ಕುಕ್ಕೆ ಸುಬ್ರಹ್ಮಣ್ಯದಲ್ಲಿ ೭೮ ಭಕ್ತರಿಂದ ಚೌತಿ ದಿನ ಎಡೆಸ್ನಾನ ಸೇವೆ

| Published : Dec 06 2024, 08:58 AM IST

ಸಾರಾಂಶ

ಪಂಚಮಿ ದಿನವಾದ ಶುಕ್ರವಾರ ಮತ್ತು ಷಷ್ಠಿ ದಿನ ಶನಿವಾರ ಕೂಡ ಕ್ಷೇತ್ರದಲ್ಲಿ ಎಡೆಸ್ನಾನ ಸೇವೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಚೌತಿ ದಿನವಾದ ಗುರುವಾರ ೭೮ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.

ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಎಡೆಸ್ನಾನ ಸೇವೆ ನಡೆಯುತ್ತದೆ. ಹೊರಾಂಗಣದ ಸುತ್ತಲೂ ಬಾಳೆ ಎಲೆಯನ್ನು ಹಾಕಿ ಅದರಲ್ಲಿ ದೇವರ ನೈವೇಧ್ಯವನ್ನು ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಅದನ್ನು ತಿಂದ ಬಳಿಕ ಭಕ್ತರಿಗೆ ಎಡೆಸ್ನಾನ ಸೇವೆಯನ್ನು ನೆರವೇರಿಸಲು ಅವಕಾಶ ಕಲ್ಪಿಸಲಾಯಿತು. ಪಂಚಮಿ ದಿನವಾದ ಶುಕ್ರವಾರ ಮತ್ತು ಷಷ್ಠಿ ದಿನ ಶನಿವಾರ ಕೂಡ ಕ್ಷೇತ್ರದಲ್ಲಿ ಎಡೆಸ್ನಾನ ಸೇವೆ ನಡೆಯಲಿದೆ. ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತ ಡಾ. ರಾಜಗೋಪಾಲ್ ಮಾರ್ಗದರ್ಶನದಲ್ಲಿ ನೆರವೇರಿತು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್‌, ಅರ್ಚಕ ಸರ್ವೇಶ್ವರ ಭಟ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಸೇರಿದಂತೆ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.