ಆರ್ಥಿಕ ಪ್ರಗತಿ ಹೊಂದಿದ ಮಹಿಳೆಯರು ಸಮಾಜಕ್ಕೆ ಮಾದರಿ: ಡಿಸಿ ಮೀನಾ ನಾಗರಾಜ್‌

| Published : May 17 2024, 12:31 AM IST / Updated: May 17 2024, 12:32 AM IST

ಆರ್ಥಿಕ ಪ್ರಗತಿ ಹೊಂದಿದ ಮಹಿಳೆಯರು ಸಮಾಜಕ್ಕೆ ಮಾದರಿ: ಡಿಸಿ ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ದೇಶದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸನ್ನದ್ಧರಾಗಿದ್ದು ತಮ್ಮದೇ ಶೈಲಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಹೇಳಿದರು.

ಸಮೃದ್ದಿ ಸತೃಪ್ತಿಯಡಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸನ್ನದ್ಧರಾಗಿದ್ದು ತಮ್ಮದೇ ಶೈಲಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್‌ ಲಿಮಿಟೆಡ್ ನಿಂದ ಗುರುವಾರ ಏರ್ಪಡಿಸಿದ್ದ ಸಮೃದ್ಧಿ ಸತೃಪ್ತಿಯಡಿ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಸೋಲಾರ್ ಟೈಲರಿಂಗ್ ಯಂತ್ರಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.

ಜಿಲ್ಲೆಯ ಮಹಿಳೆಯರು ತಮ್ಮಲ್ಲಿ ಅಡಗಿರುವ ಕಲೆ ಹಾಗೂ ಬುದ್ದಿವಂತಿಕೆ ಬಳಸಿ, ಉದ್ಯೋಗ ಸೃಷ್ಟಿಸಿಕೊಂಡು ಸಮಾಜ ದಲ್ಲಿ ಪುರುಷರಿಗೆ ಸಮಾನವಾಗಿ ಕಾಯಕ ಮಾಡುತ್ತಿರುವುದು ಸಂತಸ ಸಂಗತಿ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರು ಹೆಚ್ಚು ಸಾಧನೆ ಮಾಡಿದ್ದಾರೆ ಎಂದರು.

ಹಿಂದಿನ ಕಾಲದಿಂದಲೂ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತರಾಗಿ ಜೀವನ ನಿರ್ವಹಿಸಬೇಕಿತ್ತು. ಕಾಲ ಕ್ರಮೇಣ ಸಮಾಜದ ಮುಂಚೂಣಿಗೆ ಧಾವಿಸುವ ಮೂಲಕ ದೇಶದ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವಾರು ಅಗ್ರಗಣ್ಯ ಸ್ಥಾನದಲ್ಲಿ ಛಾಪು ಮೂಡಿಸಿ ಮುನ್ನೆಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಆಧುನಿಕತೆ ಬೆಳೆದಂತೆ ಸಮಾಜದ ಪ್ರತಿ ಕ್ಷೇತ್ರಗಳಲ್ಲಿ ಹೆಣ್ಣು ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗುಡಿಕೈಗಾರಿಕೆ, ಟೈಲರಿಂಗ್, ಸಿರಿಧಾನ್ಯಗಳ ತಯಾರಿಕೆ ಸೇರಿದಂತೆ ಆಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೇವಲ ಅಂಕಗಳಿಸಿದರೆ ಸಾಲದು ಬದುಕಿನ ಹಾದಿ ತಿಳಿಯುವಂಥ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳಾ ಸಬಲೀಕರಣಕ್ಕಾಗಿ ಸೆಲ್ಕೋ ಸೋಲಾರ್ ಸಂಸ್ಥೆ ಜಿಲ್ಲೆಯಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಒಂದು ದಿನದ ಕಾರ್ಯಾಗಾರವನ್ನು ಸಮರ್ಪಕ ವಾಗಿ ಅರಿತು ಜೀವನ ಸುಧಾರಣೆಗೆ ದಾರಿ ಮಾಡಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು ಎಂದರು.

