ಸಚಿವ ಸತೀಶ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ ಖಂಡಿಸಿ ಮುಂಡರಗಿ ತಾಲೂಕು ವಾಲ್ಮೀಕಿ ನಾಯಕ ಸಂಘ, ಅಹಿಂದ ಸಂಘಟನೆ, ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮುಂಡರಗಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯು ಕೇವಲ ರಾಜಕೀಯ ಪ್ರೇರಿತ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಆರೋಪಿಸಿದರು.
ತಾಲೂಕು ವಾಲ್ಮೀಕಿ ನಾಯಕ ಸಂಘ, ಅಹಿಂದ ಸಂಘಟನೆ, ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆ ಹಾಗೂ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ದಲಿತ ಹಾಗೂ ಅಹಿಂದ ಸಮುದಾಯದ ನಾಯಕರ ಬೆಳವಣಿಗೆಯನ್ನು ಸಹಿಸದೆ ಕೇಂದ್ರ ಬಿಜೆಪಿ ಸರ್ಕಾರ ಈ ಷಡ್ಯಂತ್ರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.2028ರಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಭಯ ಬಿಜೆಪಿಯನ್ನು ಕಾಡುತ್ತಿದೆ. ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತೇಜೋವಧೆ ಮಾಡುವ ಹುನ್ನಾರ ನಡೆಯುತ್ತಿದ್ದು, ಇಂತಹ ದಾಳಿಗಳಿಂದ ಕಾಂಗ್ರೆಸ್ ನಾಯಕರು ಹೆದರುವುದಿಲ್ಲ. ಇದುವರೆಗೂ ಕೇಂದ್ರ ಸರ್ಕಾರ ನಡೆಸಿದ ಇಡಿ ದಾಳಿಯಲ್ಲಿ ಹೆಚ್ಚು ಬಲಿಯಾದವರು ನಮ್ಮ ಕಾಂಗ್ರೆಸ್ ಮಾತ್ರ. ಇದು ಹೀಗೆ ಮುಂದುವರಿಯುವುದು ಸರಿಯಲ್ಲ ಎಂದು ಎಚ್ಚರಿಸಿದರು.
ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ದಾನೇಶ್ವರಿ ಭಜಂತ್ರಿ, ಮುಖಂಡರಾದ ಚಂದ್ರಶೇಖರ ಪೂಜಾರ, ನಾಗರಾಜ ಹೊಂಬಳಗಟ್ಟಿ, ರಾಘವೇಂದ್ರ ನೆರೇಗಲ್, ನಿಂಗರಾಜ ಹಾಲಿನವರ ಮಾತನಾಡಿ, ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕುವ ಉದ್ದೇಶದಿಂದಲೇ ಇಂತಹ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ತನಿಖೆಗಳ ಹೆಸರಿನಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಪ್ರಬಲ ಧ್ವನಿಯನ್ನು ಅಡಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 31 ಗಂಟೆಗಳ ಕಾಲ ತಪಾಸಣೆ ನಡೆಸಿದರೂ ಯಾವುದೇ ಅಕ್ರಮ ಪತ್ತೆಯಾಗಿಲ್ಲ, ಜನತೆ ಈ ರಾಜಕೀಯ ಪಿತೂರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ಸೇಡಿನ ರಾಜಕಾರಣ ಮುಂದುವರಿದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.ಚಂದ್ರಶೇಖರ ಪೂಜಾರ ಮನವಿ ಓದಿದರು. ಆನಂತರ ಎಲ್ಲ ಸಂಘಟನೆಗಳು ಸೇರಿ ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ರಾಮಣ್ಣ ಮುಕ್ಕಣ್ಣನವರ, ಮುಖಂಡರಾದ ಹೇಮಂತಗೌಡ ಪಾಟೀಲ, ಸುರೇಶ ಮಾಗಡಿ, ಸುರೇಶ ಬಣಗಾರ, ಕಲಾಲ, ರಾಜು ಡಾವಣಗೇರಿ, ಶರಣಪ್ಪ ಮಲ್ಲಾಪುರ, ನಬೀಸಾಬಗ ಕೆಲೂರ, ರಾಜಾಭಕ್ಷಿ ಬೆಟಗೇರಿ, ಡಿ.ಎಂ. ಕಾತರಕಿ, ಲಕ್ಷ್ಮಣ ತಗಡಿನಮನಿ, ಮನೋಜ ಪಾಟೀಲ, ಬಿ.ಎಫ್. ಈಟಿ, ಸುರೇಶ ನಾಯಕ, ಎ.ಪಿ. ದಂಡಿನ, ಲಕ್ಷ್ಮಿದೇವಿ ಮಾಗಡಿ, ಮೈಲಾರಪ್ಪ ಕಲಕೇರಿ, ಬಿ.ಎಫ್. ಈಟಿ, ಮನೋಜ ರಾಠೋಡ, ಅಡಿವೆಪ್ಪ ಉಪಸ್ಥಿತರಿದ್ದರು.