ಸಾರಾಂಶ
ತಾಲೂಕಿನ 13 ಗ್ರಾಪಂ ಒಟ್ಟು 26 ಅರಿವು ಕೇಂದ್ರಗಳು ಪ್ರಾರಂಭವಾಗಿದ್ದು, ಆ ಅರಿವು ಕೇಂದ್ರಗಳಿಗೆ ಅಂಗವಿಕಲರ ಸಾಧನ ಸಲಕರಣೆಗಳನ್ನು (ಬ್ರೈಲ್ ಕಿಟ್) ಸರ್ಕಾರ ನೀಡಿದೆ
ನರಗುಂದ: ಸಮಾಜದಲ್ಲಿ ಮಾನವನು ಶಿಕ್ಷಣದಿಂದ ಮಾತ್ರ ಉತ್ತಮವಾದ ಉದ್ಯೋಗ, ಭವಿಷ್ಯ, ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ದರ್ಶಿನಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ನಂತರ ಅವರು ಮಾತನಾಡಿದರು. ಅಂಗವಿಕಲರಿಗೆ ದರ್ಶಿನಿ ಅರಿವು ಗ್ರಂಥಾಲಯ ಕೇಂದ್ರಗಳ ಮೂಲಕ ವಿಷಯ ಜ್ಞಾನ ನೀಡಿದರೆ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.ತಾಲೂಕಿನ 13 ಗ್ರಾಪಂ ಒಟ್ಟು 26 ಅರಿವು ಕೇಂದ್ರಗಳು ಪ್ರಾರಂಭವಾಗಿದ್ದು, ಆ ಅರಿವು ಕೇಂದ್ರಗಳಿಗೆ ಅಂಗವಿಕಲರ ಸಾಧನ ಸಲಕರಣೆಗಳನ್ನು (ಬ್ರೈಲ್ ಕಿಟ್) ಸರ್ಕಾರ ನೀಡಿದೆ. ಅವುಗಳ ಬಳಕೆ ಮಾಡುವ ವಿಧಾನ, ಅರಿವು ಕೇಂದ್ರದ ಮೇಲ್ವಿಚಾರಣೆ ಮಾಡುವ ಕುರಿತು ಗ್ರಾಪಂ ಅಧ್ಯಕ್ಷರಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿ ಪಡೆದುಕೊಂಡು ಗ್ರಾಪಂ ಆಡಳಿತ್ಮಾಕವಾಗಿ ಜಾರಿಗೆ ತರಬೇಕು ಎಂದರು.
ಕಾರ್ಯಾಗಾರದಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಶಿವಾನಂದ ಹಾದಿಮನಿ, ಗ್ರಂಥಪಾಲಕಿ ಲಲಿತಾ ಮುಳ್ಳೂರು, ಸಂಪನ್ಮೂಲ ವ್ಯಕ್ತಿಗಳಾದ ಟಿ.ಪಿ. ಗುಡ್ಡಿಮಠ, ಅಂಗವಿಕಲತೆಯುಳ್ಳ ಮಕ್ಕಳು ಎದುರಿಸುತ್ತಿರುವ ಅಡೆ-ತಡೆಗಳು, ವಿವಿಧ ಬಗೆಯ ಅಂಗವಿಕಲತೆ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016, ದರ್ಶಿನಿ ಅರಿವು ಗ್ರಂಥಾಲಯ ಕೇಂದ್ರಗಳ ಪರಿಚಯ, ಅರಿವು ಕೇಂದ್ರಗಳಲ್ಲಿ ಸುಗಮ ಹಾಗೂ ಅಡೆ-ತಡೆ ಮತ್ತು ಸಂಪನ್ಮೂಲದ ಮೂಲಗಳು, ಅಂಧತ್ವವುಳ್ಳ ಮಕ್ಕಳಿಗಾಗಿ ಪೂರೈಸಿರುವ ಸಹಾಯಕ ಸಾಧನಗಳ ಪರಿಚಯ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ, ಕೃಷ್ಣಮ್ಮ ಹಾದಿಮನಿ, 13 ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಪಂ ಸಹಾಯಕ ಲೆಕ್ಕಾಧಿಕಾರಿ ಪ್ರದೀಪ ಕದಂ ಇದ್ದರು.