ಸಾರಾಂಶ
ಬೆಂಗಳೂರು : ಕೊಳವೆ ಬಾವಿಗಳ ಕೊರೆಯುವುದು ಮತ್ತು ಕುಡಿಯುವ ನೀರಿನ ಘಟಕ ಸ್ಥಾಪನೆ ವಿಚಾರದಲ್ಲಿ ನಡೆದಿರುವ ಅವ್ಯವಹಾರ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ ಬೆನ್ನಲ್ಲೆ ಇದೀಗ ಟಿಡಿಆರ್‌ನಲ್ಲಿನ (ಅಭಿವೃದ್ಧಿ ಹಕ್ಕು ವರ್ಗಾವಣೆ) ಅಕ್ರಮಗಳನ್ನು ಬಯಲು ಮಾಡಲು ಮುಂದಾಗಿದೆ.
ಟಿಡಿಆರ್‌ಗೆ ಸಂಬಂಧಿಪಟ್ಟಂತೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಬಿಬಿಎಂಪಿಯ ಎಲ್ಲಾ ವಲಯಗಳಿಗೆ ಸಮನ್ಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವ ವೇಳೆ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು ಎಂದು ಸಮನ್ಸ್‌ನಲ್ಲಿ ತಿಳಿಸಿದೆ. ಈ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೆ ಬೋರ್‌ವೇಲ್ ಕೊರೆಯುವಿಕೆ ಅಕ್ರಮದ ಜತೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಿಬಿಎಂಪಿಯ ಭೂ ಸ್ವಾಧೀನ ಟಿಡಿಆರ್ ವಿಭಾಗದ ಉಪಆಯುಕ್ತರು ಎಲ್ಲಾ ಮಾಹಿತಿಯನ್ನು ಒದಗಿಸಬೇಕು. 2005ರಿಂದ ಈವರೆಗೆ ಸಲ್ಲಿಕೆಯಾಗಿರುವ ದೂರುಗಳನ್ನು ಮತ್ತು ಅವುಗಳ ಸ್ಥಿತಿಗಳ ಕುರಿತು ಸಂಪೂರ್ಣ ವಿವರಗಳನ್ನು ನೀಡಬೇಕು. ಟಿಡಿಆರ್ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಆದರೆ, ತನಿಖೆಯು ಸಮರ್ಪಕವಾಗಿ ನಡೆದಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಎಲ್ಲಾ ವಿವರಗಳನ್ನು ಒದಗಿಸಬೇಕು. ಅಲ್ಲದೇ, ಈ ಬಗ್ಗೆ ದಾಖಲಾಗಿರುವ ಎಫ್‌ಐಆರ್ ವಿವರಗಳನ್ನು ಸಹ ಒದಗಿಸಬೇಕು ಎಂದು ತಿಳಿಸಿದೆ.
ಇತ್ತೀಚೆಗೆ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು ಬೋರ್‌ವೆಲ್ ಕೊರೆಯುವಿಕೆ ಮತ್ತು ಕುಡಿಯುವ ನೀಡಿನ ಘಟಕ ಸ್ಥಾಪನೆಯಲ್ಲಿ ₹400 ಕೋಟಿಗಿಂತ ಹೆಚ್ಚು ಅವ್ಯವಹಾರ ನಡೆದಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ ಟಿಡಿಆರ್‌ನಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಈ ಬಗ್ಗೆ ವಿಸ್ತೃತವಾಗಿ ಪರಿಶೀಲನೆ ನಡೆಸಿದಾಗ ಕೋಟ್ಯಂತರ ರು. ಮೌಲ್ಯದ ಟಿಡಿಆರ್ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.