ಉತ್ತಮ ಸಮಾಜಕ್ಕೆ ಶಿಕ್ಷಣ, ಆರೋಗ್ಯ ಅತ್ಯವಶ್ಯ

| Published : Aug 13 2024, 12:56 AM IST

ಸಾರಾಂಶ

ಸಿಎಸ್ ಪುರ ಗ್ರಾಮದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮಿ ಒಕ್ಕಲಿಗರ ಟ್ರಸ್ಟ್ ವತಿಯಿಂದ ಶ್ರೀ ಜಗದ್ಗುರು ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ಥಳಿ ಲೋಕಾರ್ಪಣೆ

ಕನ್ನಡ ಪ್ರಭ ವಾರ್ತೆ ಗುಬ್ಬಿ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆರೋಗ್ಯ ಅತ್ಯವಶ್ಯ ಎಂಬುದನ್ನು ಅರಿತಿದ್ದ ಹಿಂದಿನ ಬಾಲಗಂಗಾಧರನಾಥ ಸ್ವಾಮೀಜಿಗಳು ಅದಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಮಕ್ಕಳಿಗೆ ಶಿಕ್ಷಣ ಹಾಗೂ ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ನಿರತರಾಗಿದ್ದರು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮಿಜಿ ತಿಳಿಸಿದರು.

ಸೋಮವಾರ ತಾಲೂಕಿನ ಸಿಎಸ್ ಪುರ ಗ್ರಾಮದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮಿ ಒಕ್ಕಲಿಗರ ಟ್ರಸ್ಟ್ ವತಿಯಿಂದ ಶ್ರೀ ಜಗದ್ಗುರು ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ತಳಿ ಲೋಕಾರ್ಪಣೆ ಹಾಗೂ ಗೋಪುರ ಕಳಶ ಪ್ರತಿಷ್ಠಾಪನ ಮತ್ತು ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣವನ್ನು ಪಡೆಯಬೇಕು ಎಂಬ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಿಂದ ಹಿಡಿದು ಅಮೆರಿಕಾದಂತಹ ದೊಡ್ಡ ದೇಶದವರೆಗೂ ಶಿಕ್ಷಣ ಕ್ಷೇತ್ರಗಳನ್ನು ತೆರೆದು ಶ್ರೀ ಮಠವು ಕೆಲಸವನ್ನು ಮಾಡುತ್ತಿದೆ. ಸಿ ಎಸ್ ಪುರಕ್ಕೂ ಆದಿಚುಂಚನಗಿರಿ ಮಠಕ್ಕೂ ಅವಿನಾಭಾವ ಸಂಬಂಧ ಹಲವು ದಶಕಗಳಿಂದಲೂ ಇದ್ದು ನಾನು ಚಂದ್ರಶೇಖರ ಪುರದಲ್ಲಿ ಓದುವಾಗ ನಡೆದಾಡಿದ್ದೇನೆ ಹಾಗಾಗಿ ಈ ಗ್ರಾಮವು ಹೆಚ್ಚಿನ ಅಭಿವೃದ್ಧಿ ಆಗಬೇಕಾಗಿದ್ದು, ಎಲ್ಲರೂ ಕೈಜೋಡಿಸಿ ಉತ್ತಮ ಶಾಲೆಯನ್ನು ಈ ಭಾಗದಲ್ಲಿ ನಿರ್ಮಾಣ ಮಾಡಿ ಎಲ್ಲರಿಗೂ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡೋಣ ಎಂದರು. ಇನ್ನೂ ಸಮುದಾಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತೇವೆ ಎಂದರೆ ದೆಹಲಿಯಲ್ಲಿಯು ಸಹ ನಮ್ಮ ಮಠವಿದ್ದು ಅಲ್ಲಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸಹ ಮಾಡುತ್ತೇವೆ ಇಂದು ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ತಳಿ ಬಹಳ ಸುಂದರವಾಗಿ ಅನಾವರಣಗೊಂಡಿದ್ದು, ಪ್ರತಿನಿತ್ಯ ಪೂಜಿಸುವಂತಹ ಕೆಲಸವನ್ನು ತಾವೆಲ್ಲರೂ ಮಾಡಬೇಕು ಎಂದರು.

ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ ಸಿ ಎಸ್ ಪುರದಲ್ಲಿ ಎಲ್ಲರೂ ಒಟ್ಟುಗೂಡಿ ಶ್ರೀಗಳ ಪುತ್ತಳಿ ಅನಾವರಣ ಮಾಡಿದ್ದು, ಅವರಿರುವ ಜಾಗ ಶಾಂತಿ ಸಮೃದ್ಧಿಯಿಂದ ತುಂಬಿರುತ್ತದೆ ಎಂದು ತಿಳಿಸಿದರು.

ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ಮನೆ ಮತ್ತು ಮಠ ಎರಡನ್ನು ನಾವುಗಳು ಚೆನ್ನಾಗಿ ನೋಡಿಕೊಂಡಾಗ ಮಾತ್ರ ಸಮಾಜ ಮತ್ತು ನಮ್ಮ ಕುಟುಂಬಗಳು ಚೆನ್ನಾಗಿ ಇರುತ್ತವೆ ಬಹಳ ವರ್ಷಗಳ ಹಿಂದೆ ಪುತ್ತಳಿ ಅನಾವರಣ ಮಾಡಲು ಆರಂಭವಾಗಿತ್ತು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ ಇಂದು ಅನಾವರಣಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಿ ಎಸ್ ಪುರದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳು, ದೇವರ ಮೆರವಣಿಗೆ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಂತರ ಸಿ ಎಸ್ ಪುರ ಸರ್ಕಲ್ ನಲ್ಲಿ ನಿರ್ಮಾಣ ಮಾಡಿರುವ ಪುತ್ತಳಿ ಅನಾವರಣ ಮಾಡಿದ ಶ್ರೀಗಳು ವೇದಿಕೆಗೆ ಆಗಮಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖ ಮಠದ ಮಂಗಳನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ, ಸಹಾಯಕ ಕಾರ್ಯದರ್ಶಿ ಹನುಮಂತರಾಯಪ್ಪ, ಲೋಕೇಶ್ ಬಿ ನಾಗರಾಜಯ್ಯ, ಮಾಜಿ ಕೆಎಂಎಫ್ ಅಧ್ಯಕ್ಷ ಮಹಾಲಿಂಗಯ್ಯ, ಕೊಂಡಜ್ಜಿ ವಿಶ್ವನಾಥ್, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗರ ಟ್ರಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು, ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.