ಚಿತ್ರದುರ್ಗದ ಕೈ ಶಾಸಕ ವೀರೇಂದ್ರಗೆ ಇ.ಡಿ. ಶಾಕ್‌

| Published : Aug 23 2025, 02:01 AM IST

ಸಾರಾಂಶ

ಅಕ್ರಮ ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಆರೋಪದಡಿ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಹಾಗೂ ಅವರ ಸಹೋದರರು, ಪಾಲುದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

- ಅಕ್ರಮವಾಗಿ ಆನ್‌ಲೈನ್‌, ಆಫ್‌ಲೈನ್‌ ಬೆಟ್ಟಿಂಗ್‌ ಆರೋಪ- ದೇಶದ 30 ಸ್ಥಳಗಳಲ್ಲಿ ಏಕಕಾಲದಲ್ಲಿ ಅಧಿಕಾರಿಗಳ ಶೋಧ- ಕುಸುಮಾ ಹನುಮಂತರಾಯಪ್ಪ ಸೋದರನ ಮೇಲೂ ದಾಳಿ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ಆರೋಪದಡಿ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಹಾಗೂ ಅವರ ಸಹೋದರರು, ಪಾಲುದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಇದೇ ವೇಳೆ, ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಸೋದರನ ನಿವಾಸದಲ್ಲೂ ಶೋಧ ಕಾರ್ಯ ನಡೆದಿದೆ.

ಇ.ಡಿ. ಅಧಿಕಾರಿಗಳ ದಾಳಿ ವೇಳೆ ಕೆ.ಸಿ.ವೀರೇಂದ್ರ ಚಿತ್ರದುರ್ಗ ಮನೆಯಲ್ಲಿ ಇರಲಿಲ್ಲ. ಕೆಲಸ ನಿಮಿತ್ತ ಸಿಕ್ಕಿಂಗೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಇ.ಡಿ.ಅಧಿಕಾರಿಗಳು, ಅಲ್ಲಿಯೇ ವೀರೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಜಿಲ್ಲೆಯ 6, ಹುಬ್ಬಳ್ಳಿಯ 1, ಬೆಂಗಳೂರು ನಗರದ 10, ಜೋಧ್‌ಪುರದ 3, ಮುಂಬೈನ 2 ಹಾಗೂ ಗೋವಾದ 8 ಕಡೆ ಸೇರಿ ವೀರೇಂದ್ರ ಅವರಿಗೆ ಸೇರಿದ ರಾಜ್ಯ ಹಾಗೂ ಹೊರರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು, ತೀವ್ರ ಶೋಧ ನಡೆಸಿದ್ದಾರೆ. ಅಂತೆಯೇ ವೀರೇಂದ್ರ ಅವರಿಗೆ ಸೇರಿದ ಗೋವಾದ ಪಪ್ಪೀಸ್‌ ಕ್ಯಾಸಿನೋ ಗೋಲ್ಡ್‌, ಓಶನ್‌ ರಿವರ್ಸ್‌ ಕ್ಯಾಸಿನೋ, ಪಪ್ಪೀಸ್‌ ಕ್ಯಾಸಿನೋ ಪ್ರೈಡ್‌, ಓಷನ್‌ 7 ಕ್ಯಾಸಿನೋ, ಬಿಗ್‌ ಡ್ಯಾಡಿ ಕ್ಯಾಸಿನೋಗಳ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಅಕ್ರಮ ಆನ್‌ಲೈನ್‌ ಮತ್ತು ಆಫ್‌ ಲೈನ್‌ ಬೆಟ್ಟಿಂಗ್‌ ಆರೋಪ ಪ್ರಕರಣ ಸಂಬಂಧ ಇ.ಡಿ. ಅಧಿಕಾರಿಗಳು ವೀರೇಂದ್ರ, ಆತನ ಸಹೋದರರು ಹಾಗೂ ಪಾಲುದಾರರ ಮನೆಗಳ ಮೇಲೆ ಈ ದಾಳಿ ನಡೆಸಿದ್ದಾರೆ. ವೀರೇಂದ್ರ ‘ಕಿಂಗ್‌ 567’, ‘ಪಪ್ಪೀಸ್‌ 003’, ‘ರತ್ನ ಗೇಮಿಂಗ್‌’ ಇತ್ಯಾದಿ ಹೆಸರಿನಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ತಾಣಗಳನ್ನು ನಡೆಸುತ್ತಿರುವುದು ಇ.ಡಿ.ಅಧಿಕಾರಿಗಳ ಶೋಧದ ವೇಳೆ ಬಯಲಾಗಿದೆ.

ಆರೋಪಿ ವೀರೇಂದ್ರ ಅವರ ಕಾಲ್‌ ಸೆಂಟರ್‌ ಸೇವೆಗಳು ಮತ್ತು ಗೇಮಿಂಗ್‌ ವ್ಯವಹಾರಕ್ಕೆ ಸಂಬಂಧಿಸಿ ಅವರ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈನಲ್ಲಿ ಡೈಮಂಡ್‌ ಸಾಫ್ಟ್‌ ಟೆಕ್‌, ಟಿಆರ್‌ಎಸ್‌ ಟೆಕ್ನಾಲಜೀಸ್‌ ಹಾಗೂ ಪ್ರೈಮ್‌ 9 ಟೆಕ್ನಾಲಜೀಸ್‌ ಎಂಬ ಮೂರು ಕಂಪನಿಗಳನ್ನು ನಿರ್ವಹಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.

---ಬೆಂಗಳೂರಿನ ಮನೆ ಮೇಲೂ ದಾಳಿ

ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಸೇರಿದ, ಬೆಂಗಳೂರಿನ ವಸಂತನಗರದ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಹಾಗೂ ಸಹಕಾರ ನಗರದ ಮನೆಗಳ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಫ್ಲ್ಯಾಟ್‌ನಿಂದಲೇ ವೀರೇಂದ್ರ ತಮ್ಮ ಕಂಪನಿಗಳು ಹಾಗೂ ಗೋವಾ ಕ್ಯಾಸಿನೋಗಳ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಫ್ಲ್ಯಾಟ್‌ ಮೇಲೂ ದಾಳಿ ನಡೆಸಿದ್ದು, ವ್ಯವಹಾರಕ್ಕೆ ಸಂಬಂಧಿಸಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

---

ಕಾಂಗ್ರೆಸ್‌ ನಾಯಕಿ ಕುಸುಮಾ

ಸಹೋದರನ ಮನೆ ಮೇಲೂ ದಾಳಿ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಸಹೋದರ ಅನಿಲ್‌ ಗೌಡ ಅವರ ಮುದ್ದಿನಪಾಳ್ಯದ ನಿವಾಸದ ಮೇಲೂ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನಿಲ್‌ ಗೌಡ ಅವರು ವೀರೇಂದ್ರ ಅವರ ವ್ಯವಹಾರದ ಪಾಲುದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧಿಸಿದ್ದಾರೆ. ಅನಿಲ್‌ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತೆಯೇ ವೀರೇಂದ್ರ ಅವರ ವ್ಯವಹಾರದ ಇತರೆ ಪಾಲುದಾರರ ಮನೆಗಳು ಹಾಗೂ ಕಚೇರಿಗಳ ಮೇಲೂ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದಾರೆ.