ಕನ್ನಡಪ್ರಭ ವಾರ್ತೆ ಬೆಂಗಳೂರು:
‘ದೇಶಾದ್ಯಂತ ಉಂಟಾಗಿರುವ ಅಡುಗೆ ಅನಿಲ ಕೊರತೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವಿದೇಶಾಂಗ ನೀತಿ ಬದಲಿಸಿಕೊಂಡು ಲಭ್ಯವಿರುವ ದೇಶಗಳಿಂದ ಗ್ಯಾಸ್ ಪಡೆಯಬೇಕು. ಇಲ್ಲದಿದ್ದರೆ ದೇಶದ ಆರ್ಥಿಕತೆ ತೀವ್ರ ಪ್ರಮಾಣದಲ್ಲಿ ಹಾಳಾಗುತ್ತದೆ’ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇರುವ ಸಮಸ್ಯೆಯನ್ನು ಇಲ್ಲ ಎಂದು ಹೇಳುವುದು ಸರಿಯಲ್ಲ. ಈ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸದನದಲ್ಲಿ ಅವಕಾಶ ನೀಡುವಂತೆ ಕೋರಿದ್ದರೂ ಕೇಂದ್ರ ಸರ್ಕಾರ ಹಠಮಾರಿ ಧೋರಣೆ ತೋರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡೆದೆ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರವು ಆಗಿರುವ ತಪ್ಪು ಸರಿಪಡಿಸಬೇಕು. ಈ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಈಗಾಗಲೇ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದೆ. ಹೋಟೆಲ್, ಸಣ್ಣ ಪುಟ್ಟ ಕಾರ್ಖಾನೆ ಬಂದ್ ಆಗಿವೆ. ಲಕ್ಷಾಂತರ ಜನರ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸುವುದು ಸರಿಯಲ್ಲ. ಸಂಬಂಧಪಟ್ಟ ದೇಶಗಳ ಜತೆ ಗಂಭೀರವಾಗಿ ಚರ್ಚಿಸಿ ಹೆಚ್ಚಿನ ಅನಿಲ ಪಡೆಯಲು ಪ್ರಯತ್ನಿಸಬೇಕು. ಯುದ್ಧ ಇದೇ ರೀತಿ ಮುಂದುವರೆದರೆ ಎಲ್‌ಪಿಜಿಗೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂಬುದನ್ನು ಮರೆಯಬಾರದು ಎಂದರು.ಕೇಂದ್ರದಿಂದ ಅಸಹಕಾರ:
ಈ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆಯಾದರೆ ಪರಿಹಾರ ಕಂಡುಕೊಳ್ಳುವ ಕುರಿತು ಸದಸ್ಯರಿಂದ ಸಲಹೆಗಳು ಬರುತ್ತಿದ್ದವು. ಇದಕ್ಕಾಗಿ ನಿಯಮ 176ರ ಅಡಿ ಚರ್ಚೆಗೆ ಅವಕಾಶ ಕೋರಿ ಎರಡು ಬಾರಿ ಪ್ರಶ್ನೆ ಎತ್ತಿದೆ. ಬೇರೆ ಪಕ್ಷಗಳು ಬೆಂಬಲ ನೀಡಿದರೂ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. ಇದೀಗ ಯಾರೊಂದಿಗೂ ಚರ್ಚಿಸದೆ ಏ.16 ರಿಂದ 18ರವರೆಗೆ ಮೂರು ದಿನಗಳ ಕಾಲ ಅಧಿವೇಶನ ಕರೆದಿದ್ದಾರೆ. ಕೇಂದ್ರ ಸರ್ಕಾರ ಪ್ರತಿಪಕ್ಷಗಳೊಂದಿಗೆ ಸಹಕಾರ ನೀಡುತ್ತಿಲ್ಲ. ಅವರಿಗೆ ಬಹುಮತ ಇಲ್ಲದಿದ್ದರೂ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.ಪಂಚರಾಜ್ಯ ಚುನಾವಣೇಲಿ ವಿಪಕ್ಷಗಳಿಗೆ ಉತ್ತಮ ವಾತಾವರಣ:
ಚುನಾವಣೆ ಎಂದರೆ ಕಠಿಣ, ಅದೇನು ಸುಲಭವಲ್ಲ. ಆದರೆ ಈ ಬಾರಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಉತ್ತಮ ವಾತಾವರಣ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಖರ್ಗೆ, ‘ರಾಷ್ಟ್ರದ ಸಮಸ್ಯೆಗಳು, ಆಯಾ ರಾಜ್ಯದ ಸಮಸ್ಯೆಗಳು, ನಿರುದ್ಯೋಗ, ಹಣದುಬ್ಬರದಂತಹ ಗಂಭೀರ ಸಮಸ್ಯೆಗಳಿವೆ. ಹೀಗಾಗಿ ಕೇಂದ್ರ ಸರ್ಕಾರದ ಬಗ್ಗೆ ಜನ ನಿರಾಶೆಗೊಂಡಿದ್ದು, ವಿರೋಧಪಕ್ಷಗಳಿಗೆ ಉತ್ತಮ ವಾತಾವರಣವಿದೆ’ ಎಂದರು. ‘ನಾನು ಅಸ್ಸಾಂ, ಕೇರಳ ರಾಜ್ಯಗಳಿಗೆ ಹೋಗಿದ್ದೆ. ಈಗ ಪುದುಚೇರಿ, ಭಾನುವಾರ ಕೇರಳ, ಸೋಮವಾರ ಅಸ್ಸಾಂಗೆ ಹೋಗುತ್ತಿದ್ದೇನೆ. ಎಲ್ಲಾ ಕಡೆಯೂ ಕಾಂಗ್ರೆಸ್‌ಗೆ ಉತ್ತಮ ಸ್ಪಂದನೆ ಇದೆ’ ಎಂದು ಹೇಳಿದರು.