ಸಾರಾಂಶ
ಕೋಟ್ಯಂತರ ರು. ಪಡೆದು ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬೆಂಗಳೂರಿನ ಹೊರವಲಯದ ದೇವನಹಳ್ಳಿ ತಾಲೂಕಿನ ಓಜೋನ್ ಅರ್ಬನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಚೇರಿ ಹಾಗೂ ಪ್ರವರ್ತಕರ ಮನೆಗಳು ಸೇರಿ 10 ಕಡೆ ಜಾರಿ ನಿರ್ದೇಶನಾಲಯದ (ಇ.ಡಿ.) ದಾಳಿ ನಡೆಸಿ ಶೋಧ
ಬೆಂಗಳೂರು : ಫ್ಲ್ಯಾಟ್ ನೀಡುವುದಾಗಿ ಹಲವರಿಂದ ಕೋಟ್ಯಂತರ ರು. ಪಡೆದು ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬೆಂಗಳೂರಿನ ಹೊರವಲಯದ ದೇವನಹಳ್ಳಿ ತಾಲೂಕಿನ ಓಜೋನ್ ಅರ್ಬನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಚೇರಿ ಹಾಗೂ ಪ್ರವರ್ತಕರ ಮನೆಗಳು ಸೇರಿ 10 ಕಡೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಓಜೋನ್ ಅರ್ಬನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ದೇವನಹಳ್ಳಿ ತಾಲೂಕಿನಲ್ಲಿ ಓಜೋನ್ ಅರ್ಬನ್ ಹೆಸರಿನ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು. 2018ರ ವೇಳೆ ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಹಲವರಿಂದ ಕೋಟ್ಯಂತರ ರು. ಪಡೆದಿತ್ತು. ಆದರೆ, ಈವರೆಗೆ ಶೇ.49ರಷ್ಟು ಮಾತ್ರ ಕೆಲಸವಾಗಿದೆ. ಹೀಗಾಗಿ ಕಂಪನಿ ಫ್ಲ್ಯಾಟ್ ನೀಡಲು ಅಥವಾ ಹಣ ವಾಪಾಸ್ ನೀಡಲು ವಿಫಲವಾಗಿತ್ತು. ಈ ಸಂಬಂಧ ಹಲವು ಗ್ರಾಹಕರು ಕಂಪನಿ ಹಾಗೂ ಆಡಳಿತ ಮಂಡಳಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರು.
ಈ ದೂರು ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಇ.ಡಿ.ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆ ಭಾಗವಾಗಿ ಇಡಿ ಅಧಿಕಾರಿಗಳು ಕಂಪನಿಯ ಪ್ರಮುಖ ಪ್ರವರ್ತಕ ಸತ್ಯಮೂರ್ತಿ ವಾಸುದೇವನ್ ಸೇರಿದಂತೆ ಕಂಪನಿಯ ಕಚೇರಿ ಹಾಗೂ ಇತರೆ ಪ್ರವರ್ತಕರ ಮನೆಗಳು ಸೇರಿ 10 ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.