ಗುಡಿ ಕೈಗಾರಿಕೆಯಲ್ಲಿ ಯಶಸ್ಸು ಗಳಿಸಿರುವ ಮಹಿಳೆಯರನ್ನು ಕೆಲವು ಕಂಪನಿಗಳು ಗುರುತಿಸಿ ಪ್ರಚಾರಕ್ಕೆ ಮುಂದಾಗುವ ಸಾಧ್ಯತೆಯಿದೆ. ಹೀಗಾಗಿ ಮಹಿಳೆಯರು ಧೃತಿಗೆಡದೇ ಪ್ರಕೃತಿಗೆ ಪೂರಕವಾದ ಕಾಯಕವನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು. ಅಲ್ಲದೇ ಕಂಪನಿಗಳಿಂದ ದೊರೆಯುವ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಸೆಲ್ಕೋ ಸೋಲಾರ್ ಸಂಸ್ಥೆ ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸಹಾಯಹಸ್ತ ಚಾಚಿ ಸ್ವಾವಲಂಬಿ ಜೀವನಕ್ಕೆ ಪ್ರೇರೇಪಿಸುತ್ತಿದೆ. 1980ರ ದಶಕದಲ್ಲಿ ಮಹಿಳೆಯೊಬ್ಬ ₹ 80 ಸಾಲ ಪಡೆದು ಕಂಪನಿ ಆರಂಭಿಸಿ, ಇದೀಗ ವರ್ಷಕ್ಕೆ 2 ಸಾವಿರ ಕೋಟಿ ವಹಿ ವಾಟು ಹಾಗೂ 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದಾಹರಣೆ ನಮ್ಮ ಮುಂದಿದೆ ಎಂದರು.

ಅನೇಕ ದೊಡ್ಡ ಕಂಪನಿಗಳು ಅಲ್ಪಪ್ರಮಾಣ ಹೂಡಿಕೆಯಿಂದ ಪ್ರಾರಂಭಿಸಿ ಇಂದು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿರುವುದು ಸಾಮಾನ್ಯ ವಿಚಾರವಲ್ಲ. ಹೀಗಾಗಿ ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಮಹಿಳೆಯರು ಸ್ವಾಲವಂಬಿ ಬದುಕಿಗಾಗಿ ಮುಂದಾದರೆ ಸರ್ಕಾರದಿಂದ ಸಾಲ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮೀಣ ಪ್ರದೇಶದ ಮಹಿಳೆಯರು ತಯಾರಿಸುವ ಕೈಮಗ್ಗ, ಆಟಿಕೆ, ಸಿರಿಧಾನ್ಯಗಳ ಮಾರಾಟ ಹಾಗೂ ಪ್ರಚುರ ಪಡಿಸುವ ಸಲುವಾಗಿ ಅಸ್ಮಿತೆ ಎಂಬ ಮಳಿಗೆ ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಖುದ್ದು ಮಹಿಳೆಯರು ಇಂತಹ ಮಳಿಗೆ ಮುತುವರ್ಜಿ ವಹಿಸಿ ಜವಾಬ್ದಾರಿ ತೆಗೆದುಕೊಂಡಲ್ಲಿ ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಇನ್ನಷ್ಟು ಮಳಿಗೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಉಪ ಮಹಾಪ್ರಬಂಧಕ ಗುರುಪ್ರಕಾಶ್‍ ಶೆಟ್ಟಿ ಮಾತನಾಡಿ, ನಾಡಿನ ಜನತೆ ಸ್ವಾಲವಂಬಿ ಬದುಕಿಗಾಗಿ ಸೌರಶಕ್ತಿ ಚಾಲಿತ ಹೊಲಿಗೆ ಯಂತ್ರ, ಸೌರ ಕುಲುಮೆ, ಹಾಲು ಕರೆಯುವ ಯಂತ್ರ, ಸೌರಶಕ್ತಿ ಚಾಲಿತ ತಂಪುಕಾರಕ, ಪ್ರಿಂಟರ್, ರೊಟ್ಟಿ ಲಟ್ಟಿಸುವ ಯಂತ್ರ, ಕುಂಬಾರಿಕೆಗೆ ಸೌರಚಕ್ರ, ಹಗ್ಗ ಹೊಸೆಯುವ ಯಂತ್ರ, ಹಪ್ಪಳ ಒತ್ತುವ ಯಂತ್ರ ಸೇರಿದಂತೆ ಅನೇಕ ವ್ಯವಸ್ಥೆಯನ್ನು ಸಂಸ್ಥೆಯಿಂದ ಕಲ್ಪಿಸಿಕೊಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಸಂಸ್ಥೆ ಕ್ಷೇತ್ರ ವ್ಯವಸ್ಥಾಪಕಿ ಸಂಹಿತಾ ಮಜುಂದಾರ್ ಭಟ್ಟಾ ಚಾರ್ಯ, ಜಿಪಂ ಸಹಾಯಕ ಕಾರ್ಯದರ್ಶಿ ನಯನ, ಡಿಆರ್‌ಡಿಎ ಯೋಜನಾ ನಿರ್ದೇಶಕ ಎಸ್.ಜಿ.ಕೊರವರ ಉಪಸ್ಥಿತರಿದ್ದರು.

16 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮೃದ್ಧಿ ಸಂತೃಪ್ತಿಯಡಿ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗುರುವಾರ ಸೋಲಾರ್ ಟೈಲರಿಂಗ್ ಯಂತ್ರ ಚಲಿಸುವ ಮೂಲಕ ಉದ್ಘಾಟಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಗುರುಪ್ರಕಾಶ್‍ ಶೆಟ್ಟಿ ಇದ್ದರು.