ಸಿದ್ದರಾಮಯ್ಯ ವಿರುದ್ಧ ಇ.ಡಿ ದುರ್ಬಳಕೆ; ಬಿಜೆಪಿಗರು ರಾಜ್ಯದ ಜನರ ಕ್ಷಮೆಯಾಚಿಸಲಿ: ಡಾ. ಮಹದೇವಪ್ಪ ಆಗ್ರಹ

| Published : Jul 22 2025, 01:15 AM IST

ಸಿದ್ದರಾಮಯ್ಯ ವಿರುದ್ಧ ಇ.ಡಿ ದುರ್ಬಳಕೆ; ಬಿಜೆಪಿಗರು ರಾಜ್ಯದ ಜನರ ಕ್ಷಮೆಯಾಚಿಸಲಿ: ಡಾ. ಮಹದೇವಪ್ಪ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಮಾತನಾಡಲು ಆರಂಭಿಸಿದರೆ ಇ.ಡಿ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ಇ.ಡಿ ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇ.ಡಿ ಸಂಸ್ಥೆಯ ದುರ್ಬಳಕೆ ಮಾಡಿರುವ ಬಿಜೆಪಿಗರು ರಾಜ್ಯದ ಜನರ ಕ್ಷಮೆಯಾಚಿಸಲಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.

ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದ ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದ್ದು, ಚುನಾವಣೆಗಳು ಚುನಾವಣಾ ಕಣದಲ್ಲಿ ನಡೆಯಲಿ, ನೀವು ರಾಜಕೀಯ ದಾಳವಾಗಿ ಬಳಕೆ ಆಗಬೇಡಿ ಎಂದಿದ್ದಾರೆ.

ನಾವು ಮಾತನಾಡಲು ಆರಂಭಿಸಿದರೆ ಇ.ಡಿ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ಇ.ಡಿ ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಈ ಮೂಲಕ ಬಿಜೆಪಿಗರು ವಿಪಕ್ಷಗಳನ್ನು ತೇಜೋವಧೆ ಮಾಡಲು ಇ.ಡಿ ದಾಳವಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ಇಂತಹ ಹೀನ ರಾಜಕೀಯ ಕೃತ್ಯ ಮಾಡಿದ್ದಕ್ಕಾಗಿ ಅವರು ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದ್ದಾರೆ.

ಇನ್ನು ರಾಜಕೀಯದ ಹಿಡಿತಕ್ಕೆ ಒಳಗಾಗದೇ ಸ್ವತಂತ್ರ ತನಿಖಾ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಸಂಸ್ಥೆಗಳ ಘನತೆಯನ್ನು ಮತ್ತು ಅದರ ಮಹತ್ವವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ದೇಶದ ಸರ್ವೋಚ್ಛ ಅಂಗವಾದ ನ್ಯಾಯಾಂಗವೇ ಇಡಿ ಸಂಸ್ಥೆಯ ಅಧಿಕಾರ ದುರ್ಬಳಕೆ ವಿಷಯದಲ್ಲಿ ದನಿ ಎತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಆಗಿದೆ ಎಂದು ಅವರು ಸ್ವಾಗತಿಸಿದ್ದಾರೆ.

ಸಿದ್ದರಾಮಯ್ಯ ವಿಷಯದಲ್ಲಿ ಇ.ಡಿ ರಾಜಕೀಯ ಮಾಡಿದ್ದು ಸಾಬೀತು: ಸುನಿಲ್ ಬೋಸ್

ಕನ್ನಡಪ್ರಭ ವಾರ್ತೆ ಮೈಸೂರು

ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇ.ಡಿ ತನಿಖಾ ಸಂಸ್ಥೆಯು ರಾಜಕೀಯ ಮಾಡುತ್ತಿದ್ದು, ಇದು ಸರಿಯಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಇಡಿ ತನಿಖಾ ಸಂಸ್ಥೆ ಏಕೆ ರಾಜಕೀಯ ದಾಳ ಆಗುತ್ತಿದೆ ಎಂದು ನೇರವಾಗಿ ಪ್ರಶ್ನೆ ಮಾಡಿದೆ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದ್ದಾರೆ.

