ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜೀವನದಲ್ಲಿ ಗಳಿಸುವ ಸಂಪತ್ತು ಶಾಶ್ವತವಲ್ಲ. ಆದರೆ ನಾವು ಪಡೆಯುವ ಶಿಕ್ಷಣ ಮತ್ತು ಜ್ಞಾನ ಮಾತ್ರ ನಮ್ಮೊಂದಿಗೆ ಕೊನೆವರೆಗೂ ಇರುವ ಶಾಶ್ವತ ಆಸ್ತಿಯಾಗಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಪಟ್ಟರು.
ತಾಲೂಕಿನ ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ’ಶತಮಾನೋತ್ಸವ ಸಂಭ್ರಮದಲ್ಲಿ ಮಾತನಾಡಿ ತಾವೂ ಕೂಡ ಕೊಡಗಿನ ಇಂತಹದೇ ಒಂದು ಸರ್ಕಾರಿ ಶಾಲೆಯಲ್ಲಿ ಓದಿ ಬಂದವನು. ಇಂದು ನಾನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಅಂದು ಆ ಶಾಲೆ ನೀಡಿದ ಶಿಕ್ಷಣ ಮತ್ತು ಶಿಸ್ತಿನ ತರಬೇತಿಯೇ ಕಾರಣ ಎಂದು ಹೇಳಿದರು.ಹಳೆಯ ಕಾಲದ ಶಾಲಾ ವ್ಯವಸ್ಥೆ ನೆನಪಿಸಿಕೊಂಡ ಸಚಿವರು, ನಮ್ಮ ಶಾಲೆಯಲ್ಲಿ ಕಾಫಿ ತೋಟ ಮತ್ತು ಗದ್ದೆಗಳಿದ್ದವು. ನಾವು ವಿದ್ಯಾರ್ಥಿಗಳೇ ಅಲ್ಲಿ ಕೆಲಸ ಮಾಡುತ್ತಿದ್ದೆವು. ಇದರಿಂದ ನಮಗೆ ಯಾವುದೇ ಕೆಲಸ ಮಾಡಿದರೂ ಅದಕ್ಕೊಂದು ಗೌರವವಿದೆ ಎಂಬ ’ಕಾಯಕದ ಗೌರವ’ ಬಾಲ್ಯದಲ್ಲಿಯೇ ಮೈಗೂಡಿತು. ಅಂದಿನ ಶಿಕ್ಷಕರು ಕೇವಲ ಪಾಠವನ್ನಷ್ಟೇ ಅಲ್ಲದೆ, ಜೀವನದ ಮೌಲ್ಯಗಳನ್ನು ಕಲಿಸಿದ್ದಾರೆ ಎಂದು ಸ್ಮರಿಸಿದರು.ತೇಗೂರು ಶಾಲೆ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಒಗ್ಗೂಡಿ ಶಾಲೆ ಅಭಿವೃದ್ಧಿಪಡಿಸಿರುವುದನ್ನು ಶ್ಲಾಘಿಸಿದ ಸಚಿವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳ ಪಾತ್ರ ಬಹಳ ದೊಡ್ಡದು. ಅಭಿವೃದ್ಧಿ ಸಮಿತಿ ಮತ್ತು ದಾನಿಗಳು ಸರ್ಕಾರಿ ಶಾಲೆಯನ್ನು ನಮ್ಮ ಶಾಲೆ ಎಂದು ಭಾವಿಸಿ ಕೆಲಸ ಮಾಡಿದರೆ, ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಕರೆ ನೀಡಿದರು.ಸರಸ್ವತಿಯನ್ನು ಬಂಡೆ ಮೇಲೆ ಮತ್ತು ಲಕ್ಷ್ಮಿಯನ್ನು ಕಮಲದ ಮೇಲೆ ಕೂರಿಸಿರುವ ಪುರಾಣದ ಉದಾಹರಣೆ ನೀಡಿದ ಅವರು, ಸಂಪತ್ತು ಒಬ್ಬರ ಕೈಯಲ್ಲಿ ಶಾಶ್ವತವಾಗಿರುವುದಿಲ್ಲ. ಅದು ಚಂಚಲ. ಆದರೆ ವಿದ್ಯೆ ಹಂಚಿದಷ್ಟು ಬೆಳೆಯುತ್ತದೆ. ಅದು ನಮ್ಮನ್ನು ಸದಾ ರಕ್ಷಿಸುತ್ತದೆ. ದೇಶದ ಪ್ರಗತಿಯಲ್ಲಿ ಯುವಜನತೆ ಮತ್ತು ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ ಎಂದರು.ಇಂದಿನ ತಲೆಮಾರಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇವೆ. ವಿದ್ಯಾರ್ಥಿಗಳು ಅದರಲ್ಲಿನ ಒಳ್ಳೆಯ ಅಂಶಗಳನ್ನು ಮಾತ್ರ ಸ್ವೀಕರಿಸಬೇಕು. ಈ ನಿಟ್ಟಿ ನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಿಕ್ಷಣ ಮತ್ತು ಜನಸಾಮಾನ್ಯರ ಏಳಿಗೆಗಾಗಿ ಉತ್ತಮ ಬಜೆಟ್ ನೀಡಿದ್ದು, ಶಾಲಾ-ಕಾಲೇಜುಗಳ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುತ್ತಿದೆ ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯೊಂದು 100 ವರ್ಷ ಪೂರೈಸಿರುವುದು ಆ ಭಾಗದ ಶೈಕ್ಷಣಿಕ ಪ್ರಗತಿ ಮತ್ತು ಸಾಮಾಜಿಕ ಸುಧಾರಣೆ ಪ್ರತೀಕ ಎಂದು ಬಣ್ಣಿಸಿದರು.ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ಕಟ್ಟಡ ದಂತಹ ಮೂಲಭೂತ ಸೌಕರ್ಯವನ್ನು ಸರ್ಕಾರ ಒದಗಿಸುತ್ತಿದೆ. ಶಿಕ್ಷಣ ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗದೆ, ಜಾತಿ ಮತ್ತು ಲಿಂಗ ಆಧಾರಿತ ಅಸಮಾನತೆ ಹೋಗಲಾಡಿಸಿ ಬಡತನ ನಿರ್ಮೂಲನೆಗೆ ದಾರಿಯಾಗಬೇಕು ಎಂಬ ಮಹಾತ್ಮಾ ಗಾಂಧೀಜಿ ಕನಸನ್ನು ಈ ಶಾಲೆಗಳು ನನಸು ಮಾಡುತ್ತಿವೆ ಎಂದು ತಿಳಿಸಿದರು.ಸಮಾರಂಭದಲ್ಲಿ ಶ್ರೀ ಬಸವತತ್ವ ಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಡಾ.ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಡಿ.ಎಚ್. ಹರೀಶ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಜಿ.ಪಂ ಸಿಇಓ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯ ಜಗದೀಶ್, ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಇದ್ದರು.-- ಕೋಟ್--ಇಂಗ್ಲಿಷ್ ಭಾಷೆ ಕಲಿಕೆಯನ್ನು ನಾವು ವಿರೋಧಿಸುವುದಿಲ್ಲ, ಆದರೆ ಅತಿಯಾದ ಮೋಹದಿಂದ ನಮ್ಮ ಭಾಷೆ, ಸಂಸ್ಕೃತಿ ಮತ್ತು ಮೂಲ ಗುರುತನ್ನು ಕಳೆದುಕೊಳ್ಳಬಾರದು. ವ್ಯಾವಹಾರಿಕವಾಗಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದ್ದರೂ, ಅದು ನಮ್ಮ ಮಾತೃ ಭಾಷೆ ಸ್ಥಾನ ಪಡೆಯಬಾರದು. ನಾವು ಯಾರೆಂಬುದನ್ನು ತಿಳಿಸುವ ಅಸ್ಮಿತೆ ನಮ್ಮ ಭಾಷೆ ಮತ್ತು ಸಂಸ್ಕೃತಿಯಲ್ಲಿ ಅಡಗಿದೆ. ಕನ್ನಡ ಮರೆತು ಕೇವಲ ಇಂಗ್ಲಿಷನ್ನು ಅಪ್ಪಿಕೊಳ್ಳುವುದು ನಮ್ಮ ಸಾಂಸ್ಕೃತಿಕ ಅವನತಿಗೆ ಕಾರಣವಾಗಬಹುದು.- ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ
--
ಪೋಟೋ:
ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ’ಶತಮಾನೋತ್ಸವ ಸಂಭ್ರಮ’ದ ಸ್ಮರಣ ಸಂಚಿಕೆ ಬಿಡುಗಡೆಯನ್ನು ಸಚಿವ ಕೆ.ಜೆ.ಜಾರ್ಜ್ ಬಿಡುಗಡೆ ಮಾಡಿದರು. ಬಸವತತ್ವ ಪೀಠದ ಶ್ರೀ ಡಾ ಬಸವಮರುಳ ಸಿದ್ದ ಸ್ವಾಮೀಜಿ, ಶಾಸಕರಾದ ಎಚ್,ಡಿ.ತಮ್ಮಯ್ಯ, ಸಿ.ಟಿ.ರವಿ, ಎಸ್.ಎಲ್ ಭೋಜೇಗೌಡ, ಕೆಪೆಕ್ ಅಧ್ಯಕ್ಷ ಡಿ.ಎಚ್. ಹರೀಶ್, ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮೊದಲಾದವರಿದ್ದರು.-ಕೋಟ್ ಫೋಟೊ/ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