ಕನ್ನಡಪ್ರಭ ವಾರ್ತೆ ಬೆಳಗಾವಿ

ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೊಲೀಸ್ ತನಿಖೆಯಿಂದ ಸಿಐಡಿ ತನಿಖೆಯ ಹಂತ ತಲುಪಿದ್ದ ಪ್ರಕರಣಕ್ಕೆ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಪ್ರವೇಶಿಸಿದ್ದು, ಹಣದ ಮೂಲ, ವರ್ಗಾವಣೆ ಹಾಗೂ ಆಸ್ತಿಗಳ ರೂಪದಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂಬ ಆಯಾಮಗಳತ್ತ ತನಿಖೆ ವಿಸ್ತರಿಸುವ ಸೂಚನೆ ದೊರೆತಿದೆ.

ಶಿವಂ ಅಸೋಸಿಯೇಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ನೀಲಣ್ಣವರ ಅವರ ಬೆಳಗಾವಿಯ ಶಿವಬಸವ ನಗರದ ಎಂಎಚ್‌ ಟವರ್‌ ಅಪಾರ್ಟ್‌ಮೆಂಟ್‌ನಲ್ಲಿರುವ ನಿವಾಸದ ಮೇಲೆ ಶುಕ್ರವಾರ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರು ಹಾಗೂ ಗೋವಾ ಘಟಕದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಲವು ಗಂಟೆಗಳ ಕಾಲ ದಾಖಲೆಗಳು, ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಹಣಕಾಸು ದಾಖಲೆಗಳನ್ನು ಅವರು ಪರಿಶೀಲಿಸಿದ್ದಾರೆ.ದಾಳಿ ವೇಳೆ ಶಿವಾನಂದ ನೀಲಣ್ಣವರ ಪತ್ನಿ ಸಂಗೀತಾ ಹಾಗೂ ಅಳಿಯ ಸಂಜು ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರುವುದು ತಿಳಿದುಬಂದಿದೆ. ಹೂಡಿಕೆದಾರರಿಂದ ಸಂಗ್ರಹಿಸಲಾದ ಹಣ ಯಾರ ಖಾತೆಗಳಿಗೆ ಬಂದಿದೆ? ಯಾವ ಉದ್ದೇಶಕ್ಕೆ ಬಳಸಲಾಗಿದೆ? ಕುಟುಂಬ ಸದಸ್ಯರು ಅಥವಾ ಆಪ್ತರ ಹೆಸರಿನಲ್ಲಿ ಆಸ್ತಿ ಸೃಷ್ಟಿಸಲಾಗಿದೆಯೇ ಎಂಬ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿರುವ ಸಾಧ್ಯತೆ ಇದೆ.

ಪ್ರಕರಣದ ತನಿಖೆಯನ್ನು ಶಿವಾನಂದ ನೀಲಣ್ಣವರ ನಿವಾಸಕ್ಕೆ ಮಾತ್ರ ಸೀಮಿತಗೊಳಿಸದೆ, ಅವರ ಆಪ್ತರ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸವೊಂದರ ಮೇಲೆಯೂ ಇಡಿ ದಾಳಿ ನಡೆಸಿದ್ದು, ಚಿಕ್ಕೋಡಿಯಲ್ಲಿರುವ ಸುಭಾಷ್ ಎಂಬುವವರ ಮನೆಯ ಮೇಲೂ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಹಣಕಾಸು ವ್ಯವಹಾರಗಳ ಜಾಲವು ಒಬ್ಬ ವ್ಯಕ್ತಿ ಅಥವಾ ಒಂದೇ ಸ್ಥಳಕ್ಕೆ ಸೀಮಿತವಾಗಿರದೆ ವಿವಿಧ ಸಂಪರ್ಕಗಳ ಮೂಲಕ ನಡೆದಿದೆಯೇ ಎಂಬ ಅನುಮಾನಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.ಈ ಪ್ರಕರಣದ ಮೊದಲ ಪ್ರಮುಖ ಬೆಳವಣಿಗೆ ಕಳೆದ ಮೇ 15ರಂದು ನಡೆದಿತ್ತು. ಬೆಳಗಾವಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶಿವಂ ಅಸೋಸಿಯೇಟ್ಸ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ನಂತರ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೂಡಿಕೆದಾರರಿಂದ ಹಣ ಸಂಗ್ರಹಿಸಿದ ವಿಧಾನ, ವಾಗ್ದಾನ ಮಾಡಲಾದ ಬಡ್ಡಿ ದರ ಹಾಗೂ ಹಣ ಮರಳಿ ಪಾವತಿಸುವ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳ ಕುರಿತು ತನಿಖೆ ಆರಂಭವಾಗಿತ್ತು.ಪ್ರಕರಣದ ವ್ಯಾಪ್ತಿ ಹೆಚ್ಚಿದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಯಿತು. ಬರ್ಡ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ಠೇವಣಿ ಸಂಗ್ರಹದ ಸ್ವರೂಪ, ಹೂಡಿಕೆದಾರರ ಸಂಖ್ಯೆ, ಹಣದ ಪ್ರಮಾಣ ಹಾಗೂ ಕಂಪನಿಯ ನೈಜ ಆರ್ಥಿಕ ಸಾಮರ್ಥ್ಯದ ಕುರಿತು ಸಿಐಡಿ ಆಳವಾದ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಇದೀಗ ಇಡಿ ಅಧಿಕಾರಿಗಳು ಪ್ರವೇಶಿಸಿರುವುದರಿಂದ ತನಿಖೆಯ ಕೇಂದ್ರಬಿಂದು ಹಣದ ಹರಿವಿನತ್ತ ಸರಿಯುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಬೇರೆಡೆ ವರ್ಗಾಯಿಸಲಾಗಿದೆಯೇ, ಜಮೀನು, ಕಟ್ಟಡ, ಚಿನ್ನ ಅಥವಾ ಇತರೆ ಆಸ್ತಿಗಳ ಖರೀದಿಗೆ ಬಳಸಲಾಗಿದೆಯೇ? ಸಂಬಂಧಿಕರು ಅಥವಾ ಆಪ್ತರ ಹೆಸರಿನಲ್ಲಿ ಹಣ ಹೂಡಿಕೆ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವುದು ಮುಂದಿನ ತನಿಖೆಯ ಪ್ರಮುಖ ಭಾಗವಾಗುವ ನಿರೀಕ್ಷೆಯಿದೆ.ಪೊಲೀಸ್, ಸಿಐಡಿ ಬಳಿಕ ಇದೀಗ ಇಡಿ ತನಿಖೆಯೂ ಆರಂಭವಾಗಿರುವುದರಿಂದ ಶಿವಂ ಅಸೋಸಿಯೇಟ್ಸ್ ಪ್ರಕರಣ ಬಹುಮಟ್ಟದ ತನಿಖೆಯಾಗಿ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ದಾಖಲೆಗಳ ವಶಪಡಿಕೆ, ಬ್ಯಾಂಕ್ ಖಾತೆಗಳ ಪರಿಶೀಲನೆ, ಆಸ್ತಿಗಳ ವಿವರ ಹಾಗೂ ಹಣಕಾಸು ವ್ಯವಹಾರಗಳ ಸರಪಳಿ ಬಹಿರಂಗವಾಗುವ ಸಾಧ್ಯತೆ ಇದ್ದು, ಇಡಿ ದಾಳಿಯ ಫಲಿತಾಂಶ ಪ್ರಕರಣದ ಮುಂದಿನ ದಿಕ್ಕು ನಿರ್ಧರಿಸಲಿದೆ.