ದೇಶವೊಂದರ ಪ್ರಮುಖ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯು, ದೇಶಾದ್ಯಂತ ಚುನಾವಣಾ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು, ಕೆಲಸ ಮಾಡಬೇಕಾದ ಜಾಗದಲ್ಲಿ ವಿಪಕ್ಷಗಳನ್ನು ಹೆದರಿಸಿ ಚುನಾವಣೆ ಮಾಡುತ್ತಿರುವುದು ನಿಜಕ್ಕೂ ಖಂಡನಿಯ. ಸುಪ್ರೀಂ ಕೋರ್ಟ್ ನ ಈ ಎಚ್ಚರಿಕೆಯು, ರಾಜಕೀಯ ಪ್ರೇರಿತವಾಗಿ ವರ್ತಿಸುವ ತನಿಖಾ ಸಂಸ್ಥೆಗಳಿಗೆ ಅಗತ್ಯವಾಗಿ ನೀಡಬೇಕಿದ್ದ ಎಚ್ಚರಿಕೆ ಆಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಸೌಂದರ್ಯವಾದ ಜನಾಭಿಪ್ರಾಯವನ್ನು ಭ್ರಷ್ಟಗೊಳಿಸುವ ಬಿಜೆಪಿಗರ ಹೀನಾಯ ಪ್ರಯತ್ನಗಳು ಇಲ್ಲಿಗೇ ಕೊನೆಯಾಗಬೇಕು. ಇಲ್ಲವಾದರೆ ಮುಂದೆ ಜನರೇ ಇವರಿಗೆ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇ.ಡಿ ಛೂ ಬಿಟ್ಟಿದ್ದ ಬಿಜೆಪಿಗೆ ಸುಪ್ರೀಂ ಕಪಾಳಮೋಕ್ಷ: ಬಿಸುಬ್ರಹ್ಮಣ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ವಿರುದ್ಧ ತನಿಖೆ ನಡೆಸಲು ಜಾರಿ ನಿರ್ದೇಶನಾಲಯದ ಮೇಲ್ಮನವಿಯನ್ನ ಸುಪ್ರೀಂಕೋರ್ಟ್ ವಜಾ ಮಾಡಿದೆ. ಇದರಿಂದ ಬಿಜೆಪಿಗೆ ಕಪಾಳಮೋಕ್ಷ ಆದಂತಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ಕುಟುಕಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನ ನಾವೆಲ್ಲರೂ ಸ್ವಾಗತಿಸುತ್ತೇವೆ. ಮುಖ್ಯಮಂತ್ರಿಗಳ ಪತ್ನಿ ಯಾವುದೇ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡವರಲ್ಲ. ಪ್ರಚಾರಕ್ಕೂ ಬಂದವರಲ್ಲ. ಆದಾಗ್ಯೂ ಕಾನೂನಿನ ಅನ್ವಯ ಪಡೆದಿದ್ದ 14 ಸೈಟುಗಳನ್ನು ಹಿಂದಿರುಗಿಸಿ ಘನತೆ ಮೆರೆದಿದ್ದರು. ಆದರೆ, ವಿಪಕ್ಷಗಳ ಕುತಂತ್ರ ಅವರನ್ನು ಜೈಲಿಗೆ ಕಳಿಸುವುದಾಗಿತ್ತು. ಜೊತೆಗೆ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯುವ ಹುನ್ನಾರವೂ ನಡೆದಿತ್ತು. ಇದೀಗ ನ್ಯಾಯ ದೇವತೆಯೇ ಬಿಜೆಪಿಗೆ ತಪರಾಕಿ ಬಾರಿಸಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯವರು ಹಿಂದುಳಿದ ವರ್ಗದ ನಾಯಕ ಅನ್ನೋ ಕಾರಣಕ್ಕೆ ಷಡ್ಯಂತ್ರ ಮಾಡಿದ್ದರು. ರಾಜಕೀಯವಾಗಿ ಸಿದ್ದರಾಮಯ್ಯರನ್ನ ಎದುರಿಸಲಾಗದೇ ಇಡಿಯನ್ನ ದುರ್ಬಳಕೆ ಮಾಡಿಕೊಂಡು, ಪಾರ್ವತಿ ಅವರ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ಮಾನಸಿಕವಾಗಿಯೂ ಕಿರುಕುಳ ನೀಡಿದ್ದರು. ಸುಪ್ರೀಂಕೋರ್ಟ್ ಆದೇಶದಿಂದ ವಿರೋಧಿಗಳಿಗೆ ಮುಖಭಂಗವಾಗಿದೆ ಎಂದಿದ್ದಾರೆ.

ಕಳೆದ 10- 11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದ ಎಲ್ಲರಲ್ಲಿಯೂ ಈ ತೀರ್ಪು ಸಮಾಧಾನ ಉಂಟು ಮಾಡಿದೆ. ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ. ಇನ್ನಾದರೂ ಬಿಜೆಪಿಯವರು ವೈಯಕ್ತಿಕ, ದ್ವೇಷ ರಾಜಕಾರಣ ಬಿಟ್ಟು, ಆಡಳಿತ ವಿಚಾರದಲ್ಲಿ ಚರ್ಚೆ ಮಾಡಲಿ ಎಂದು ತಿಳಿಸಿದ್ದಾರೆ.

ಇನ್ನೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧವೂ ಹೂಡಲಾದ ಹಣ ವರ್ಗಾವಣೆ ಪ್ರಕರಣವನ್ನು ನ್ಯಾಯಾಲಯ ರದ್ದು ಪಡಿಸಿರುವುದನ್ನು ಅವರು ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ತೀರ್ಪು ಸತ್ಯದ ಕೈಗನ್ನಡಿ

ಕನ್ನಡಪ್ರಭ ವಾರ್ತೆ ಮೈಸೂರು

ದೇಶಕ್ಕೆ ಮಾದರಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತದ ಮೂಲಕ ದೇಶದ ಗಮನ ಸೆಳೆದಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಎದುರಿಸಲಾಗದ ಶಕ್ತಿಗಳು ಅವರ ಕುಟುಂಬವನ್ನು ಸಲ್ಲದ ಕಾರಣಕ್ಕೆ ಮೂಡಾ ಹಗರಣಕ್ಕೆ ತಳುಕು ಹಾಕುವ ವಿಫಲ ಪ್ರಯತ್ನಕ್ಕೆ ಸುಪ್ರೀಂಕೋರ್ಟ್ ಸರಿಯಾಗಿ ಪಾಠ ಹೇಳಿದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ಧಿ ಸಹಿಸದೆ ಮುಖ್ಯಮಂತ್ರಿ ಅವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಅಪಪ್ರಚಾರ ಮಾಡಿದರು. ಅವೆಲ್ಲದಕ್ಕೂ ಇಂದು ತೀರ್ಪು ಫುಲ್ ಸ್ಟಾಪ್ ನೀಡಿದೆ. ವಿರೋಧ ಪಕ್ಷಗಳು ಮುಂದಾದರು ರಾಜ್ಯದ ಜನತೆಗೆ ಕ್ಷಮೆ ಕೋರಿ ರಾಜ್ಯದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಸಹಕರಿಸಿ ಅಭಿವೃದ್ಧಿಗೆ ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.