರವಿಕುಮಾರ್, ಜ್ಯೋತಿ ಸಂತೋಷ್ ಕುಮಾರ್, ಜ್ಯೋತಿ ವೆಂಕಟೇಶ್, ವ್ಯವಸ್ಥಾಪಕ ಪ್ರಕಾಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಅದ್ಧೂರಿ ಪ್ರಭು, ಸೇರಿದಂತೆ ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
9 ಬೀರೂರು 1ಬೀರೂರಿನ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ನಡೆದ ಬೀರೂರು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಆನಂದ್ ಉದ್ಘಾಟಿಸಿದರು. ತಹಸೀಲ್ದಾರ್ ಕವಿರಾಜ್, ಇಒ ಪ್ರವೀಣ್ ಕುಮಾರ್, ಮುಖ್ಯಾಧಿಕಾರಿ ವಿ.ಡಿ.ಶಾಂತಲ ಮತ್ತಿತರಿದ್ದರು.